ಲೋಕಾಯುಕ್ತ ರೈಡ್ ಸತ್ಯ, ಯಂತ್ರಾನೂ ಸಿಕ್ತು, ಏನೀಗ?
'ನಮ್ಮನೆ ಮೇಲೆ ಲೋಕಾಯುಕ್ತ ರೈಡ್ ಮಾಡಿದ್ದೂ ಹೌದು, ಅವರಿಗೆ ನೋಟು ಎಣಿಸುವ ಯಂತ್ರ ಸಿಕ್ಕಿದ್ದೂ ಹೌದು. ಏನಿವಾಗ? ನಾನೊಬ್ಬ ವ್ಯವಹಾರಸ್ಥ, ಅನೇಕ ಏಜೆನ್ಸಿ ಇದೆ...

ವಿಧಾನ ಪರಿಷತ್: 'ನಮ್ಮನೆ ಮೇಲೆ ಲೋಕಾಯುಕ್ತ ರೈಡ್ ಮಾಡಿದ್ದೂ ಹೌದು, ಅವರಿಗೆ ನೋಟು ಎಣಿಸುವ ಯಂತ್ರ ಸಿಕ್ಕಿದ್ದೂ ಹೌದು. ಏನಿವಾಗ? ನಾನೊಬ್ಬ ವ್ಯವಹಾರಸ್ಥ, ಅನೇಕ ಏಜೆನ್ಸಿ ಇದೆ.
ಪ್ರತಿ ದಿನ ಬರುವ ಹಣವನ್ನು ಕೈಯಲ್ಲಿ ಎಣಿಸಿಕೊಂಡು ಕೂರಲು ಸಾಧ್ಯವೇ? ಐದು ಸಾವಿರ ರುಪಾಯಿ ಮೌಲ್ಯದ ಕೈ ಅಗಲದ ಪುಟ್ಟ ಯಂತ್ರ ಇಟ್ಟುಕೊಂಡಿದ್ದೇನೆ. ಅದನ್ನು ನೋಡಬೇಕೆಂದರೆ ಸದನದಲ್ಲಿ ಹಾಜರುಪಡಿಸುತ್ತೇನೆ... ನಾನೇನು ನೋಟು ಪ್ರಿಂಟ್ ಮಾಡುವ ಯಂತ್ರವನ್ನೇನೂ ಇಟ್ಟುಕೊಂಡಿಲ್ಲ'. ಹೀಗೆಂದು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ಸದಸ್ಯ ವಿ.ಎಸ್. ಉಗ್ರಪ್ಪನವರ ಮೇಲೆ ಉಗ್ರರಾಗಿ ಉತ್ತರಿಸಿದ ಪ್ರಸಂಗ ಶುಕ್ರವಾರ ನಡೆಯಿತು.
ಈ ಘಟನೆಗೆ ಕಾರಣವಾಗಿದ್ದು, ರಾಜ್ಯಪಾಲರು ಲೋಕಾಯುಕ್ತಕ್ಕೆ ಪತ್ರ ಬರೆದ ವಿಚಾರವನ್ನು ಈಶ್ವರಪ್ಪ ಪ್ರಸ್ತಾಪಿಸಿದಾಗ. ಭ್ರಷ್ಟ ಅಧಿಕಾರಿಗಳನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ. ಈ ವಿಚಾರವನ್ನೂ
ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ ಎಂಬ ಅಂಶ ದಿನಪತ್ರಿಕೆಗಳಲ್ಲಿ ಪ್ರಸ್ತಾಪವಾಗಿದೆ. ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಅವರು ಪಟ್ಟು ಹಿಡಿದರು. ಈ ವೇಳೆ ಆಡಳಿತ ಪಕ್ಷದ ಕೆಲವು ಸದಸ್ಯರು ಪ್ರತಿಪಕ್ಷದ
ವಿರುದ್ಧ ತಿರುಗಿಬಿದ್ದರು. `ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗಿದ್ದು ನಿಮ್ಮದೇ ಪಕ್ಷದವರು, ನಿಮ್ಮ ಮನೆ ಮನೆಯ ಮೇಲೆ ಲೋಕಾಯುಕ್ತ ದಾಳಿಯಾಯಿತು, ನೋಟು ಎಣಿಸುವ ಯಂತ್ರವೂ ಸಿಕ್ಕಿತು' ಎಂದು ಈಶ್ವರಪ್ಪನವರನ್ನೇ ನೇರವಾಗಿ ಗುರಿಯಾಗಿಸಿಕೊಂಡು ಹೇಳಿದರು ವಿ.ಎಸ್.