ರಾಜಕೀಯ

ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿದ ಜಾತಿ ಗಣತಿ

ಜಾತಿ ಗಣತಿಯಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ಸಮಾಜಕ್ಕೂ ಸೇರುವುದಿಲ್ಲ ಎನ್ನುವವರಿಗೂ ಎಂದು ದಾಖಲಿಸುವುದಕ್ಕೂ ಅವಕಾಶವಿದ್ದು...

ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿದ ಜಾತಿ ಗಣತಿ
ಎಚ್, ಆಂಜನೇಯ
Published On :

ವಿಧಾನಪರಿಷತ್ತು: ಜಾತಿ ಗಣತಿಯಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ಸಮಾಜಕ್ಕೂ ಸೇರುವುದಿಲ್ಲ ಎನ್ನುವವರಿಗೂ ಎಂದು ದಾಖಲಿಸುವುದಕ್ಕೂ ಅವಕಾಶವಿದ್ದು, ಅದಕ್ಕಾಗಿಯೇ ಒಂದು ಕಾಲಂ ನಿಗದಿ ಮಾಡಲಾಗಿದೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಸದನದಲ್ಲಿ ಜರೂರು ವಿಚಾರದ ಬಗ್ಗೆ ನಡೆದ ವಿಶೇಷ ಚರ್ಚೆ ವೇಳೆ ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಸಚಿವರು ಸವಿವರ ಉತ್ತರ ನೀಡಿದರು. ಜಾತಿ ಗಣತಿಯಲ್ಲಿ ಗಣತಿದಾರರು ಪ್ರತಿ ಮನೆಗೂ ಭೇಟಿ ನೀಡಿ ಯಾವ ಜಾತಿ ಮತ್ತು ಸಾಮಾಜಿಕ, ಶೈಕ್ಷಣಿಕ ವಿವರಗಳನ್ನು ಬಯಸುವ 55 ಪ್ರಶ್ನೆಗಳನ್ನು ಕೇಳುತ್ತಾರೆ. ಇಂಥ ಸಂದರ್ಭದಲ್ಲಿ ವ್ಯಕ್ತಿ ಬಯಸಿದ ಜಾತಿಯನ್ನು ಹೇಳಿ ದಾಖಲಿಸಬಹುದು.

ಬೇಕಿದ್ದರೆ ತಾನು ಯಾವುದೇ ಜಾತಿ ಅಲ್ಲ. ಯಾವುದೇ ಧರ್ಮಕ್ಕೂ ಸೇರುವುದಿಲ್ಲ ಎಂದೂ ಹೇಳಬಹುದಾಗಿದೆ ಎಂದರು. ಇದಕ್ಕೂ ಮುನ್ನ ಜಾತಿ ಗಣತಿಯಲ್ಲಿ ಸಿದ್ಧಪಡಿಸಿರುವ ಮಾಹಿತಿ ಕೈಪಿಡಿಯಲ್ಲಿ ಅನೇಕ ಹೊಸ ಜಾತಿಗಳನ್ನು ಸೇರಿಸಲಾಗಿದೆ. ಅಲ್ಲದೆ ಒಂದೇ ಜಾತಿಯನ್ನು ವಿವಿಧ ಹೆಸರಿನಲ್ಲಿ ಗುರುತಿಸಿ ಅವುಗಳಿಗೆ ಪ್ರತ್ಯೇಕ ಜಾತಿ ಎನ್ನುವಂತೆ ಕೋಡ್‍ಗಳನ್ನು ನೀಡಲಾಗಿದೆ ಎಂದು ಬಹುತೇಕ ಸದಸ್ಯರು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಂಜನೇಯ, ಈಗಾಗಲೇ ನಡೆದಿರುವ ಸಿದ್ಧತೆಯೇ ಅಂತಿಮವಲ್ಲ. ಈಗಲೂ ಕಾಲ ಮಿಂಚಿಲ್ಲ. ಗಣತಿ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಇನ್ನೂ ಅವಕಾಶವಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ. ಆಗ ಎಲ್ಲಾ ಆಕ್ಷೇಪಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಪರಿಹಾರ ಸೂಚಿಸಲಾಗುತ್ತದೆ. ಆಗಲೂ ಪರಿಹಾರವಾಗದಿದ್ದರೆ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಸಭೆ ನಡೆಸಿ ಎಲ್ಲಾ ಗೊಂದಲಗಳನ್ನು ನಿವಾರಿಸಲಾಗುತ್ತದೆ ಎಂದರು.

