ರಾಜಕೀಯ

ಅಧಿವೇಶನಕ್ಕೆ ಮುನ್ನ ಪಾದಯಾತ್ರೆ

ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳಗಾವಿ ಅಧಿವೇಶನದ...

ಅಧಿವೇಶನಕ್ಕೆ ಮುನ್ನ ಪಾದಯಾತ್ರೆ
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳಗಾವಿ ಅಧಿವೇಶನದ ಪೂರ್ವಭಾವಿಯಾಗಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹುಬ್ಬಳ್ಳಿಯಿಂದ ಜೂನ್ 25ರಂದು ಬೆಳಗ್ಗೆ ಆರಂಭವಾಗುವ ಯಾತ್ರೆ 29ರಂದು ಬೆಳಗಾವಿಯಲ್ಲಿ ಕೊನೆಗೊಳ್ಳಲಿದೆ. 103 ಕಿಲೋ ಮೀಟರ್ ನ ಈ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು, ಶಾಸಕರು ಪಾಲ್ಗೊಳ್ಳುತ್ತಾರೆ. ರೈತರು ಪಾಲ್ಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ವೈಯಕ್ತಿಕ ಪ್ರತಿಷ್ಠೆಗಲ್ಲ: ಯಾವುದೇ ವೈಯಕ್ತಿಕ ಪ್ರತಿಷ್ಠೆಗೋ ಅಥವಾ ನಮ್ಮ ಲಾಭಕ್ಕೆ ಈ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಪಾದಯಾತ್ರೆ ಎಷ್ಟು ಕಷ್ಟ ಎಂಬುದು ಗೊತ್ತಿದೆ. ಆದರೆ, ರೈತನ ಕಷ್ಟದ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಣ್ಣು ತೆರೆಸಲು ಈ ಪ್ರಯತ್ನ ಎಂದ ಅವರು ಎರಡು ವರ್ಷದ ಸರ್ಕಾರದ ಆಡಳಿತ ವೈಖರಿಯನ್ನು ಗಮನಿಸಿದರೆ ಮತ್ತೆ ವಿಧಾನಸಭೆ
ಕಲಾಪದಲ್ಲಿ ರೈತರ ವಿಷಯಗಳನ್ನು ಎಷ್ಟೆ ಹೃದಯಕ್ಕೆ ನಾಟುವ ರೀತಿ ಇಟ್ಟರೂ ಹಾರಿಕೆಯ ಉತ್ತರವೇ ಇರುತ್ತದೆ. ಹೀಗಾಗಿ ರೈತರಿಗೆ ದನಿಯಾಗಿ ನಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರರಿಗೆ ಹಣ ಪಾವತಿಯಾಗದ ವಿಚಾರದಲ್ಲಿ ಸಹಕಾರ ಸಚಿವರು ಮತ್ತು ಮುಖ್ಯಮಂತ್ರಿ ಈವರೆಗೆ ನೂರು ಭರವಸೆ ನೀಡಿರಬಹುದು. ರೈತರಿಗೆ ಹಣ ಪಾವತಿ ಮಾಡದೇ ಇದ್ದರೆ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ, ಕಾರ್ಖಾನೆ ಬೀಗ ಜಡಿಯುತ್ತೇವೆಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ರೈತರಿಗೆ ಹಣ ಕೊಡಿಸಲಾಗಿಲ್ಲ ಎಂದು ಛೇಡಿಸಿದರು. ಎರಡು ವರ್ಷಗಳ ಸುಮಾರು 4,600 ಕೋಟಿ ರುಪಾಯಿ ಕಬ್ಬು ಬೆಳೆಗಾರರಿಗೆ ಪಾವತಿಯಾಗಬೇಕಾಗಿದೆ.
ಕಬ್ಬು ಸರಬರಾಜಾದ 14 ದಿನಗಳಲ್ಲಿ ಕಾರ್ಖಾನೆ ಹಣ ಪಾವತಿಸದೇ ಇದ್ದರೆ ಶೇ.14ರ ಬಡ್ಡಿ ದರ ಸೇರಿಸಿ ಹಣ ಪಾವತಿ ಮಾಡಬೇಕಾಗುತ್ತದೆ. ಈ ಕಾನೂನು ಇದ್ದರೂ, ಅದು ಅನುಷ್ಠಾನವಾಗದೇ ಕಾನೂನು ರಚನೆಯಾದ ಕೊಠಡಿಯಿಂದ ಹೊರಗೇ ಬಂದಿಲ್ಲ ಎಂದು ಕಟಕಿದರು.
ಕೇಂದ್ರ ಸರ್ಕಾರದ ನೀತಿಯಿಂದಾಗಿ ರೇಷ್ಮೆ ಬೆಳೆಗಾರರು ಸಂಕಟ ಪಡುತ್ತಿದ್ದಾರೆ. ಚೀನಾ ರೇಷ್ಮೆ ಆಮದಿಗೆ ಸಹಕರಿಸುವ ಬಿಜೆಪಿಯವರ ಮೇಕ್ ಇನ್ ಇಂಡಿಯಾ ಏನೆಂಬುದು ಅರ್ಥವಾಗುತ್ತದೆ ಎಂದು ಆರೋಪಿಸಿದರು.

ಟ್ರ್ಯಾಕ್ಟರ್ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಂಗಲ್ಲ!
ಮುಖ್ಯಮಂತ್ರಿ, ಕೃಷಿ ಸಚಿವರು ಫೋಟೋಗಾಗಿ ಟ್ರ್ಯಾಕ್ಟರ್ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಹಾಗೆ ಅಲ್ಲ, ಹಳ್ಳಿಕಡೆಗೂ ಹೋಗಲಿ ಎಂದು ಎಚ್.ಡಿ. ಕುಮಾರಸ್ವಾಮಿ ಸವಾಲೆಸೆದಿದ್ದಾರೆ. ಸೂಟುಬೂಟು ಬಿಟ್ಟು ಹಳ್ಳಿಕಡೆಗೆ ಬನ್ನಿ ಎಂದು ಪ್ರಧಾನಿಗೆ ಸಲಹೆ ನೀಡುವ ರಾಹುಲ್ ಗಾಂಧಿಯವರು ನಮ್ಮ ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರಿಗೂ ಹಳ್ಳಿಕಡೆ ಹೋಗಿಬರುವಂತೆ ಸಲಹೆ ನೀಡಲಿ ಎಂದು ಅವರು ವ್ಯಂಗ್ಯವಾಡಿದರು. ನಾನು ಗ್ರಾಮವಾಸ್ತವ್ಯ ಮಾಡಿದ್ದಕ್ಕೆ ಟೀಕಿಸಿದ್ದರು, ಇವರು ಗ್ರಾಮ ವಾಸ್ತವ್ಯ ಬೇಡ, ಬೆಳಗಿನ ಹೊತ್ತಾದರೂ ಹೋಗಿಬರಲಿ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.