ದೇಶ

Kanpur: ಮನೆ ಮುಂದೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ಅಂಗಡಿ ಮಾಲೀಕನನ್ನೇ ಹೊಡೆದು ಕೊಂದ ಯುವಕರು! Video

ಕಾನ್ಪುರದ ಸೂಪರ್ ಮಾರುಕಟ್ಟೆ ಮತ್ತು ಮನೆಗಳ ಎದುರೇ 4 ಮಂದಿ ಯುವಕರ ತಂಡವೊಂದು ಮೂತ್ರ ವಿಸರ್ಜನೆ ಮಾಡಿದ್ದು, ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕನ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ...

Kanpur: ಮನೆ ಮುಂದೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ಅಂಗಡಿ ಮಾಲೀಕನನ್ನೇ ಹೊಡೆದು ಕೊಂದ ಯುವಕರು! Video
ಮೂತ್ರವಿಸರ್ಜನೆ ವಿಚಾರಕ್ಕೆ ಗಲಾಟೆ
Published On :

ಕಾನ್ಪುರ: ಮಾರುಕಟ್ಟೆ ಹಾಗೂ ಅದರ ಎದುರಿನ ಮನೆಗಳ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ನಾಲ್ವರನ್ನು ಪ್ರಶ್ನಿಸಿದ್ದಕ್ಕೆ ವ್ಯಾಪಾರಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಕೊಂದು ಹಾಕಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರದ ಸೂಪರ್ ಮಾರುಕಟ್ಟೆ ಮತ್ತು ಮನೆಗಳ ಎದುರೇ 4 ಮಂದಿ ಯುವಕರ ತಂಡವೊಂದು ಮೂತ್ರ ವಿಸರ್ಜನೆ ಮಾಡಿದ್ದು, ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕನ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಎರಡು ದಿನಗಳ ಬಳಿಕ ಮೃತಪಟ್ಟಿದ್ದಾರೆ.

ಮೃತರನ್ನು ಅಮಿತ್ ಗುಪ್ತಾ ಎಂದು ಗುರುತಿಸಲಾಗಿದ್ದು, ಅವರು ಅಲ್ಲಿ ಆಟೋಮೊಬೈಲ್ ವ್ಯಾಪಾರಿಯಾಗಿದ್ದರು. ಅಮಿತ್ ಅವರು ಮಾರುಕಟ್ಟೆಯ ಹೊರಗೆ ನಿಂತಿದ್ದ ವೇಳೆ ನಾಲ್ವರು ವ್ಯಕ್ತಿಗಳು ಮಾರುಕಟ್ಟೆಯ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಅವರು ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ.

ಮಾರುಕಟ್ಟೆಯ ಎದುರಲ್ಲೇ ಮನೆಗಳಿರುವುದರಿಂದ ಅಲ್ಲಿ ಮೂತ್ರ ವಿಸರ್ಜನೆ ಮಾಡದಂತೆ ಅಮಿತ್ ಅವರು ನಾಲ್ವರಿಗೆ ಮನವಿ ಮಾಡಿದ್ದಾರೆ. ಆದರೆ, ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ನಾಲ್ವರು ಅಮಿತ್ ಅವರೊಂದಿಗೆ ಜಗಳಕ್ಕಿಳಿದು, ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾರೆ.

ರಸ್ತೆಯಲ್ಲೇ ಮನಸೋ ಇಚ್ಚೆ ಥಳಿತ

ಆರೋಪಿಗಳು ಅಮಿತ್ ಅವರನ್ನು ಕೆಳಗೆ ಬೀಳಿಸಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

CCTVಯಲ್ಲಿ ಭೀಕರ ಹಲ್ಲೆ

ಅಮಿತ್ ಅವರ ಕುಟುಂಬದ ಮನೆಯ ಹೊರಭಾಗದಲ್ಲಿದ್ದ CCTV ಕ್ಯಾಮೆರಾದಲ್ಲಿ ಸಂಪೂರ್ಣ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಆರೋಪಿಗಳು ಅಮಿತ್ ಅವರನ್ನು ಥಳಿಸುತ್ತಿರುವುದು ಹಾಗೂ ಅವರು ರಸ್ತೆಗೆ ಬಿದ್ದ ಬಳಿಕವೂ ಹಲ್ಲೆ ಮುಂದುವರಿಸಿರುವುದು ಕಂಡುಬಂದಿದೆ.

