ಬಿಬಿಎಂಪಿ ಚುನಾವಣೆ: ಮೂರು ಪಕ್ಷದಲ್ಲೂ ಭಿನ್ನಮತ ಸ್ಫೋಟ
ಬಿಬಿಎಂಪಿ ಚುನಾವಣೆಯಲ್ಲಿ ಮೂರು ಪಕ್ಷಗಳಲ್ಲೂ ನಿರೀಕ್ಷೆಗೂ ಮೀರಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ನಾಮಪತ್ರ ಸಲ್ಲಿಕೆಗೆ ಕೊನೆ....

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಮೂರು ಪಕ್ಷಗಳಲ್ಲೂ ನಿರೀಕ್ಷೆಗೂ ಮೀರಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಸೋಮವಾರ ಕಾಂಗ್ರೆಸ್‍ನಲ್ಲಿ ಶಾಸಕರ ಹೋದರ ಹಾಗೂ ಮಾಜಿ ಮೇಯರ್ ಅಳಿಯನೇ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನು ಮೀರಿಸಲು ಬಿಜೆಪಿಯಲ್ಲಿ ಇಬ್ಬರು ಮಾಜಿ ಕಾರ್ಪೋರೇಟರ್ ಗಳು ಪಕ್ಷಕ್ಕೇ ಸವಾಲೆಸೆದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನು ವಿಚಿತ್ರವೆಂದರೆ, ಜೆಡಿಎಸ್ ನಲ್ಲಿ ಬಿ ಫಾರಂ ಪಡೆದಿದ್ದ ಮೂವರು ನಾಮ ಪತ್ರವನ್ನೇ ಸಲ್ಲಿಸಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಟಿಕೆಟ್ ಸಿಗದ ಕೆಲವರು ಜೆಡಿಎಸ್‍ಗೆ ಕೊನೆ ಗಳಿಗೆಯಲ್ಲಿ ಜಿಗಿದು ಟಿಕೆಟ್ ಗಿಟ್ಟಿಸಿದ್ದಾರೆ. ಇದರೊಂದಿಗೆ ಮೂರು ಪಕ್ಷಗಳಲ್ಲೂ ಬಂಡಾಯದ ಬಾವುಟಗಳು ಹಾರಾಡುತ್ತಿದ್ದು ಭಿನ್ನ ಮತ ಶಮನಕ್ಕೆ ಪಕ್ಷಗಳ ನಾಯಕರು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಬಂಡಾಯ: ಹೊಸಕೋಟೆ ಶಾಸಕ ಎಂ.ಟಿ.ಬಿ ನಾಗರಾಜ್ ಅವರ ಸಹೋದರ ಹಾಗೂ ಮಾಜಿ ಕಾರ್ಪೋರೇಟರ್ ಪಿಳ್ಳಪ್ಪ ಎಂದಿನಂತೆ ಗರುಡಾಚಾರ್ ಪಾಳ್ಯದಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರಿಗೆ ಬಿ ಫಾರಂ ನೀಡಿಲ್ಲ. ಆದರೂ ಅವರು ಅದೇ ವಾರ್ಡ್‍ನಲ್ಲೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಓಕುಳಿಪುರ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಮಾಜಿ ಸದಸ್ಯೆ ಕ್ವೀನ್ ಎಲಿಜಬೆತ್ ಮತ್ತು ಸುಭಾಷ್ ನಗರದ ಮಾಜಿ ಸದಸ್ಯ ಟಿ.ಮಲ್ಲೇಶ್‍ಗೆ ಅಂತಿಮ ದಿನ ಬಿ ಫಾರಂ ಕೈ ತಪ್ಪಿದ್ದರಿಂದ ಜೆಡಿಎಸ್‍ನಿಂದ ಸ್ಪರ್ಧಿಸಿದ್ದಾರೆ. ಗಾಂಧಿನಗರ ವಾರ್ಡ್‍ನ ಗೋಪಾಲಕೃಷ್ಣ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಬಿಜೆಪಿ ಟಿಕೆಟ್ ಗಿಟ್ಟಿಸಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಮೇಯರ್ ರಾಮಚಂದ್ರಪ್ಪ ಅವರ ಅಳಿಯ ಮತ್ತು ಕಾಂಗ್ರೆಸ್ ಮುಖಂಡ ಗಿರೀಶ್ ದತ್ತಾತ್ರೆಯನಗರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯಲ್ಲಿ ಬೆಂಕಿ: ರಾಜಗೋಪಾಲನಗರ ವಾಡ್ರ್ ನಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಕಚೇರಿ ಧ್ವಂಸಗೊಳಿಸಿದ್ದ ಗಂಗಾಧರ್ ಕೊನೆ ಕಸರತ್ತಿನಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಬಿಜೆಪಿಗೆ ಸವಾಲೆಸೆದಿದ್ದಾರೆ. ಹಾಗೆಯೇ ಬಿಜೆಪಿಯಲ್ಲಿ ಎಚ್‍ಎಸ್‍ಆರ್ ಬಡಾವಣೆ ವಾರ್ಡ್‍ನ ಮಾಜಿ ಸದಸ್ಯೆ ಲತಾ ನರಸಿಂಹಮೂರ್ತಿ ಪಕ್ಷದ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನ ಮಾಜಿ ಕಾರ್ಪೋರೇಟರ್ ಬಿ.