ಬಿಬಿಎಂಪಿ ಹೊಸ ಮೀಸಲಿಗೆ ಆದೇಶಿಸಿದರೆ ಚುನಾವಣೆ ದೂರ
ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಹೈಕೋರ್ಟ್ ಯಾವುದೇ ಆದೇಶ...

ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಹೈಕೋರ್ಟ್ ಯಾವುದೇ ಆದೇಶ ಹೊರಡಿಸಿದರೂ ಚುನಾವಣೆ ಪ್ರಕ್ರಿಯೆ ಮುಂದೂಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೈಕೋರ್ಟ್‍ಗೆ ತಿಳಿಸಿದೆ.2001ರ ಜನಗಣತಿ ಆಧರಿಸಿ ಚುನಾವಣೆ ನಡೆಸಬೇಕು ಎದು ನ್ಯಾ. ನಾಗರತ್ನ ಅವರಿದ್ದ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಪರಿಶಿಷ್ಟ ಜಾತಿ ಮತಿತು ಪಂಗಡಗಳ ಆಯೋಗ ಹೈಕೋರ್ಟ್‍ಗೆ ಹೊಸ ತಕರಾರು ಅರ್ಜಿ ಸಲ್ಲಿಸಿತ್ತು. ಇದಕ್ಕೆ ಉತ್ತರವಾಗಿ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ದಾಖಲಿಸಿತ್ತು. ಬುಧವಾರ
ಅರ್ಜಿ ವಿಚಾರಣೆ ವೇಳೆ ಈ ಕುರಿತು ಚುನಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದರು. ಸದ್ಯ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಕೇವಲ ಚುನಾವಣೆ ದಿನಾಂಕ ಪ್ರಕಟಿಸುವುದಷ್ಟೇ ಬಾಕಿ ಇದೆ. ಜುಲೈ ಕೊನೆ ವಾರದಲ್ಲಿ ಅಂದರೆ ಸುಮಾರು ಜುಲೈ 25ರ ಒಳಗೆ ಚುನಾವಣೆ ನಡೆಸಲು ಸಿದ್ಧರಿದ್ದೇವೆ . ಈ ಹಂತದಲ್ಲಿ ಹೈಕೋರ್ಟ್ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದರೆ, ಚುನಾವಣಾ ಪ್ರಕ್ರಿಯೆಗೆ ಮತ್ತಷ್ಟು ಕಾಲವಾಕಾಶ ಬೇಕಾಗುತ್ತದೆ. ಸರ್ಕಾರವೇನೋ ಮೀಸಲು ಪಟ್ಟಿ ಮತ್ತು ವಾರ್ಡ್ ಮರು ವಿಂಗಡಣೆ ಕುರಿತು ಅಧಿಸೂಚನೆ ಹೊರಡಿಸಿ ಕೈತೊಳೆದುಕೊಳ್ಳುತ್ತದೆ. ಆದರೆ, ಇದರಿಂದ ಆಯೋಗದ ಮೇಲೆ ಹೆಚ್ಚು ಒತ್ತಡ ಬೀರಲಿದ್ದು, ಸುಪ್ರೀಂ ಕೋರ್ಟ್‍ನ ಆದೇಶ ಉಲ್ಲಂಘನೆ ಮಾಡಿದ ಹಣೆಪಟ್ಟಿಯನ್ನು ಆಯೋಗ ಹೊರಬೇಕಾಗುತ್ತದೆ ಎಂದು ಪೀಠದ ಎದುರು ಆಯೋಗದ ಅಸಹಾಯಕತೆ ವಿವರಿಸಿದರು. ವಿಚಾರಣೆ ನಡೆಸಿದ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ವಾರ್ಡ್ ಮರುವಿಂಗಡಣೆ ನಂತರ ಚುನಾವಣೆ ಪ್ರಕ್ರಿಯೆಗೆ ಪೂರ್ಣಗೊಳಿಸಲು ಆಯೋಗಕ್ಕೆ ಎಷ್ಟು ಕಾಲಾವಕಾಶ ಬೇಕು ಎಂದು ಪ್ರಶ್ನಿಸಿತು. ಇದಕ್ಕೆಪ್ರತಿಕ್ರಿಯಿಸಿದ ಫಣೀಂದ್ರ, ಮತದಾರರ ಪಟ್ಟಿ ಸೇರಿ ವಿವಿಧ
ಕಾರ್ಯಗಳನ್ನು ಪೂರ್ಣಗೊಳಿಸಬೇಕಾದರೆ ಕನಿಷ್ಠ ಮೂರೂವರೆ ತಿಂಗಳಾದರೂ ಬೇಕಾಗುತ್ತದೆ. ಈ ಹಂತದಲ್ಲಿ ಮರುವಿಂಗಡಣೆ ಕುರಿತು ಆದೇಶ ಹೊರಡಿಸಿದರೆ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವುದು ಕಷ್ಟವಾಗುತ್ತದೆ ಎಂದರು. ಏಕಸದಸ್ಯ ಪೀಠದ ಆದೇಶದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನ್ಯಾಯವಾಗುತ್ತದೆ ಎಂದು ಅರ್ಜಿ ದಾಖಲಾಗಿದೆ. ಆದರೆ ವಾಸ್ತವವಾಗಿ ಅವರ ಹಕ್ಕಿಗೆ ಯಾವುದೇ ರೀತಿ ಧಕ್ಕೆ ಆಗುವುದಿಲ್ಲ. ಒಮ್ಮೆ ವಾರ್ಡ್‍ಗಳ ಮರುವಿಂಗಡಣೆಗೆ ಸರ್ಕಾರ ಕೈ ಹಾಕಿದ್ದೇ ಆದಲ್ಲಿ ಚುನಾವಣೆ ನಡೆಸುವುದು ಮರೆತುಬಿಡಬೇಕಾಗುತ್ತದೆ
ಎಂದು ತಿಳಿಸಿದರು.
