ಮಹದಾಯಿ ವಿವಾದ: ಕರ್ನಾಟಕ, ಬೆಂಗಳೂರು ಬಂದ್ ಕುರಿತು ಬಿಜೆಪಿ, ಕಾಂಗ್ರೆಸ್ ನಾಯಕರ ಕೆಸರೆರಚಾಟ
ಮಹದಾಯಿ ವಿವಾದ ಇತ್ಯರ್ಥಕ್ಕಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ, ಬೆಂಗಳೂರು ಬಂದ್ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ...

Published On :
ಬೆಂಗಳೂರು: ಮಹದಾಯಿ ವಿವಾದ ಇತ್ಯರ್ಥಕ್ಕಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ, ಬೆಂಗಳೂರು ಬಂದ್ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಜ.25 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಫೆ.4ರಂದು ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಬಂದ್ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಆದರೆ, ಇದನ್ನು ಅಲ್ಲಗೆಳೆದಿರುವ ಕಾಂಗ್ರೆಸ್, ಬಿಜೆಪಿಯನ್ನು ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಬಂದ್ ಹಿನ್ನಲೆಯಲ್ಲಿ ಸಿದ್ದರಾಮಯ್ಯ ವಿರುದ್ದ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಬಂದ್ ಇದು ಎಂದು ಹೇಳಿದ್ದಾರೆ.
ಮೈಸೂರು ಭಾಗಕ್ಕೂ ಮಹದಾಯಿ ಬಂದ್ ಗೂ ಸಂಬಂಧವಿಲ್ಲ. ಅವರಾಗಿಯೇ ಬಸ್ ನಿಲ್ಲಿಸಿ ಕಿತಾಪತಿ ಮಾಡುತ್ತಿದ್ದಾರೆ. ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆಯೇ ಹೊರತು ಬಂದ್'ಗೆ ಬೆಂಬಲ ಇದೆ ಎಂದು ಹೇಳಿಲ್ಲ. ಯೋಜನೆಯಂತೆಯೇ ಬಿಜೆಪಿ ರ್ಯಾಲಿಯನ್ನು ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್'ಗೆ ಮುಖ್ಯಮಂತ್ರಿಗಳು ಬೆಂಬಲಿಸುವ ರೀತಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಇದೊಂದು ಪ್ರಾಯೋಜಿತ ಬಂದ್ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಾರೆ ಎಂದರೆ ಕಾಂಗ್ರೆಸ್ ನಾಯಕರಿಗೆ ನಡುಕ ಆರಂಭವಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕರ ಹೇಳಿಕೆಗೆ ತೀವ್ರವಾಗಿ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರಿಗೆ ಸಾಮಾನ್ ಜ್ಞಾನ, ಬುದ್ಧಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಬಿಜೆಪಿಯವರಿಗೆ ಮಾಡುವುದಕ್ಕೇನೂ ಕೆಲಸವಿಲ್ಲ. ಹೀಗಾಗಿ ಆಧಾರರಹಿತವಾಗಿ ಏನೇನೋ ಆರೋಪ ಮಾಡುತ್ತಿದ್ದಾರೆ. ಕನ್ನಡಪರ ಸಂಘಟನೆಗಳ ಮುಖಂಡರು, ವಾಟಾಳ್ ನಾಗರಾಜ್ ಅವರು ಸರ್ಕಾರ ಮಾತು ಕೇಳುತ್ತಾರಾ? ಈ ಹಿಂದೆ ಬಿಜೆಪಿ ಸರ್ಕಾರ ಇದಾದಾಗ ಅವರ ಕೇಳಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ನಾವೇನೂ ಅವರಿಗೆ ಹೋರಾಟ ಮಾಡುವಂತೆ ಹೇಳಇಲ್ಲ. ಬೇಕಾದರೆ ಬಿಜೆಪಿಯವರು ಹೋರಾಟಗಾರರ ಬಳಿ ಹೋಗಿ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡಲಿ ಎಂದು ಹೇಳಿದ್ದಾರೆ.
ಬಂದ್ ಮಾಡುವುದರಿಂದ ಸರ್ಕಾರಕ್ಕೆ ತಾನೇ ನಷ್ಟ, ತೊಂದರೆ? ಕಾನೂನು ಸುವ್ಯವಸ್ಥೆ, ಶಾಲಾ, ಕಾಲೇಜು ಬಂದ್ ಮಾಡಬೇಕಾಗುತ್ತದೆ ಎನ್ನುವ ಅಲ್ಪಜ್ಞಾನೂ ಬಿಜೆಪಿಗೆ ಇಲ್ಲವೇ? ಎಲ್ಲವನ್ನೂ ರಾಜಕೀಯ ಕನ್ನಡಕ ಹಾಕಿಕೊಂಡು ನೋಡಬಾರದು. ನಮಗೂ ಜ.25 ರಂದು ಕರೆ ನೀಡಿರುವ ಬಂದ್'ಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


