Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ
ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರು ಮರುನೇಮಕದ ವಿರುದ್ಧ ಮತ ಚಲಾಯಿಸಿದ್ದರಿಂದ ಈ ಮತದಾನವು 'ಕಾನೂನುಬದ್ಧವಾಗಿ ಅಮಾನ್ಯ ಎಂಬುದು ಟ್ರಸ್ಟ್‌ನ ವಾದವಾಗಿದೆ.

ಟಾಟಾ ಸನ್ಸ್‌ನ ಹಾಲಿ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರನ್ನು ಐದು ವರ್ಷಗಳ ಮೂರನೇ ಅವಧಿಗೆ ಮರುನೇಮಕ ಮಾಡುವ ನಿರ್ಧಾರ 4:1 ಮತಗಳ ಅಂತರದಿಂದ ಅಂಗೀಕಾರವಾದ ಕೆಲವೇ ಗಂಟೆಗಳಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿದೆ.
ಈ ನಿರ್ಧಾರವನ್ನು 'ಕಾನೂನುಬಾಹಿರ' ಎಂದು ಟಾಟಾ ಟ್ರಸ್ಟ್ಸ್ (ಮಾಲೀಕ ಸಂಸ್ಥೆ) ಸಾರ್ವಜನಿಕ ಹೇಳಿಕೆ ನೀಡಿದೆ. ಚಂದ್ರಶೇಖರನ್ ಅವರ ರಾಜೀನಾಮೆಯನ್ನು ಟ್ರಸ್ಟ್ ಈಗಾಗಲೇ ಅಂಗೀಕರಿಸಿದ್ದು ಅದು ಅಂತಿಮಗೊಂಡಿತ್ತು ಎಂಬ ಕಾರಣ ಹಾಗೂ ಟ್ರಸ್ಟ್‌ನ ಅಧ್ಯಕ್ಷ ನೋಯೆಲ್ ಟಾಟಾ ಅವರು ಮರುನೇಮಕದ ವಿರುದ್ಧ ಮತ ಚಲಾಯಿಸಿದ್ದರಿಂದ ಈ ಮತದಾನವು 'ಕಾನೂನುಬದ್ಧವಾಗಿ ಅಮಾನ್ಯ ಎಂಬುದು ಟ್ರಸ್ಟ್‌ನ ವಾದವಾಗಿದೆ.
ಫೆಬ್ರವರಿ 20, 2027 ರಂದು ತಮ್ಮ ಪ್ರಸ್ತುತ ಅಧಿಕಾರಾವಧಿ ಮುಗಿದ ನಂತರ ಮೂರನೇ ಅವಧಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಆಗಸ್ಟ್ 12 ರಂದು ಮಂಡಳಿಗೆ ತಿಳಿಸಿದ ಕೇವಲ ಒಂದು ತಿಂಗಳ ನಂತರ, ಗುರುವಾರ ನಡೆದ ಸಭೆಯಲ್ಲಿ ಟಾಟಾ ಸನ್ಸ್ ಮಂಡಳಿಯು ಚಂದ್ರಶೇಖರನ್ ಅವರಿಗೆ ಹೊಸ ಐದು ವರ್ಷಗಳ ಅವಧಿಯನ್ನು ಅನುಮೋದಿಸಿತ್ತು.
ಇನ್ನು ಆರ್‌ಬಿಐ (RBI) ಆದೇಶದಂತೆ, 290 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ ಅನ್ನು ಷೇರು ಮಾರುಕಟ್ಟೆಯಲ್ಲಿ listing ಪ್ರಕ್ರಿಯೆಯನ್ನು ಮುಂದುವರಿಸಲು ಮಂಡಳಿಯು 4:1 ಮತಗಳ ಅಂತರದಿಂದ ಒಪ್ಪಿಗೆ ಸೂಚಿಸಿತು. ಈ ಕ್ರಮವನ್ನು ನೋಯೆಲ್ ಟಾಟಾ ತೀವ್ರವಾಗಿ ವಿರೋಧಿಸಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಚಂದ್ರಶೇಖರನ್ ಅವರಿಗೆ ದೊರೆತ ನಾಲ್ಕು ಮತಗಳ ಪೈಕಿ ಒಂದು ಮತ ಟ್ರಸ್ಟ್‌ನ ಉಪಾಧ್ಯಕ್ಷ ವೇಣು ಶ್ರೀನಿವಾಸನ್ ಅವರಿಂದ ಬಂದಿದೆ. ನೋಯೆಲ್ ಅವರಂತೆಯೇ, ಶ್ರೀನಿವಾಸನ್ ಕೂಡ ಟಾಟಾ ಸನ್ಸ್ ಮಂಡಳಿಯಲ್ಲಿ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ (ಈ ಮಂಡಳಿಯ ಶೇ. 66.6 ರಷ್ಟು ಮಾಲೀಕತ್ವ ಟ್ರಸ್ಟ್‌ನಲ್ಲಿದೆ).
