ರಾಜಕೀಯ

ಲೋಕಾ ನೇಮಕದಲ್ಲಿ ಹಣ: ಹೆಸರು ಬಹಿರಂಗಕ್ಕೆ ಸಿಎಂ, ಸ್ಪೀಕರ್ ಸೇರಿದಂತೆ ಎಲ್ಲ ಸದಸ್ಯರ ಆಗ್ರಹ

ಲೋಕಾಯುಕ್ತ ನ್ಯಾ.ಭಾಸ್ಕರ್‍ರಾವ್ ಹುದ್ದೆಗೇರಲು ಹಣ ನೀಡಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿಕೆ ನೀಡಿದ್ದು...

ಲೋಕಾ ನೇಮಕದಲ್ಲಿ ಹಣ: ಹೆಸರು ಬಹಿರಂಗಕ್ಕೆ ಸಿಎಂ, ಸ್ಪೀಕರ್ ಸೇರಿದಂತೆ ಎಲ್ಲ ಸದಸ್ಯರ ಆಗ್ರಹ
ಸಿದ್ದರಾಮಯ್ಯ ಮತ್ತು ಸಂತೋಷ್ ಹೆಗ್ಡೆ
Published On :

ವಿಧಾನಸಭೆ: ಲೋಕಾಯುಕ್ತ ನ್ಯಾ.ಭಾಸ್ಕರ್‍ರಾವ್  ಹುದ್ದೆಗೇರಲು ಹಣ ನೀಡಿದ್ದಾರೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಹೇಳಿಕೆ ನೀಡಿದ್ದು, ಯಾರು ಎಷ್ಟು ಹಣ ತೆಗೆದುಕೊಂಡಿದ್ದಾರೆ ಎಂಬುದನ್ನು ಅವರೇ ಬಹಿರಂಗಪಡಿಸಬೇಕು ಎಂದು ವಿಧಾಸನಭೆಯಲ್ಲಿ ಸ್ಪೀಕರ್, ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸದಸ್ಯರು ಆಗ್ರಹಪಡಿಸಿದ್ದಾರೆ.

 ಭಾಸ್ಕರ್‍ರಾವ್ ನೇಮಕದಲ್ಲಿ ಹಣ ನೀಡಲಾಗಿದೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರು ಹೇಳಿರುವ ಪತ್ರಿಕೆಯೊಂದರ ಸಂದರ್ಶನ ಉಲ್ಲೇಖಿಸಿ ಸದನದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗೃಹ ಸಚಿವ ಟಿ.ಜೆ. ಜಾರ್ಜ್ ಸೇರಿದಂತೆ ಹಲವು ಸದಸ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಆರೋಪಗಳನ್ನು ಮಾಡಿದರು. ಆರೋಪಗಳು ವೈಯಕ್ತಿಕ ಮಟ್ಟಕ್ಕೆ ಹೋಗಿ ಸದನದಲ್ಲಿ ಸುಮಾರು ಒಂದು ಗಂಟೆ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. `ನೀವೇ ನೇಮಕ ಮಾಡಿದ್ದು' ಎಂದು ಕಾಂಗ್ರೆಸ್ ನವರು ಹೇಳಿದರೆ, `ನೀವೂ ಸಮಿತಿಯಲ್ಲಿದ್ದೀರಿ. ಈ ನೇಮಕದ ಬಗ್ಗೆ ಸಿಬಿಐ ತನಿಖೆಯನ್ನೇ ಮಾಡಿ' ಎಂದು ಬಿಜೆಪಿಯರು ಆಗ್ರಹಿಸಿದರು.

 ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ, `ನೇಮಕದಲ್ಲಿ ಹಣ ನೀಡಲಾಗಿದೆ ಎಂಬುದು ಸಂತೋಷ್ ಹೆಗ್ಡೆ ಅವರ ಹೇಳಿಕೆ. ಏನು ಸತ್ಯ ಇದೆ, ಯಾರು ಪಡೆದಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಅವರೇ ಎಲ್ಲ ವಿಷಯವನ್ನು ಬಹಿರಂಗಪಡಿಸಲಿ' ಎಂದರು.
ಆಗ, ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾತನಾಡಿ, `ಸಂತೋಷ್ ಹೆಗ್ಡೆ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದವರು. ಅಲ್ಲದೆ, ಮಾಜಿ ಲೋಕಾಯುಕ್ತರು. ಅವರಿಗೆ ನೇಮಕದಲ್ಲಿ ಇಂತಹ ಹಣ ನೀಡಲಾಗಿದೆ ಎಂಬ ಮಾಹಿತಿ ಇದ್ದರೆ ಅದನ್ನು ಮಾಧ್ಯಮಗಳಿಗೆ ಹೇಳುವುದಲ್ಲ. ಅದನ್ನು ಯಾವ ರೀತಿಯಲ್ಲಿ ಯಾರಿಗೆ ಪತ್ರಬರೆದು ಮಾಹಿತಿ ನೀಡಬೇಕು ಎಂಬ ಅರಿವಿರುವವರು. ಅವರು ಈ ವಿಷಯದ ಸಂಬಂಧ ಎಲ್ಲವನ್ನೂ ಬಹಿರಂಗವಾಗಿ ಹೇಳಬೇಕು' ಎಂದರು. ಭಾಸ್ಕರ್ ರಾವ್ ನೇಮಕದಲ್ಲಿ ಎಲ್ಲರೂ
ಸೇರಿಕೊಂಡೇ ಆಂಯ್ಕೆ ಮಾಡಿರುವುದು. ಸಂತೋಷ್ ಹೆಗ್ಡೆ ಏನು ಹೇಳಿದ್ದಾರೋ ಗೊತ್ತಿಲ್ಲ. ಬೇಕಿದ್ದರೆ ನೇಮಕದ ಬಗ್ಗೆ ತನಿಖೆಯಾಗಲಿ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು. ಆಗ ಮಧ್ಯಪ್ರವೇಶಿಸಿದ ರಮೇಶ್‍ಕುಮಾರ್, ಭಾಸ್ಕರ್‍ರಾವ್ ನೇಮಕದಲ್ಲಿ ನೀವಿಬ್ಬರೇ ಇದ್ದಿದ್ದು. ಆಗ ಸಿಎಂ ಆದವರು ಈಗ ಪ್ರತಿಪಕ್ಷದ ನಾಯಕ. ಆಗ ಪ್ರತಿಪಕ್ಷ ನಾಯಕ ಈಗ ಸಿಎಂ. ಮುಖ್ಯಮಂತ್ರಿಯವರಿಗೆ ಪೂರ್ಣ ಹಣ ಬರದಿದ್ದರೂ ಭಾಗಶಃ ಬಂದಿರಬೇಕು. ಎಷ್ಟು ಎಂಬುದನ್ನು ನಮಗೆ ತಿಳಿಸಿ. ನಮಗೊಂದು ಇಂಡೆಕ್ಸ್ ಆಗುತ್ತದೆ ಎಂದು ಕಾಲೆಳೆದರು.

ಸಿದ್ದರಾಮಯ್ಯ ಮಾತನಾಡಿ, `ನಾವೆಲ್ಲ ಕಮಿಟಿಯಲ್ಲಿ ಇದ್ದು, ಸಲಹೆ ನೀಡಿದೆವು ಅಷ್ಟೇ. ಸರ್ಕಾರ ಪ್ರಪೋಸ್ ಮಾಡಿದ್ದು. ಹೇಳ್ರಿ ಶೆಟ್ಟರೆ ಈ ಹಣದ ವಿಷಯ ನಿಮಗೇನಾದರೂ ಗೊತ್ತಿತ್ತೇ ಅಥವಾ ಮಾಹಿತಿ ಇತ್ತೇ. ನಾವ್ಯಾರೂ ಇಂತಹ ಕೆಲಸ ಮಾಡಿಲ್ಲ' ಎಂದರು. ನನಗ್ಯಾವ ಮಾಹಿತಿಯೂ ಇಲ್ಲ ಎಂದು ಶೆಟ್ಟರ್ ನುಡಿದರು.

ನಿಮ್ಮತ್ರನೇ ಎಲ್ಲ ಇದೆಯಲ್ಲ, ಕ್ರಮ ಕೈಗೊಳ್ರೀ: ಲೋಕಾಯುಕ್ತ ಭಾಸ್ಕರ್ ರಾವ್ ಅವರ ಪುತ್ರನ ಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣ ಈಗ ಸರ್ಕಾರ ರಚಿಸಿರುವ ಎಸ್‍ಐಟಿ ಅಧೀನದಲ್ಲಿದ್ದು, ಯಾರನ್ನು ಬಂಧಿಸಬೇಕೋ ಆ ಕೆಲಸವನ್ನು ಕೂಡಲೇ ಮಾಡಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ತಾಕೀತು ಮಾಡಿದರು.

ವಿಧಾನಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ನಿಯಮ 69ರಡಿ ಚರ್ಚೆ ನಡೆಯುತ್ತಿದ್ದಾಗ, ಬಿಜೆಪಿಯ ಕೆ.ಜೆ. ಬೋಪಯ್ಯ ಅವರು ಲೋಕಾಯುಕ್ತರ ಪುತ್ರ ಅಶ್ವಿನ್‍ರಾವ್ ಅವರ ಮೇಲೆ ಎಫ್ ಐಆರ್ ದಾಖಲಾಗಿದ್ದರೂ ಅವರನ್ನು ಬಂಧಿಸುತ್ತಿಲ್ಲ. ಸರ್ಕಾರ ನಿರ್ಲಕ್ಷ್ಯ ಧೋರಣೆ ವಹಿಸಿದೆ ಎಂದು ದೂರಿದರು. ಆಗ ಸಿಎಂ ಸಿದ್ದರಾಮಯ್ಯ, ಎಫ್ಐಆರ್ ಹಾಗೂ ತನಿಖೆ ನಡೆದಿರುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಅದು ಲೋಕಾಯುಕ್ತ ವ್ಯಾಪ್ತಿಯದ್ದು. ನಾವು ಏನು ಮಾಡೋಕೆ ಆಗಲ್ಲ. ನಮ್ಮ ಪಾಲಿನ ಕೆಲಸ ಮಾಡುತ್ತೇವೆ ಎಂದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಹೈಕೋರ್ಟ್ ಆದೇಶವನ್ನು ಓದಿ ಎಸ್ ಐಟಿ ತನಿಖೆ ನಡೆಸುತ್ತಿರುವುದನ್ನು ಸ್ಪಷ್ಟಪಡಿಸಿದರು.

