ಭ್ರಷ್ಟಾಚಾರ, ಒಡಕು ರಾಜಕೀಯದಿಂದ ಕರ್ನಾಟಕವನ್ನು 5 ವರ್ಷ ಹಿಂದಕ್ಕೆ ಹಾಕಿದೆ ಕಾಂಗ್ರೆಸ್: ಯೋಗಿ ಆದಿತ್ಯನಾಥ್
ಭ್ರಷ್ಟಾಚಾರ, ಒಡಕು ರಾಜಕೀಯ ಹಾಗೂ ಅಭಿವೃದ್ಧಿ ವಿರೋಧಿ ನೀತಿಗಳಿಂದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ 5 ವರ್ಷ ಹಿಂದಕ್ಕೆ ಹಾಕಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಆರೋಪಿಸಿದ್ದಾರೆ...

Published On :
ಬೆಂಗಳೂರು: ಭ್ರಷ್ಟಾಚಾರ, ಒಡಕು ರಾಜಕೀಯ ಹಾಗೂ ಅಭಿವೃದ್ಧಿ ವಿರೋಧಿ ನೀತಿಗಳಿಂದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ 5 ವರ್ಷ ಹಿಂದಕ್ಕೆ ಹಾಕಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಆರೋಪಿಸಿದ್ದಾರೆ.
ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಈ ದೇಶಕ್ಕೆ ಭಾರವಾಗಿದೆ. ಜಾತಿಗಳನ್ನು ಒಡೆಯುವುದರಲ್ಲಿ ಆ ಪಕ್ಷ ನಿರತವಾಗಿದೆ. ಭ್ರಷ್ಟಾಚಾರ, ಒಡಕು ರಾಜಕೀಯ ಮತ್ತು ಅಭಿವೃದ್ಧಿ ವಿರೋಧಿ ನೀತಿಗಳಿಂದಾಗಿ ಕರ್ನಾಟಕ ರಾಜ್ಯವನ್ನು 5 ವರ್ಷ ಹಿಂದಕ್ಕೆ ತಳ್ಳಿದೆ. ಭ್ರಷ್ಟ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂನಂತೆ ಬಳಕೆ ಮಾಡಿಕೊಳ್ಳುತ್ತಿದೆ.
ಗೋಮಾಂಸ ಸೇವನೆಗೆ ಬೆಂಬಲ ನೀಡಿ ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡರೆ ಸಾಲದು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದು, ಆದರೆ, ಕಾಂಗ್ರೆಸ್ ಸರ್ಕಾರ ಆ ಕಾನೂನನ್ನು ಕೈಬಿಟ್ಟಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಮುಖ್ಯಮಂತ್ರಿಗಳ ನಡುವೆ ಸಂಪರ್ಕ ಪ್ರಕ್ರಿಯೆಗಳಿಲ್ಲದೆ ಕರ್ನಾಟಕ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿಲ್ಲ.
ಉತ್ತರಪ್ರದೇಶದ ಗೋರಖನಾಥ ಪೀಠಕ್ಕೂ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಧರ್ಮಸ್ಥಳದ ಮಂಜುನಾಥನೇ ಗೋರಖನಾಥ, ಆದಿಚುಂಚನಗಿರಿ ಮಠ ಸಹನಾಡ ಪರಂಪರೆಯ ಮಠವಾಗಿದೆ. ಭಾರತದ ಇಂತಹ ಏಕೀಕೃತ ಅಂಶಗಳನ್ನು ಕಾಂಗ್ರೆಸ್ ಯಾವಾಗಲೂ ನಿರ್ಲಕ್ಷಿಸುತ್ತದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಅವರು ಹುಟ್ಟುಹಾಕುತ್ತಿದ್ದು, 5 ವರ್ಷಗಳಲ್ಲಿ ಆರ್'ಎಸ್ಎಸ್ ಹಾಗೂ ಸಂಘ ಪರಿವಾರಕ್ಕೆ ಸೇರಿದ 22 ಮಂದಿಯನ್ನು ಹತ್ಯೆ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ರಾಜ್ಯದಲ್ಲಿ 10 ತಿಂಗಳಲ್ಲಿ ಕೋಮು ಘರ್ಷಣೆಗಳಾವುದೂ ಸಂಭವಿಸಿಲ್ಲ.
ಮುಸ್ಲಿಂ ಮಹಿಳೆಯ ಮೇಲೆ ದೌರ್ಜನ್ಯವೆಸಗುವ ತ್ರಿವಳಿ ತಲಾಖ್ ವಿರುದ್ಧ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಾಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗದ್ದಲವನ್ನು ಸೃಷ್ಟಿಸಿತ್ತು. ಕಾಂಗ್ರೆಸ್ ಮುಸ್ಲಿಮರು ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧದ ಪಕ್ಷವಾಗಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯಗೆ ಹಿಂದುಗಳ ನೆನಪಾಗಿದೆ; ಯೋಗಿ ಆದಿತ್ಯನಾಥ್
ಸಿಎಂ ಸಿದ್ದರಾಮಯ್ಯ ಅವರು ತಾವೂ ಒಬ್ಬ ಹಿಂದು ಎಂದು ಹೇಳಿಕೊಂಡಿದ್ದಾರೆ. ಹಿಂದೂಗಳ ಶಕ್ತಿಯನ್ನು ಅವರು ನೋಡಿದ್ದಾರೆ. ಇದೀಗ ಅವರಿಗೆ ಅವರ ಧರ್ಮದ ಅರಿವಾಗಿದೆ. ಈ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಅವರಿಗೆ ಮಂದಿರುಗಳು ಹಾಗೂ ಹಿಂದುತ್ವ ನೆನಪಾಗಿತ್ತು. ಇದೇ ರೀತಿ ಕರ್ನಾಟಕದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಇಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುತ್ವ ನೆನಪಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಅವರು ಲೇವಡಿ ಮಾಡಿದ್ದಾರೆ.
ಬಳಿಕ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ಭೈರತಿ ಬಸವರಾಜು ಅವರು ಚುನಾವಣಾ ವಂಚನೆ ಮಾಡುತ್ತಿದ್ದು, 2ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