ಗುರುವಾರ ನಡೆದ ಮಂಡಳಿ ಸಭೆಯ ನಂತರ ನೀಡಲಾದ ಸಾರ್ವಜನಿಕ ಹೇಳಿಕೆಯಲ್ಲಿ, "ಚಂದ್ರಶೇಖರನ್ ಅವರ ನಿರ್ಧಾರವು ಸ್ವಯಂಪ್ರೇರಿತವಾಗಿತ್ತು, ಸ್ಪಷ್ಟವಾಗಿ ವ್ಯಕ್ತಪಡಿಸಲಾಗಿತ್ತು ಮತ್ತು ಯಾವುದೇ ಪರಿಶೀಲನಾ ಪ್ರಕ್ರಿಯೆಯ ಫಲಿತಾಂಶವಾಗಿರಲಿಲ್ಲ; ಹೀಗಾಗಿ, ಪ್ರಸ್ತುತ ಅವಧಿಯ ನಂತರ ಮರುನೇಮಕಕ್ಕೆ ಒಳಪಡದಿರುವ ಅವರ ನಿರ್ಧಾರವನ್ನು ಈಗಾಗಲೇ ಅಂಗೀಕರಿಸಲಾಗಿತ್ತು ಮತ್ತು ಅದು ಅಂತಿಮಗೊಂಡಿತ್ತು" ಎಂದು ಟಾಟಾ ಟ್ರಸ್ಟ್ಸ್ ಪ್ರತಿಪಾದಿಸಿದೆ.
ಚಂದ್ರಶೇಖರನ್ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಕೈಗೊಂಡರು ಮತ್ತು ಕಂಪನಿಯ ಮುಖ್ಯ ಷೇರುದಾರರಾದ ಟ್ರಸ್ಟ್‌ಗೆ ಯಾವುದೇ ಪೂರ್ವ ಸೂಚನೆ ನೀಡದೆ ಅಥವಾ ಅವರೊಂದಿಗೆ ಸಮಾಲೋಚನೆ ನಡೆಸದೆ ಆ ನಿರ್ಧಾರವನ್ನು ಸಾರ್ವಜನಿಕಗೊಳಿಸಿದರು ಎಂದೂ ಟ್ರಸ್ಟ್ ತಿಳಿಸಿದೆ.
"ಒಮ್ಮೆ ಅಂತಹ ನಿರ್ಧಾರವನ್ನು ಸಾರ್ವಜನಿಕವಾಗಿ ತಿಳಿಸಿದ ನಂತರ, ಅದಕ್ಕೆ ಬದಲಾಯಿಸಲಾಗದ ಪರಿಣಾಮಗಳು ಉಂಟಾಗುತ್ತವೆ; ಏಕೆಂದರೆ ಸಮೂಹದ ಉದ್ಯೋಗಿಗಳು, ಸಾಲ ನೀಡಿದವರು, ವಹಿವಾಟು ಪಾಲುದಾರರು, ಮಾರುಕಟ್ಟೆ ಮತ್ತು ಬಹುಮತದ ಷೇರುದಾರರು ಎಲ್ಲರೂ ಆ ನಿರ್ಧಾರವನ್ನೇ ಆಧರಿಸಿ ಮುಂದಿನ ಕ್ರಮಗಳನ್ನು ಕೈಗೊಂಡಿರುತ್ತಾರೆ" ಎಂದು ಟ್ರಸ್ಟ್ ಹೇಳಿದೆ.
ಮರುದಿನವೇ ಟ್ರಸ್ಟ್ ಚಂದ್ರಶೇಖರನ್ ಅವರ ನಿರ್ಧಾರವನ್ನು ಔಪಚಾರಿಕವಾಗಿ ಅಂಗೀಕರಿಸಿತ್ತು ಮತ್ತು ಕಂಪನಿಯ 'ಆರ್ಟಿಕಲ್ಸ್ ಆಫ್ ಅಸೋಸಿಯೇಷನ್' (ನಿಯಮಾವಳಿ) ಪ್ರಕಾರ ಅವರ ಉತ್ತರಾಧಿಕಾರಿಯನ್ನು ನೇಮಿಸಲು ಆಯ್ಕೆ ಸಮಿತಿಯನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಟಾಟಾ ಸನ್ಸ್‌ಗೆ ಸಲಹೆ ನೀಡಿತ್ತು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ನೋಯೆಲ್ ಟಾಟಾ ಅವರು ಟ್ರಸ್ಟ್‌ಗಳ ನಿಲುವನ್ನು ಪುನರುಚ್ಚರಿಸಿದರು ಎಂದು ಅದು ತಿಳಿಸಿದೆ.