1931ರಲ್ಲಿ ನಡೆದಿದ್ದ ಜಾತಿ ಗಣತಿ ಅನೇಕ ದಶಕಗಳ ನಂತರ ರಾಜ್ಯದಲ್ಲಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಯಾರಿಗೂ ಅನ್ಯಾಯ ಆಗಬಾರದು. ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಆದ್ದರಿಂದ ಗಣತಿ ಆರಂಭಕ್ಕೂ ಮುನ್ನ ಆಕ್ಷೇಪಗಳನ್ನು ಸ್ವೀಕರಿಸಲು ಇಲಾಖೆ ಮುಕ್ತವಾಗಿದೆ ಎಂದು ಆಂಜನೇಯ ಹೇಳಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಈಶ್ವರಪ್ಪ  ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದವರು ಸೇರಿದಂತೆ ಒಟ್ಟಾರೆ ಇರುವುದೇ 913 ಜಾತಿಗಳು. ಆದರೆ ಸರ್ಕಾರ ಜನಾಂಗದ ಮುಖಂಡರು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ಅನೇಕ ಹೊಸ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾದರೆ ಅಧಿಕೃತ ಜಾತಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ಇದನ್ನು ಒಪ್ಪಿಕೊಳ್ಳದ ಆಂಜನೇಯ, ರಾಜ್ಯದಲ್ಲಿ ಒಟ್ಟಾರೆ 913 ಅಧಿಕೃತ ಜಾತಿಗಳಿದ್ದು, ಇದರೊಂದಿಗೆ ಅನೇಕರು ಅರ್ಜಿಗಳನ್ನು ಸಲ್ಲಿಸಿರುವ ಪರಿಣಾಮ ಕೆಲವು ಹೊಸ ಜಾತಿಗಳು ಸೇರಿಕೊಂಡಿವೆ. ಇದರಿಂದಾಗಿ ಜಾತಿಗಳ ಪಟ್ಟಿಯಲ್ಲಿ ಈಗ 1503 ಜಾತಿಗಳಿವೆ. ಈಗ ನಡೆಯಲಿರುವ ಗಣತಿಯಲ್ಲಿ ಈ ಎಲ್ಲಾ ಜಾತಿಗಳ ಬಗ್ಗೆ ಗಣತಿದಾರರಿಗೆ ಮಾಹಿತಿ ನೀಡಲಾಗಿದೆ. ಆದರೆ ಗಣತಿ ಪತ್ರದಲ್ಲಿ ದಾಖಲಿಸುವಾಗ ಅಧಿಕೃತ ಪಟ್ಟಿಯಲ್ಲಿರುವ ಜಾತಿಗೇ ಸೇರಿಸ ಲಾಗುತ್ತದೆ. ಆದ್ದರಿಂದ ಈ ಬಗ್ಗೆ ಗೊಂದಲಕ್ಕೀಡಾಗುವ ಅಗತ್ಯವಿಲ್ಲ ಎಂದರು. ಆರಂಭದಲ್ಲಿ ಸದಸ್ಯರಾದ ಸಿದ್ದರಾಮಣ್ಣ, ಎಂ.ಡಿ. ಲಕ್ಷ್ಮಿಮೀನಾರಾಯಣ, ವಿ.ಎಸ್. ಉಗ್ರಪ್ಪ, ಡಿ.ಎಸ್.ವೀರಯ್ಯ, ರೇವಣ್ಣ ಸೇರಿದಂತೆ ಅನೇಕ ಸದಸ್ಯರು ಜಾತಿ ಗಣತಿ ಗೊಂದಲಗಳನ್ನು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.