`ನಾನು ಎಫ್ಐಆರ್ ಕಾಪಿ ಕೊಡಿ ಎಂದು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೆ. ಅವರು ಉತ್ತರಿಸಿದ್ದಾರೆ. ಎಲ್ಲ ದಾಖಲೆಗಳನ್ನು ಎಸ್‍ಐಟಿಗೆ ನೀಡಿರುವುದಾಗಿ ಹೇಳಿದ್ದಾರೆ. ಅಂದರೆ ಈಗ ಎಲ್ಲ ಸರ್ಕಾರದ ಮುಂದಿದೆ. ನೀವೇ ಎಲ್ಲ ಕ್ರಮಗಳನ್ನು ಕೈಗೊಳ್ರೀ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸೂಚಿಸಿದರು.

ಚರ್ಚೆ ಆರಂಭದಲ್ಲಿ, ಬೋಪಯ್ಯ ಅವರು ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಲೋಕಾಯುಕ್ತರು ತಮ್ಮ ಕಾಯಿದೆಗಳನ್ನು ಉಲ್ಲಂಘಿಸಿ ಎಫ್ಐಆರ್‍ಗಳನ್ನು ದಾಖಲಿಸಿದ್ದರು. ಅದು ಕೋರ್ಟ್ ನಲ್ಲೂ ದಾಖಲಾಗಿದೆ ಎಂದು ಆದೇಶ ಓದಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

 ಗೃಹ ಸಚಿವ ಕೆ.ಜೆ. ಜಾರ್ಜ್ ಅವರು, ಮಾಡಿದ ತಪ್ಪಿಗೆ ಹೋದರು ಎಂದಾಗ, ನಿಮ್ಮ ಕುಮ್ಮಕ್ಕಿತ್ತೇ ಎಂದು ಬೋಪಯ್ಯ ಪ್ರತಿ ಏಟು ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋರ್ಟ್ ಆದೇಶದಂತೆ ಅವರ ಪ್ರಕರಣ ನಡೆಯಿತು. ಎಂದು ಸಮಜಾಯಿಷಿ ನೀಡಿದರು . ಸ್ಪೀಕರ್ ಮಧ್ಯಪ್ರವೇಶದಿಂದ ಮಾತು ನಿಂತಿತು.
ಆಗ ಲೋಕಾಯುಕ್ತ ನೇಮಕದತ್ತ ಮಾತು ಹರಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ವಾಗ್ವಾದಕ್ಕಿಳಿದರು. ನೀವು ಸಮಿತಿಯಲ್ಲಿದ್ದೀರಿ ನೀವು ಹಣ ತೆಗೆದುಕೊಂಡಿದ್ದೀರಿ ಎಂದು ಬೋಪಯ್ಯ ಅವರ ಮೇಲೆ ಜಾರ್ಜ್ ಆರೋಪಿಸಿದರು. ಕೊಡಗಿನಲ್ಲಿ ನೀವು ಮರ ಕದ್ದವರು, ನಿಮ್ಮಿಂದ ನಾವು ಕಲಿಯಬೇಕಿಲ್ಲ ಎಂದು ಬೋಪಯ್ಯ ವಿರುದ್ಧ ಸಿಟ್ಟುತೋರಿದರು. ಹೀಗೆಲ್ಲ ಮಾತನಾಡಬಾರದು ಎಂದು ಸ್ಪೀಕರ್ ಈ ಮಾತುಗಳನ್ನು ಕಡತದಿಂದ ತೆಗೆಸಿದರು.

ಲೋಕಾಯುಕ್ತದಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದ್ದು, ಅವರು ಎಲ್ಲ ಸೆಕ್ಷನ್ ಗಳನ್ನೂ ಮೀರುತ್ತಿದ್ದಾರೆ. ಹೀಗಾಗಿ ಲೋಕಾಯುಕ್ತ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಕೆ.ಜೆ. ಬೋಪಯ್ಯ ಆಗ್ರಹಿಸಿದರು. ಸರ್ಕಾರ ಉತ್ತರ ನೀಡಬೇಕೆಂದು ಸೂಚಿಸಿ ಚರ್ಚೆಗೆ ಸ್ಪೀಕರ್ ತೆರೆ ಎಳೆದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.