ಕುಟುಂಬಸ್ಥರು CCTV ದೃಶ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆದರೆ, CCTV ಸಾಕ್ಷ್ಯವಿದ್ದರೂ ಘಟನೆ ನಡೆದ ಸುಮಾರು 72 ಗಂಟೆಗಳ ಬಳಿಕವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, CCTV ದೃಶ್ಯದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸರು ಅಮಿತ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ದೌಡಾಯಿಸಿದ ಕುಟುಂಬಸ್ಥರು

ಘಟನೆ ಕುರಿತು ಮಾಹಿತಿ ಪಡೆದ ಕುಟುಂಬಸ್ಥರು ತಕ್ಷಣ ಅಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದರೂ ತಲೆಗೆ ಆಗಿದ್ದ ಗಂಭೀರ ಗಾಯದ ಪರಿಣಾಮ ಅವರು ಪ್ರಜ್ಞೆಗೆ ಮರಳಲಿಲ್ಲ. ಹಲ್ಲೆ ನಡೆದ ಎರಡು ದಿನಗಳ ಬಳಿಕ ಅಮಿತ್ ಮೃತಪಟ್ಟಿದ್ದಾರೆ.

ಅಮಿತ್ ಅವರಿಗೆ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರಿದ್ದಾರೆ. ದುರಂತವೆಂದರೆ, ಘಟನೆಗೂ ಕೆಲವೇ ದಿನಗಳ ಮೊದಲು ಅವರ ತಾಯಿ ಕೂಡ ಮೃತಪಟ್ಟಿದ್ದರು. ತಾಯಿಯ ಸಾವಿನ ನೋವಿನಿಂದ ಕುಟುಂಬ ಹೊರಬರುವ ಮುನ್ನವೇ ಮತ್ತೊಂದು ಆಘಾತ ಎದುರಾಗಿದೆ.

‘ಭಯವಾಗುತ್ತಿದೆ’

ಅಮಿತ್ ಅವರ ಪತ್ನಿ ಶಾಲಿನಿ ಗುಪ್ತಾ, ಸಹೋದರಿ ಶಿವಾನಿ ಸೇರಿದಂತೆ ಕುಟುಂಬಸ್ಥರು ಆರೋಪಿಗಳ ಬಂಧನವಾಗದಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಭಯವಾಗುತ್ತಿದೆ ಎಂದು ಶಾಲಿನಿ ಹೇಳಿದ್ದಾರೆ.

ಆರೋಪಿಗಳು ಇನ್ನೂ ಹೊರಗಿರುವುದರಿಂದ ಮಕ್ಕಳು ತಾವು ಪ್ರತಿದಿನ ಓಡಾಡುವ ಅದೇ ರಸ್ತೆಯಲ್ಲಿ ದೂರು ನೀಡಲು ಕೂಡ ಹೆದರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಮನೆ ಮುಂದೆ ಮೂತ್ರ ವಿಸರ್ಜನೆ ಮಾಡಬೇಡಿ ಎಂದು ಹೇಳಿದ್ದಕ್ಕೆ ಒಬ್ಬ ವ್ಯಕ್ತಿಯನ್ನು ಕೊಲ್ಲುವಷ್ಟು ದ್ವೇಷ ಏಕೆ? ಈ ಘಟನೆ ನಮ್ಮ ಕುಟುಂಬವನ್ನೇ ನಾಶ ಮಾಡಿದೆ. ನಮಗೆ ನ್ಯಾಯ ಬೇಕು. ನನ್ನ ಮಕ್ಕಳ ಸುರಕ್ಷತೆಯನ್ನು ಪೊಲೀಸರು ಖಚಿತಪಡಿಸಬೇಕು” ಎಂದು ಶಾಲಿನಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.