ನಾನು ಕುಮಾರಸ್ವಾಮಿಗೆ ಒಂದೇ ಕ್ಷೇತ್ರದಿಂದ ಸ್ಪರ್ಧಿಸಲು ಹೇಳಿದ್ದೇನೆ: ಮಾಜಿ ಪ್ರಧಾನಿ ದೇವೇಗೌಡ
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖ್ಯಸ್ಥ ಹೆಚ್.ಡಿ.ಕುಮಾರಸ್ವಾಮಿಯವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ....

Published On :
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖ್ಯಸ್ಥ ಹೆಚ್.ಡಿ.ಕುಮಾರಸ್ವಾಮಿಯವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಯೋಜನೆ ಅವರ ತಂದೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಸರಿ ಕಾಣುತ್ತಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ಕೂಡ ಹೊಂದಿದ್ದಾರೆ.ಅದರ ಜೊತೆ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ವಿಧಾನಸಭಾ ಕ್ಷೇತ್ರವೊಂದರಲ್ಲಿ ಕೂಡ ಚುನಾವಣೆಗೆ ನಿಲ್ಲುವ ಅಭಿಲಾಷೆ ಹೊಂದಿದ್ದಾರೆ. ''ಆದರೆ ನಾನು ಅವರಿಗೆ ಯಾವುದಾದರೂ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವಂತೆ ಸಲಹೆ ನೀಡಿದ್ದೇನೆ, ಅದು ದಕ್ಷಿಣ ಕರ್ನಾಟಕದಿಂದ ಆದರೆ ಉತ್ತಮ'' ಎಂದು ನಿನ್ನೆ ದೇವೇಗೌಡರು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ತಮ್ಮ ಮತ್ತೊಬ್ಬ ಪುತ್ರ ಹೆಚ್.ಡಿ.ರೇವಣ್ಣ ಅವರ ಬಗ್ಗೆ ಕೂಡ ಮಾತನಾಡಿದ ದೇವೇಗೌಡರು, ರೇವಣ್ಣ ಕೂಡ ಹಾಸನ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ ಎಂದರು. ರೇವಣ್ಣ ಪ್ರಸ್ತುತ ಹೊಳೆನರಸೀಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಕೂಡ ರಾಜ್ಯದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಪ್ರಜ್ವಲ್ ರೇವಣ್ಣ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದರು. ''ಈ ವಿಚಾರ ಕುರಿತು ರೇವಣ್ಣ ಈಗಾಗಲೇ ತಮ್ಮ ನಿಲುವನ್ನು ತಿಳಿಸಿದ್ದಾರೆ. ಪ್ರಜ್ವಲ್ ಹೆಚ್ಚು ಕೆಲಸ ಮಾಡಿ ಅನುಭವ ಪಡೆದುಕೊಳ್ಳಬೇಕಾಗಿದೆ''ಎಂದರು.
ಕರ್ನಾಟಕದಲ್ಲಿ ಕುಮಾರಸ್ವಾಮಿ ಪರ ಅಪಾರ ಜನರು ಒಲವು ವ್ಯಕ್ತಪಡಿಸಿದ್ದು, ಜೆಡಿಎಸ್ ಗೆ ಇನ್ನೊಮ್ಮೆ ಅಧಿಕಾರ ನೀಡುವ ಮನಸ್ಸಿನಲ್ಲಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ತಿಂಗಳು ಕೊನೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಲಿದೆ ಎಂದು ದೇವೇಗೌಡ ತಿಳಿಸಿದ್ದಾರೆ.
ಪಕ್ಷವನ್ನು ಬಲಪಡಿಸಲು ಜೆಡಿಎಸ್ ಸಾಮೂಹಿಕ ಸಂಪರ್ಕ ಕಾರ್ಯಕ್ರಮವನ್ನು ಆರಂಭಿಸಲಿದೆ. ಇಡೀ ರಾಜ್ಯದಲ್ಲಿ ಸುತ್ತಾಡಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು 6 ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕ ರ್ಯಾಲಿಗಳಲ್ಲಿ ಖುದ್ದು ದೇವೇಗೌಡರು ಭಾಗವಹಿಸುತ್ತಿದ್ದಾರೆ.
ದೇಶದಲ್ಲಿ ಮುಸ್ಲಿಂರಲ್ಲಿ ಅಭದ್ರತೆ ಕಾಡುತ್ತಿದೆ ಎಂಬ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಮಾತಿಗೆ ದನಿಗೂಡಿಸಿದ ದೇವೇಗೌಡ, ದೇಶದ ಹಲವು ಭಾಗಗಳಲ್ಲಿ ಮುಸ್ಲಿಂರ ಮೇಲೆ ಹಲ್ಲೆ ನಡೆಯುತ್ತಿರುವುದರಿಂದ ಅವರಲ್ಲಿ ಅಸುರಕ್ಷತೆ ಭಾವ ಕಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚರ್ಚ್ ಗಳ ಮೇಲಿನ ದಾಳಿ ಕೂಡ ಹೆಚ್ಚಾಗಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