ಸರ್ಕಾರಕ್ಕೆ ಛೀಮಾರಿ: ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಾದ ಮಂಡಿಸಿ, 2011ರ ಜನಗಣತಿ ಆಧರಿಸಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ನಿಗದಿಪಡಿಸುವಂತೆ ಕೋರಿ ಪೀಠದಿಂದ ಸ್ಪಷ್ಟೀಕರಣ ಪಡೆಯಲು ಸರ್ಕಾರ ಅರ್ಜಿಯಲ್ಲಿ ಕೋರಿದೆ. ಸಂವಿಧಾನದ ಆಶಯದಂತೆ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸುತ್ತದೆ . ಆದ್ದರಿಂದ ಪೀಠದಿಂದ ಈ ಕುರಿತು ಸ್ಪಷ್ಟೀಕರಣ ಕೇಳಲು ಬಯಸುತ್ತಿರುವುದಾಗಿ ವಾದ ಮಂಡಿಸಿದರು. ಸರ್ಕಾರದ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಆರಂಭದಲ್ಲಿ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅರ್ಜಿ ದಾಖಲಾದಾಗ ಸರ್ಕಾರ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿ ಕುರಿತು ತುಟಿ ಬಿಚ್ಚಲಿಲ್ಲ. ವಿಭಾಗೀಯ ಪೀಠದಲ್ಲಿ ಮೇಲ್ಮನವಿ ದಾಖಲಾದ ವೇಳೆ ಏಕಸದಸ್ಯ ಪೀಠ ತಮ್ಮ ವಾದ ಮಂಡಿಸಲು ಅವಕಾಶ ನೀಡಿಲ್ಲ ಎಂದು ವಾದಿಸಿದ್ದೀರಿ. ಅರ್ಜಿ ದಾಖಲಾದಾಗಲೇ ಸರ್ಕಾರ ಈ ವಿವಾದವನ್ನು ಪೀಠದ ಗಮನಕ್ಕೆ ತಂದು ಬಗೆಹರಿಸಿ ಕೊಳ್ಳಬಹುದಾಗಿತ್ತು. ಅಂದು ವಿಚಾರಣೆ ವೇಳೆ ಸ್ವತಃ ಅಡ್ವೊಕೇಟ್ ಜನರಲ್ ಅವರು ಒಂದು ದಿನ ಮಾತ್ರ
ಪೀಠದ ಮುಂದೆ ವಾದ ಮಂಡಿಸಿದರು. ನಂತರ ಮುಚ್ಚಳಿಕೆ ನೀಡಿ ಮರೆಯಾದರು. ಅಂದು ಕೇವಲ ತ್ರಿಭಜನೆ ಕುರಿತು ವಾದ ಮಂಡಿಸಿದ್ದರೇ ಹೊರತು ಇನ್ಯಾವ ಪ್ರಶ್ನೆಯನ್ನು ರಾಜ್ಯ ಸರ್ಕಾರ ಎತ್ತಲಿಲ್ಲ. ಆದರೆ ಸರ್ಕಾರ ಮೇಲ್ಮನವಿ ದಾಖಲಿಸಬೇಕಾದರೆ ಏಕದಸಸ್ಯ ಪೀಠ ತಮ್ಮ ವಾದ ಪರಿಗಣಿಸಿಲ್ಲ ಎಂದು ತಿಳಿಸಿದ್ದೀರಿ ಎಂದು ಸರ್ಕಾರದ ನಡೆಗೆ
ಚಾಟಿ ಬೀಸಿತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಪರ ಹಿರಿಯ ವಕೀಲ ಉದಯ್ ಹೊಳ್ಳ, 2001ರ ಜನಗಣತಿ ಆಧಾರದಲ್ಲಿ ಮೀಸಲು ಪಟ್ಟಿ ಮಾಡಿದ್ದೇ ಆದಲ್ಲಿ, ಎಸ್‍ಸಿ ಮತ್ತು ಎಸ್‍ಟಿ ಪಂಗಡಕ್ಕೆ ಸೇರಿದ ಜನಸಂಖ್ಯೆ ಹೆಚ್ಚಿದ್ದರೂ ಸಹ ಈ ಪಂಗಡಕ್ಕೆ ಸೇರಿದ ಜನ ಸೀಟು ಗಿಟ್ಟಿಸಿಕೊಳ್ಳುವುದರಿಂದ ವಂಚಿತರಾಗುತ್ತಾರೆ ಎಂದು ವಾದಿಸಿದರು. ವಾದ ವಿವಾದ ಆಲಿಸಿದ ಪೀಠ, ಈ ಅರ್ಜಿ ವಿಚಾರಣೆಗೆ ಹೇಗೆ ಯೋಗ್ಯ ಎಂಬುದರ ಕುರಿತು ಕಾನೂನಿನ ಅಂಶದ ಮೇಲೆ ವಾದ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿವಿಚಾರಣೆ ಗುರುವಾರಕ್ಕೆ ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


