ರಾಜಕೀಯ

ವಿಧಾನ ಪರಿಷತ್‍ಗೆ ವಿಸರ್ಜನೆ ಕಾಟ?

ಬಿಬಿಎಂಪಿ ಅಸ್ತಿತ್ವಕ್ಕೆ ಕರೆದಿರುವ ವಿಶೇಷ ಅಧಿವೇಶನವು ವಿಧಾನ ಪರಿ ಷತ್ ಅಸ್ತಿತ್ವದ ಬಗ್ಗೆ ಎದ್ದಿರುವ ವಿವಾದಕ್ಕೆ ಬಲಿಯಾಗುವ ಸಾಧ್ಯತೆ ನಿಚ್ಚಳ...

ವಿಧಾನ ಪರಿಷತ್‍ಗೆ ವಿಸರ್ಜನೆ ಕಾಟ?
ವಿಧಾನ ಸೌಧ
Published On :

ಬೆಂಗಳೂರು : ಬಿಬಿಎಂಪಿ ಅಸ್ತಿತ್ವಕ್ಕೆ ಕರೆದಿರುವ ವಿಶೇಷ ಅಧಿವೇಶನವು ವಿಧಾನ ಪರಿ ಷತ್ ಅಸ್ತಿತ್ವದ ಬಗ್ಗೆ ಎದ್ದಿರುವ ವಿವಾದಕ್ಕೆ ಬಲಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಹೇಳಿಕೆಯಿಂದ ಕೆರಳಿರುವ ಪ್ರತಿ ಪಕ್ಷಗಳು ಬಿಬಿಎಂಪಿ ಚರ್ಚೆಗೂ ಮುಂಚೆ ವಿಧಾನ ಪರಿಷತ್ ಅಸ್ತಿತ್ವದ ಬಗ್ಗೆ ಸರ್ಕಾರದ
ಸಚಿವರು ಹಾಕಿರುವ ಬೆದರಿಕೆಯನ್ನು ಮೊದಲು ಚರ್ಚೆಗೆ ತೆಗೆದುಕೊಳ್ಳುವುದು ಬಹುತೇಕ ನಿಚ್ಚಳವಾಗಿದೆ. ರಾಜ್ಯ ಸರ್ಕಾರದ ಸರ್ವಾಧಿಕಾರ ಧೋರಣೆ ಯನ್ನು ನೋಡಿಕೊಂಡು ಕೂರಲು ಸಾಧ್ಯವಿಲ್ಲ, ಶಾಸನ ಸಭೆಗೆ ಬೆದರಿಕೆ ಹಾಕುವ ಪ್ರಯತ್ನಕ್ಕೆ ಜಗ್ಗುವುದಿಲ್ಲ ಎಂದು ಎಚ್ಚರಿಸಿರುವ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವ ರಪ್ಪ, ಸೋಮವಾರದ ಕಲಾಪದಲ್ಲಿ ಇದೇ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಬಿಬಿಎಂಪಿ ವಿಭಜನೆ ವಿಚಾರವನ್ನು ಸದನ ಆಯ್ಕೆ  ಸಮಿತಿಗೆ ಒಪ್ಪಿಸಬೇಕು ಎಂದು ಹಠ ಹೊತ್ತು ಕುಳಿತಿರುವ ಬಿಜೆಪಿ ಹಾಗೂ ಜೆಡಿಎಸ್ ಸೋಮವಾರವೂ ಇದೇ ತಂತ್ರ ಮುಂದುವರೆ ಸಲಿವೆ. ಯಾವುದೇ ಕಾರಣಕ್ಕೂ ಸರ್ಕಾರದ ಒತ್ತಡಕ್ಕೆ ಮಣಿಯದಿರಲು ಪ್ರತಿಪಕ್ಷಗಳು ನಿರ್ಧರಿಸಿವೆ. ಆದರೆ ಈ ವಿಚಾರ ಚರ್ಚೆಗೆ ಬರುವ ಮುಂಚೆ ಕಲಾಪದಲ್ಲಿ ವಿಧಾನ ಪರಿಷತ್  ಅಸ್ತಿತ್ವದ ಬಗ್ಗೆ ಎದ್ದಿರುವ ಪ್ರಶ್ನೆಗಳೇ ಗದ್ದಲ ಎಬ್ಬಿಸುವ ಸಾಧ್ಯತೆಯಿದೆ. ಏತನ್ಮಧ್ಯೆ, ವಿಧೇಯಕವನ್ನು ಆಯ್ಕೆ ಸಮಿತಿಗೆ ಒಪ್ಪಿಸುವ ಬಗ್ಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕೂಡ ಇಂಗಿತ ವ್ಯಕ್ತಪಡಿಸಿರುವುದು ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನೆಡೆಯಾಗಲಿದೆ. ವಿಧಾನ ಪರಿಷತ್‍ನಲ್ಲಿ ಬಿಬಿಎಂಪಿ ವಿಭಜನೆಯ ವಿಧೇಯಕಕ್ಕೆ ಅನುಮೋದನೆಸಿಗುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ರಾಜ್ಯ ಸರ್ಕಾರ ಬೆದರಿಕೆ ತಂತ್ರದ ಮೊರೆ ಹೋಗಿತ್ತು. ಪರಿಣಾಮವಾಗಿ ಈಗ ಮೂಲ ವಿಷಯದ ಬದಲು ರಾಜ್ಯ ಸರ್ಕಾರದ ಸಚಿವರ ಎಡವಟ್ಟು ಹೇಳಿಕೆಗಳ ಮೂಲಕ ಸರ್ಕಾ ರವನ್ನು ಮತ್ತಷ್ಟು ಮುಜುಗರಕ್ಕೆ ಒಳಪಡಿ ಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಕಾನೂನು ಸಚಿವ ಜಯಚಂದ್ರ ಕ್ಷಮೆ ಕೇಳುವವರೆಗೂ ಮುಂದಿನ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದೂ ಈಶ್ವರಪ್ಪ ಎಚ್ಚರಿಸಿದ್ದಾರೆ.

