ಮತದಾನದ ರಹಸ್ಯ ಕಾಪಾಡಲು EVM ಮತ ಎಣಿಕೆಯಲ್ಲಿ ಟೋಟಲೈಸರ್? ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್
ಮತದಾರರ ಗೌಪ್ಯತೆ ರಕ್ಷಣೆಗೆ ಹೊಸ ಹೆಜ್ಜೆ: ಬೂತ್ ಮಟ್ಟದ ಪ್ರೊಫೈಲಿಂಗ್ ತಡೆಯಲು ಇವಿಎಂ ಮತ ಎಣಿಕೆಗೆ ಟೋಟಲೈಸರ್ ತರಲು ಸುಪ್ರೀಂ ಚಿಂತನೆ. ಇವಿಎಂ ಟೋಟಲೈಸರ್ ವ್ಯವಸ್ಥೆ ಸಾಧ್ಯತೆ ಪರಿಶೀಲನೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಚುನಾವಣೆಯಲ್ಲಿ ಎಲ್ಲರೂ ಒಬ್ಬನೇ ಅಭ್ಯರ್ಥಿಗೆ ಮತಹಾಕೋಕೆ ಸಾಧ್ಯವಿಲ್ಲ. ಅದರಂತೆ, ಪ್ರತಿಯೊಬ್ಬ ಮತದಾರನು ತಮಗೆ ಬೇಕಾದ ಅಭ್ಯರ್ಥಿಗೆ ಮತಹಾಕಿ, ತಮ್ಮ ನಾಯಕನನ್ನ ಚುನಾವಣೆಯಲ್ಲಿ ಗೆಲ್ಲಿಸಲು ಪಣತೊಡುತ್ತಾರೆ. ಹೀಗೆ ಗೆದ್ದ ಕೆಲ ನಾಯಕರು, ಮತಎಣಿಕೆಯ ವೇಳೆಯಲ್ಲಿ ನಿರ್ದಿಷ್ಟ ಪ್ರದೇಶದ ಜನರು ತಮಗೆ ಮತ ಹಾಕಿಲ್ಲ ಎಂದು ತಿಳಿದಾಗ, ಆ ಪ್ರದೇಶದ ಅಭಿವೃದ್ಧಿಯನ್ನು ಕಡೆಗಣಿಸುವುದು ಸಾಮಾನ್ಯವಾಗಿ ನಡೆಯುತ್ತದೆ. ಆದರೆ, ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರಿವ ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್, ವಿದ್ಯುನ್ಮಾನ ಮತಯಂತ್ರಗಳಲ್ಲಿ (EVM) ಮತ ಎಣಿಕೆಗೆ ‘ಟೋಟಲೈಸರ್’ (Totaliser) ಯಂತ್ರಗಳನ್ನು ಬಳಸುವ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂನ ತ್ರಿಸದಸ್ಯ ಪೀಠವು, ಪೇಪರ್ ಬ್ಯಾಲಟ್‌ಗಳ ಎಣಿಕೆಗೆ ಅವಕಾಶ ನೀಡುವ ಚುನಾವಣಾ ನಡವಳಿಕೆ ನಿಯಮಗಳು 1961 (Conduct of Elections Rules, 1961) ಕ್ಕೆ ಸೂಕ್ತ ತಿದ್ದುಪಡಿ ತಂದು, ಅದನ್ನು ಇವಿಎಂಗಳಿಗೂ ಅನ್ವಯಿಸಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹಾಗಾದ್ರೆ, ಏನಿದು ಟೋಟಲೈಸರ್? ಇದರ ಬಳಕೆಯಿಂದ ಆಗುವ ಉಪಯೋಗವಾದರೂ ಏನು? ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
ಟೋಟಲೈಸರ್ ಎಂದರೇನು?
ಪ್ರಸ್ತುತ ವ್ಯವಸ್ಥೆಯಲ್ಲಿ, ಪ್ರತಿ ಮತಗಟ್ಟೆಯ ಇವಿಎಂ ಅನ್ನು ಪ್ರತ್ಯೇಕವಾಗಿ ಎಣಿಸಲಾಗುತ್ತದೆ. ಇದರಿಂದ ಯಾವ ಮತಗಟ್ಟೆಯಲ್ಲಿ ಅಥವಾ ಯಾವ ಪ್ರದೇಶದ ಜನರು ಯಾವ ಅಭ್ಯರ್ಥಿಗೆ ಎಷ್ಟು ಮತ ಹಾಕಿದ್ದಾರೆ ಎಂಬುದು ಬಹಿರಂಗವಾಗುತ್ತದೆ. ಆದರೆ, ಈ ಟೋಟಲೈಸರ್ ಎನ್ನುವುದು ಒಂದೇ ಬಾರಿಗೆ ಸುಮಾರು 14 ಇವಿಎಂ ಯಂತ್ರಗಳನ್ನು ಸಂಪರ್ಕಿಸಿ, ಒಟ್ಟಾರೆಯಾಗಿ ಒಟ್ಟು ಮತಗಳನ್ನು ಎಣಿಸುವ ತಂತ್ರಜ್ಞಾನವಾಗಿದೆ. ಅದರಂತೆ, ಈ ಯಂತ್ರವನ್ನು ಬಳಸುವುದರಿಂದ ನಿರ್ದಿಷ್ಟ ಬೂತ್‌ನಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಮತಗಳು ಬಂದಿವೆ ಎಂಬುದು ತಿಳಿಯುವುದಿಲ್ಲ; ಬದಲಿಗೆ 14 ಬೂತ್‌ಗಳ ಒಟ್ಟು ಫಲಿತಾಂಶ ಒಟ್ಟಿಗೆ ತಿಳಿಯುತ್ತದೆ.