ಚಂದ್ರಶೇಖರ್ ಅವರನ್ನು ಮರುನೇಮಕ ಮಾಡುವ ನಿರ್ಣಯವು ಏಕೆ ಕಾನೂನುಬಾಹಿರವಾಗಿತ್ತು ಎಂಬುದರ ಕುರಿತು ವಿವರಿಸುತ್ತಾ, ನಾಲ್ವರು ನಿರ್ದೇಶಕರು ಪರವಾಗಿ ಮತ್ತು ನೋಯೆಲ್ ಟಾಟಾ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಈ ನಿರ್ಣಯವನ್ನು ಅನುಮೋದಿಸಲಾಗಿತ್ತು ಎಂದು ಟ್ರಸ್ಟ್‌ಗಳು ಹೇಳಿವೆ. "ಆದರೆ, ಟಾಟಾ ಸನ್ಸ್‌ನ 'ಆರ್ಟಿಕಲ್ಸ್ ಆಫ್ ಅಸೋಸಿಯೇಷನ್' (ಸಂಸ್ಥೆಯ ನಿಯಮಾವಳಿ) ಪ್ರಕಾರ, ಅಧ್ಯಕ್ಷರ ನೇಮಕಾತಿಗೆ ಟ್ರಸ್ಟ್‌ಗಳ ನಾಮನಿರ್ದೇಶಿತ ನಿರ್ದೇಶಕರಲ್ಲಿ ಬಹುಮತದ ಬೆಂಬಲ ಅಗತ್ಯವಿರುತ್ತದೆ. ಈ ನಿಯಮವು ಮೊದಲ ನೇಮಕಾತಿ ಹಾಗೂ ಹಾಲಿ ಅಧ್ಯಕ್ಷರ ಮರುನೇಮಕಾತಿ - ಎರಡಕ್ಕೂ ಅನ್ವಯಿಸುತ್ತದೆ."
"ಟ್ರಸ್ಟ್‌ನ ನಾಮನಿರ್ದೇಶಿತ ನಿರ್ದೇಶಕರಲ್ಲೊಬ್ಬರಾದ ನೋಯೆಲ್ ಟಾಟಾ ಅವರು ಪ್ರಸ್ತಾವನೆಯ ವಿರುದ್ಧ ಮತ ಚಲಾಯಿಸಿದ್ದರಿಂದ, ಆ ನಿರ್ಣಯವು ಕಾನೂನುಬದ್ಧವಾಗಿ ಅಸಿಂಧು ಮತ್ತು ಆಧಾರರಹಿತವಾಯಿತು" ಎಂದು ಟ್ರಸ್ಟ್‌ಗಳು ಹೇಳಿವೆ. ಅಲ್ಲದೆ, ಟ್ರಸ್ಟ್‌ಗಳ ನಿಲುವಿನ ಸಿಂಧುತ್ವದ ಕುರಿತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಂದ ಪಡೆದ ಕಾನೂನು ಅಭಿಪ್ರಾಯವನ್ನೂ ನೋಯೆಲ್ ಸಲ್ಲಿಸಿದ್ದರು ಎಂದು ತಿಳಿಸಿವೆ. ಆದರೆ, ಟಾಟಾ ಸನ್ಸ್ ಮಂಡಳಿಯು ಈ ಕಾನೂನು ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಟಾಟಾ ಸನ್ಸ್ ಮತ್ತು ಟಾಟಾ ಸಮೂಹದ ದೀರ್ಘಕಾಲೀನ ಹಿತದೃಷ್ಟಿಯಿಂದ ಸುಗಮ ಹಾಗೂ ಸಮಯೋಚಿತ ನಾಯಕತ್ವದ ಬದಲಾವಣೆಯನ್ನು ಖಚಿತಪಡಿಸಿಕೊಳ್ಳಲು", ಚಂದ್ರಶೇಖರ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಮಿತಿಯು ಸಂಸ್ಥೆಯ ನಿಯಮಾವಳಿಗಳಿಗೆ (ಆರ್ಟಿಕಲ್ಸ್ ಆಫ್ ಅಸೋಸಿಯೇಷನ್) ಅನುಗುಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಟ್ರಸ್ಟ್‌ಗಳ ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



