ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!
ಗಂಡನನ್ನು ಕೊಂದು, ದೇಹವನ್ನು ತುಂಡರಿಸಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಸಿಮೆಂಟ್ ಮತ್ತು ಮರಳಿನ ಮಿಶ್ರಣದೊಂದಿಗೆ ಮುಚ್ಚಿಟ್ಟಿದ್ದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. ಪ್ರಕರಣದ ವಿಚಾರಣೆ ವೇಳೆ ನೀಲಿ ಡ್ರಮ್..

ಮೀರುತ್: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರುತ್ನ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಕಳೆದ ವರ್ಷ ನಡೆದಿದ್ದ ಈ ಭೀಕರ ಕೊಲೆ ಪ್ರಕರಣದಲ್ಲಿ ಇಬ್ಬರೂ ತಪ್ಪಿತಸ್ಥರೆಂದು ಎರಡು ವಾರಗಳ ಹಿಂದೆ ನ್ಯಾಯಾಲಯ ತೀರ್ಪು ನೀಡಿತ್ತು. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.
ಗಂಡನನ್ನು ಕೊಂದು, ದೇಹವನ್ನು ತುಂಡರಿಸಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಸಿಮೆಂಟ್ ಮತ್ತು ಮರಳಿನ ಮಿಶ್ರಣದೊಂದಿಗೆ ಮುಚ್ಚಿಟ್ಟಿದ್ದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. ಪ್ರಕರಣದ ವಿಚಾರಣೆ ವೇಳೆ ನೀಲಿ ಡ್ರಮ್ ಪ್ರಮುಖ ಸಾಕ್ಷ್ಯವಾಗಿ ಗಮನ ಸೆಳೆದಿತ್ತು ಎನ್ನಲಾಗಿದೆ.
ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು 126 ವಿಚಾರಣೆಗಳು ಮತ್ತು 22 ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದ ಬಳಿಕ, ಸೌರಭ್ ಹತ್ಯೆಗೆ ಮುಸ್ಕಾನ್ ಮತ್ತು ಸಾಹಿಲ್ ಸಂಚು ರೂಪಿಸಿದ್ದರು ಎಂದು ತೀರ್ಮಾನಿಸಿದರು. ಇಂತಹ ಅಪರಾಧಗಳು ಇಡೀ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು.
ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ?
ಪೊಲೀಸರ ಪ್ರಕಾರ, 2025ರ ಮಾರ್ಚ್ 3ರಂದು ಮೀರುತ್ನ ಇಂದ್ರಾ ನಗರದಲ್ಲಿರುವ ಮನೆಯಲ್ಲಿ ಮುಸ್ಕಾನ್ ತನ್ನ ಪತಿ ಸೌರಭ್ ರಾಜ್ಪೂತ್ಗೆ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು ಎನ್ನಲಾಗಿದೆ. ಬಳಿಕ ಅಲ್ಲಿಗೆ ಬಂದ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.
ನಂತರ ಬಾತ್ರೂಮ್ನಲ್ಲಿ ಮೃತದೇಹವನ್ನು ತುಂಡರಿಸಿ, ಕೊಳೆತ ವಾಸನೆ ಹೊರಬರದಂತೆ ದೇಹದ ಭಾಗಗಳನ್ನು ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿದ್ದರು. ಬಳಿಕ ಅದಕ್ಕೆ ಮರಳು, ನೀರು ಮತ್ತು ಸಿಮೆಂಟ್ನ ಮಿಶ್ರಣವನ್ನು ಹಾಕಿ ಮುಚ್ಚಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಹಿಮಾಚಲ ಪ್ರದೇಶಕ್ಕೆ ಪರಾರಿ; ಗಂಡ ಬದುಕಿದ್ದಾನೆಂದು ನಂಬಿಸಲು ಯತ್ನ
ಕೊಲೆಯ ಮರುದಿನವೇ ಮುಸ್ಕಾನ್ ಮತ್ತು ಸಾಹಿಲ್ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಈ ನಡುವೆ ಮುಸ್ಕಾನ್, ಸೌರಭ್ ಅವರ ಮೊಬೈಲ್ ಫೋನ್ ಬಳಸಿ ಕುಟುಂಬದವರಿಗೆ ಸಂದೇಶಗಳನ್ನು ಕಳುಹಿಸಿದ್ದಳು. ಸೌರಭ್ ಇನ್ನೂ ಬದುಕಿದ್ದು, ವ್ಯವಹಾರದ ನಿಮಿತ್ತ ಪ್ರಯಾಣದಲ್ಲಿದ್ದಾರೆ ಎಂಬ ಭಾವನೆ ಮೂಡಿಸಲು ಈ ರೀತಿ ಮಾಡಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.