ಉಗ್ರಪ್ಪ. ಇದಕ್ಕೆ ಅಸಮಾಧಾನಗೊಂಡ ಈಶ್ವರಪ್ಪ, 'ನೀವು ಪದೇ ಪದೇ ಸದನದಲ್ಲೇ ಈ ಸಂಗತಿ ಪ್ರಸ್ತಾಪಿಸುತ್ತಿದ್ದೀರಾ, ಕಾರ್ಯಕ್ರಮಗಳಲ್ಲೂ ಹೇಳುತ್ತಿದ್ದೀರಾ. ಹೌದು, ನಮ್ಮ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದರು. ಆದರೆ, ನಿಮ್ಮ ಆದಾಯ ಆಸ್ತಿ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ. ಇನ್ನು ನೋಟು ಎಣಿಸುವ ಯಂತ್ರ ಇದ್ದಿದ್ದೂ ಹೌದು. ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಳ್ಳಬಾರದೆಂದೇನಾದರೂ ಇದೆಯೇ? ನಾನು ವ್ಯವಹಾರಸ್ಥ, ಅನೇಕ ಏಜೆನ್ಸಿಗಳಿವೆ. ಪ್ರತಿ ದಿನ ಸೇಲ್ಸ್ ಟ್ರಿಪ್‍ಗಳಿಂದ ಬರುವ ಹಣವನ್ನು ಕೈಯಲ್ಲಿ ಎಣಿಸಿಕೊಂಡು ಕೂರಲು ಆಗುತ್ತದೆಯೇ? ಈ ಕಾರಣಕ್ಕೆ ಐದು ಸಾವಿರ ಮೌಲ್ಯದ ಯಂತ್ರ ಇಟ್ಟುಕೊಂಡಿದ್ದೇನೆ, ತಪ್ಪೇನಿದೆ? ನಾನೇನು ನೋಟು ಪ್ರಿಂಟ್ ಮಾಡುವ ಯಂತ್ರ ಇಟ್ಟುಕೊಂಡಿಲ್ಲವಲ್ಲ' ಎಂದು ಏರಿದ ದನಿಯಲ್ಲಿ ಈಶ್ವರಪ್ಪ ಹೇಳಿದಾಗ ಉಗ್ರಪ್ಪ ಮೌನಕ್ಕೆ ಶರಣಾದರು.
ಜೆಡಿಎಸ್‍ನ ಕೆಲವು ಸದಸ್ಯರು ಈಶ್ವರಪ್ಪನವರ ನೆರವಿಗೆ ಧಾವಿಸಿ, ನೋಟು ಯಂತ್ರ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಉಗ್ರಪ್ಪನವರ ಹೇಳಿಕೆ ಖಂಡಿಸಿದರು. ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ ಮಾತನಾಡಿ, ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ನಡೆದಿದೆ. ತೆಲಗಿ ಪ್ರಕರಣ ಯಾರ ಕೂಸು? ನಿಮ್ಮ ಪಕ್ಷದ ಬಳ್ಳಾರಿ ಯಾತ್ರೆಯಲ್ಲಿ ಪಾಲ್ಗೊಂಡ ಶಾಸಕರು ಒಬ್ಬೊಬ್ಬರಾಗಿ ಜೈಲಿಗೆ ಪರೇಡ್ ಮಾಡುತ್ತಿದ್ದಾರೆ ಎಂದು ಉಗ್ರಪ್ಪನವರನ್ನು ಗುರಿಯಾಗಿಸಿ ಹರಿಹಾಯ್ದರು. ಫ್ಲೋರೈಡ್ ನೀರಿನ ಬಗ್ಗೆ ಎಷ್ಟೆಲ್ಲಾ ಮಾತನಾಡುತ್ತಾರೆ, ಪಾವಗಡಕ್ಕೆ ಉಗ್ರಪ್ಪ ಎಷ್ಟು ಬಾರಿ ಹೋಗುತ್ತಾರೆ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲೇ ಇರುತ್ತಾರೆಂದು ತರಾಟೆಗೆ ತೆಗೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