ಟಿ.ಶ್ರೀನಿವಾ ಸಮೂರ್ತಿ ಪಕ್ಷದ ಟಿಕೆಟ್ ಸಿಗದೇ ಜೆಡಿಎಸ್‍ನಿಂದ ಚಾಮರಾಜಪೇಟೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಹಾಗೆಯೇ ಬಿಜೆಪಿಯ ಮಾಜಿ ಕಾರ್ಪೋರೇಟರ್ ಲಲಿತಾ ಶ್ರೀನಿವಾಸಗೌಡ ಮತ್ತೆ ಜೆಡಿಎಸ್ ಸೇರಿದ್ದಾರೆ. ಈ ಮಧ್ಯೆ ಬಿಜೆಪಿಯ ಮಾಜಿ ಮೇಯರ್ ವೆಂಕಟೇಶ್ ಮೂರ್ತಿಗೆ ಕೊನೆಗೂ ಟಿಕೆಟ್ ಸಿಗಲಿಲ್ಲ. ಆದರೆ ಮತ್ತೊಬ್ಬ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕೊನೆಗಳಿಗೆಯಲ್ಲಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಜಗಳ: ಹೆಮ್ಮಿಗೇಪುರ ವಾರ್ಡ್ ಮತ್ತು ಕೆ.ಆರ್.ಪುರ ಸೇರಿದಂತೆ ಐದು ವಾರ್ಡ್‍ಗಳಲ್ಲಿ ಈಗಾಗಲೇ ಬಿ ಫಾರಂ ಪಡೆದಿದ್ದ ಅಭ್ಯರ್ಥಿಗಳನ್ನು ವಾಪಸ್ ತೆಗೆಸಿ ಬೇರೊಂದು ಬಿಫಾರಂ ನೀಡಿ ಅಭ್ಯರ್ಥಿಯನ್ನು ಬದಲಿಸಿದೆ. ಅದೇ ರೀತಿ ಬಿಜೆಪಿ ಗಿರಿನಗರದಲ್ಲಿ ಅಧಿಕೃತ ಅಭ್ಯರ್ಥಿಯನ್ನು ಬದಲಾಯಿಸಿದೆ. ಇದರಿಂದ ಈಗಾಗಲೇ ಪ್ರಕಟವಾಗಿದ್ದ ಪಟ್ಟಿಯಲ್ಲಿದ್ದವರಿಗೆ ಟಿಕೆಟ್ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸಿ.ವಿ.ರಾಮನ್‍ನಗರ, ಹೊಂಗಸಂದ್ರ ಮತ್ತು ಕೆಂಪಾಪುರ ಅಗ್ರಹಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳದ ಕಾರಣ ಜೆಡಿಎಸ್‍ನಿಂದ ಯಾವುದೇ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿಲ್ಲ.
ಆದರೆ ಈ ಬೆಳವಣಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗದೆ ನಡೆದಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ನಾಮಪತ್ರ ಸಲ್ಲಿಸದಂತೆ ಮಾಡಲಾಗಿದೆ ಎಂಬ ಅನುಮಾನಗಳೂ ಜೆಡಿಎಸ್ ಅಭ್ಯರ್ಥಿಗಳನ್ನು ಕಾಡುತ್ತಿದೆ.
ನಾಡಿದ್ದು ನಾಮಪತ್ರ ವಾಪಸ್‍ಗೆ ಕೊನೆ :ಮಂಗಳವಾರ ನಾಮಪತ್ರ ಪರೀಶೀಲನೆ ನಡೆಯಲಿದ್ದು, ಅಗತ್ಯವಿದ್ದರೆ ಅದನ್ನು ಮತ್ತೊಂದು ದಿನಕ್ಕೆ ವಿಸ್ತರಿಸಿಕೊಳ್ಳಬಹುದಾಗಿದೆ. ಹಾಗೆಯೇ ಬುಧವಾರ ಮತ್ತು ಗುರುವಾರ ದಂದು ಉಮೇದುವಾರರು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಯುವುದಕ್ಕೆ ಅವಕಾಶ ಇರುತ್ತದೆ. ಗುರುವಾರದ ಒಳಗಾಗಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯದಿದ್ದರೆ ಅವರು ಅಂತಿಮವಾಗಿ ಕಣದಲ್ಲಿ ಉಳಿದುಕೊಳ್ಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


