ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ಅಕ್ಟೋಬರ್ 3 ರಿಂದ ಕೇಂದ್ರ ತಂಡದ ಸಮೀಕ್ಷೆ- ಎಚ್.ಡಿ ಕುಮಾರಸ್ವಾಮಿ
ಕರ್ನಾಟಕಕ್ಕೆ ತುರ್ತು ಕೇಂದ್ರ ನೆರವು ನೀಡುವಂತೆ ಕೋರಿ ಸೆಪ್ಟೆಂಬರ್ 24ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಎಚ್ ಡಿ ಕುಮಾರಸ್ವಾಮಿ ಪತ್ರ ಬರೆದಿದ್ದರು.

ಬೆಂಗಳೂರು: ಕರ್ನಾಟಕದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಪರಿಶೀಲನೆಗೆ ಕೇಂದ್ರದ ಅಂತರ ಸಚಿವಾಲಯ ತಂಡ (IMCT) ಅಕ್ಟೋಬರ್ 3ರಿಂದ 7ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕಕ್ಕೆ ತುರ್ತು ಕೇಂದ್ರ ನೆರವು ನೀಡುವಂತೆ ಕೋರಿ ಸೆಪ್ಟೆಂಬರ್ 24ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಎಚ್ ಡಿ ಕುಮಾರಸ್ವಾಮಿ ಪತ್ರ ಬರೆದಿದ್ದರು. ಇದಕ್ಕೆ ಚೌಹಾಣ್ ಮಂಗಳವಾರ ಪ್ರತಿಕ್ರಿಯೆ ನೀಡಿದ್ದು, ಅದರ ಪ್ರತಿಯನ್ನು ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿ ಆರ್ಥಿಕ ನೆರವು ಕೋರಿ ಬರದ ಕುರಿತ ಮನವಿ ಸಲ್ಲಿಸಿದೆ ಎಂದು ಚೌಹಾಣ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಬಳಿಕ ಸೆಪ್ಟೆಂಬರ್ 17ರಂದು ಅಂತರ ಸಚಿವಾಲಯ ಕೇಂದ್ರ ತಂಡವನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ಬರಪೀಡಿತ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿ, ಚಾಲ್ತಿಯಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ವರದಿ ಸಲ್ಲಿಸಲು IMCT ಅಕ್ಟೋಬರ್ 3ರಿಂದ 7ರವರೆಗೆ ರಾಜ್ಯಕ್ಕೆ ಭೇಟಿ ನೀಡಲಿದೆ” ಎಂದು ಚೌಹಾಣ್ ತಿಳಿಸಿದ್ದಾರೆ.
ಕೇಂದ್ರ ತಂಡ ಸಲ್ಲಿಸುವ ವರದಿಯನ್ನು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿ (SC-NEC) ಪರಿಶೀಲಿಸಲಿದೆ.
ಬಳಿಕ ಅದರ ಶಿಫಾರಸುಗಳ ಆಧಾರದ ಮೇಲೆ NDRFನಿಂದ ನೀಡಬೇಕಾದ ನೆರವಿನ ಪ್ರಮಾಣವನ್ನು ಕೇಂದ್ರ ಗೃಹ ಸಚಿವರ ನೇತೃತ್ವದ ಉನ್ನತ ಮಟ್ಟದ ಸಮಿತಿ ಅಂತಿಮಗೊಳಿಸಲಿದೆ ಎಂದು ಚೌಹಾಣ್ ವಿವರಿಸಿದ್ದಾರೆ.
ಕೇಂದ್ರ ಸಚಿವರ ತ್ವರಿತ ಸ್ಪಂದನೆಗೆ ಧನ್ಯವಾದ ಸಲ್ಲಿಸಿರುವ ಕುಮಾರಸ್ವಾಮಿ, 'ಅ.3ರಿಂದ 7ರವರೆಗೆ ಕೇಂದ್ರದ ತಂಡ ಕರ್ನಾಟಕಕ್ಕೆ ಭೇಟಿ ನೀಡಿ ನೆಲಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲಿದೆ' ಎಂದು ಹೇಳಿದ್ದಾರೆ.
“ರೈತರು ತೀವ್ರ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡಲಿದೆ ಎಂಬ ವಿಶ್ವಾಸವಿದೆ. ನಮ್ಮೆಲ್ಲರ ಆದ್ಯತೆ ರೈತರ ಬೆಂಬಲಕ್ಕೆ ದೃಢವಾಗಿ ನಿಲ್ಲುವುದಾಗಿರಬೇಕು” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಈಗಾಗಲೇ ಬರ ಪರಿಹಾರಕ್ಕಾಗಿ ಕೇಂದ್ರದಿಂದ 3,705.30 ಕೋಟಿ ರೂ ನೆರವು ಕೋರಿದೆ. ಆರಂಭದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬಳಿಕ 76 ತಾಲೂಕುಗಳನ್ನು ಹೆಚ್ಚುವರಿಯಾಗಿ ಸೇರಿಸಿ ಒಟ್ಟು 177 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ ಎಂದು ರಾಜ್ಯ ಸರ್ಕಾರದ ಅಂಕಿ-ಅಂಶಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಇದೀಗ ಕೇಂದ್ರ ತಂಡದ ಸ್ಥಳ ಪರಿಶೀಲನೆ ಹಾಗೂ ಅದರ ವರದಿಯ ಆಧಾರದ ಮೇಲೆ ಕರ್ನಾಟಕಕ್ಕೆ NDRFನಿಂದ ದೊರೆಯುವ ನೆರವಿನ ಕುರಿತು ಮುಂದಿನ ಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