ಇದರ ಮುಖ್ಯ ಉದ್ದೇಶವೇನು?
ಮತದಾರರ ರಕ್ಷಣೆ: ನಿರ್ದಿಷ್ಟ ಪ್ರದೇಶದ ಜನರು ತಮಗೆ ಮತ ಹಾಕಿಲ್ಲ ಎಂದು ತಿಳಿದಾಗ ರಾಜಕೀಯ ಮುಖಂಡರು ಆ ಪ್ರದೇಶದ ಅಭಿವೃದ್ಧಿಯನ್ನು ಕಡೆಗಣಿಸುವುದು ಅಥವಾ ಮತದಾರರಿಗೆ ಬೆದರಿಕೆ ಹಾಕುವುದು ಸಾಮಾನ್ಯವಾಗಿ ನಡೆಯುತ್ತದೆ. ಆದರೆ, ಟೋಟಲೈಸರ್ ಬಳಕೆಯಿಂದ ಮತದಾರರ ಈ ಬಗೆಯ ಕಿರುಕುಳ ತಪ್ಪುತ್ತದೆ.
ಬೂತ್ ಮಟ್ಟದ ಪ್ರೊಫೈಲಿಂಗ್ ನಿಯಂತ್ರಣ: ಜಾತಿ, ಸಮುದಾಯ ಅಥವಾ ನಿರ್ದಿಷ್ಟ ಕಾಲೋನಿಗಳ ಮತದಾನದ ಪ್ರವೃತ್ತಿ ರಾಜಕೀಯ ಪಕ್ಷಗಳಿಗೆ ಸುಲಭವಾಗಿ ಸಿಗದಂತೆ ಇದು ತಡೆಯುತ್ತದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ: ಸಂವಿಧಾನ ನೀಡಿರುವ ಮತದಾನದ ರಹಸ್ಯದ ಹಕ್ಕನ್ನು ಇದು ಹೆಚ್ಚು ಬಲಪಡಿಸುತ್ತದೆ.
ಆದರೆ, ಚುನಾವಣಾ ಆಯೋಗವು ನಡೆಸಿದ ಸರ್ವಪಕ್ಷ ಸಭೆಯಲ್ಲಿ ಶೇ. 50 ರಷ್ಟು ರಾಷ್ಟ್ರೀಯ ಪಕ್ಷಗಳು ಮತ್ತು ಶೇ. 68 ರಷ್ಟು ರಾಜ್ಯ ಮಟ್ಟದ ಪಕ್ಷಗಳು ಈ ವ್ಯವಸ್ಥೆಯನ್ನು ವಿರೋಧಿಸಿವೆ. ಜೊತೆಗೆ, ಪ್ರತಿ ಬೂತ್‌ನ ಮತದಾನದ ನಂತರ ಚುನಾವಣಾ ಅಧಿಕಾರಿಗಳು ಫಾರ್ಮ್ 17Cಯಲ್ಲಿ ಒಟ್ಟು ಮತಗಳ ಲೆಕ್ಕ ದಾಖಲಿಸುತ್ತಾರೆ. ಟೋಟಲೈಸರ್ ಮೂಲಕ ಹಲವು ಬೂತ್‌ಗಳ ಮತಗಳು ಒಟ್ಟಿಗೆ ಎಣಿಕೆಯಾದರೆ, ಅಭ್ಯರ್ಥಿಗಳಿಗೆ ಬೂತ್ ಮಟ್ಟದಲ್ಲಿ ಫಾರ್ಮ್ 17C ತಾಳೆ ನೋಡಲು ಕಷ್ಟವಾಗುತ್ತದೆ. ಯಾವುದಾದರೂ ಒಂದು ಯಂತ್ರದಲ್ಲಿ ದೋಷವಿದ್ದರೆ ಅದನ್ನು ಗುರುತಿಸುವುದು ಕಷ್ಟವಾಗುತ್ತದೆ ಎನ್ನಲಾಗಿದೆ. ಇದರೊಂದಿಗೆ, ಪ್ರಸ್ತುತ ನಿಯಮಗಳ ಪ್ರಕಾರ ಪ್ರತಿ ವಿಧಾನಸಭಾ ಕ್ಷೇತ್ರದ 5 ರಾಂಡಮ್ ಇವಿಎಂಗಳ ವಿವಿಪ್ಯಾಟ್ ಪೇಪರ್ ಸ್ಲಿಪ್‌ಗಳನ್ನು ಎಣಿಸಿ ತಾಳೆ ಮಾಡಲಾಗುತ್ತದೆ. ಆದರೆ, ಟೋಟಲೈಸರ್ ಬಳಸಿದರೆ ಈ ವಿವಿಪ್ಯಾಟ್ ಪರಿಶೀಲನಾ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗಬಹುದು.
ಏತನ್ಮಧ್ಯೆ, ಇದಕ್ಕೂ ಮುನ್ನ 255ನೇ ಕಾನೂನು ಆಯೋಗದ ವರದಿಯು ಟೋಟಲೈಸರ್ ಬಳಕೆಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ, ನಿಯಮ 59A ಅಡಿಯಲ್ಲಿ ಪೇಪರ್ ಬ್ಯಾಲಟ್‌ಗಳನ್ನು ಒಟ್ಟಿಗೆ ಸೇರಿಸಿ ಎಣಿಸುವ ಪದ್ಧತಿಯಂತೆಯೇ ಇವಿಎಂಗಳಿಗೂ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ ಮತ್ತು ಇದರಿಂದ ಆಗುವ ಸಾಧಕ-ಬಾಧಕಗಳೇನು ಎಂಬುದರ ಕುರಿತು ವಿಸ್ತೃತ ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಚಿಪ್ಸ್ ತಿನ್ನೋ ಮುನ್ನ ಎಚ್ಚರ; ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಆದೇಶ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