 ಸಚಿವರ ಸರ್ವಾಧಿಕಾರದಮಾತು:  ವಿಧಾನ ಪರಿಷತ್ ಅಥವಾ ಸಭೆಯು ಕಾನೂನು ಸಚಿವ ಜಯಚಂದ್ರ ಜೇಬಿನಲ್ಲಿಲ್ಲ. ಅವರಿಗೆ ಬೇಡವೆಂದಾಗ ರದ್ದುಗೊಳಿಸಲು ಯಾವುದೇ
ಹಕ್ಕಿಲ್ಲ. ಬಾಯಿಗೆ ಬಂದಂತೆ ಮಾತನಾಡುವ ಮೊದಲು ವಿವೇಚನೆ ಬಳಸಬೇಕು. ತಾಕತ್ತಿದ್ದರೆ ವಿಧಾನ ಪರಿಷತ್ ರದ್ದುಗೊಳಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.
`ಕನ್ನಡಪ್ರಭ'ದೊಂದಿಗೆ ಮಾತನಾ ಡಿದ ಅವರು, ಜಯಚಂದ್ರ ಅವರ ಬೆದರಿಕೆಗೆ ನಾವು ಬಗ್ಗುವುದಿಲ್ಲ. ರಾಜ್ಯ ಸರ್ಕಾರ ಸರ್ವಾಧಿಕಾರ ಧೋರಣೆ ತಾಳುತ್ತಿದೆ. ಇದೇ ವಿಚಾರವನ್ನು ಸೋಮವಾರದ ಕಲಾಪದಲ್ಲಿ ಪ್ರಸ್ತಾಪಿಸುತ್ತೇನೆ. ಬಿಬಿಎಂಪಿ ವಿಚಾರವನ್ನು ಬೆಂಗಳೂರು ಶಾಸಕರಿಗೆ ಬಿಟ್ಟು ನಾನು ಸುಮ್ಮನಿರಲು ನಿರ್ಧರಿಸಿದ್ದೆ. ಆದರೆ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಸೋಮವಾರ ಮೊದಲಿಗೆ ವಿಧಾನ ಪರಿಷತ್ ಅಸ್ತಿತ್ವದ ಬಗೆಗಿನ ಬೆದರಿಕೆ ಮೊದಲು ಚರ್ಚೆಗೆ
ಬರಲಿದೆ. ಪಕ್ಷಾತೀತವಾಗಿ ಇದನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.