ಡ್ರಮ್ ನಲ್ಲಿ ಸೌರಭ್ ಶವ ಪತ್ತೆ
2025ರ ಮಾರ್ಚ್ 17ರಂದು ಸೌರಭ್ ಅವರ ಸಂಬಂಧಿಕರಿಗೆ ಅನುಮಾನ ಬಂದು, ಸ್ಥಳೀಯ ಅಧಿಕಾರಿಗಳೊಂದಿಗೆ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ದಂಪತಿಯ ಆರು ವರ್ಷದ ಮಗಳು ನೆರೆಹೊರೆಯವರಿಗೆ, “ಪಪ್ಪಾ ಡ್ರಮ್ನಲ್ಲಿದ್ದಾರೆ” ಎಂದು ಹೇಳಿದ್ದಳು ಎನ್ನಲಾಗಿದೆ.
ಬಳಿಕ ಪೊಲೀಸರು ಮುಚ್ಚಿದ್ದ ನೀಲಿ ಡ್ರಮ್ ಅನ್ನು ತೆರೆದಾಗ ಅದರೊಳಗೆ ಸೌರಭ್ ಅವರ ದೇಹದ ಅವಶೇಷಗಳು ಪತ್ತೆಯಾಗಿದ್ದವು. ಈ ಬೆಳವಣಿಗೆಯ ನಂತರ ಆರೋಪಿಗಳಿಗಾಗಿ ಶೋಧ ನಡೆಸಿದ ಪೊಲೀಸರು ಎರಡು ದಿನಗಳ ಬಳಿಕ ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಿದ್ದರು.
ಅಂಗಡಿಗಳ ಬಿಲ್, ಮೊಬೈಲ್ ದಾಖಲೆಗಳೇ ಪ್ರಮುಖ ಸಾಕ್ಷ್ಯ
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಸಾಂದರ್ಭಿಕ, ತಾಂತ್ರಿಕ ಮತ್ತು ಭೌತಿಕ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿತ್ತು. ಕೊಲೆಗೆ ಮುನ್ನ ಆರೋಪಿಗಳು ನೀಲಿ ಪ್ಲಾಸ್ಟಿಕ್ ಡ್ರಮ್, ಸಿಮೆಂಟ್ ಚೀಲಗಳು, ಮರಳು, ಮಾಂಸ ಕತ್ತರಿಸುವ ಸಾಧನಗಳು ಮತ್ತು ರೇಜರ್ಗಳನ್ನು ಖರೀದಿಸಿದ್ದರು ಎಂದು ಸ್ಥಳೀಯ ಅಂಗಡಿಕಾರರು ಸಾಕ್ಷ್ಯ ನುಡಿದಿದ್ದರು.
ಕರೆಗಳ ವಿವರಗಳು (Call Detail Records) ಹಾಗೂ ಮೊಬೈಲ್ ಟವರ್ಗಳ ಸ್ಥಳದ ಮಾಹಿತಿ, ಕೊಲೆ ನಡೆದ ಸಮಯದಲ್ಲಿ ಸಾಹಿಲ್ ಮನೆಯಲ್ಲಿದ್ದುದನ್ನು ಸೂಚಿಸಿವೆ ಎಂದು ಪ್ರಾಸಿಕ್ಯೂಷನ್ ತಿಳಿಸಿತ್ತು. ಅಲ್ಲದೆ, ಆರೋಪಿಗಳು ಒಟ್ಟಿಗೆ ಶಿಮ್ಲಾ ಮತ್ತು ಮನಾಲಿಯ ಹೋಟೆಲ್ಗಳಲ್ಲಿ ತಂಗಿದ್ದ ಮಾಹಿತಿಯೂ ತನಿಖೆಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯೂ ಸೌರಭ್ ಚೂರಿ ಇರಿತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



