ನೀಲಿ ಡ್ರಮ್ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!
ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೀರತ್ನ ನೀಲಿ ಡ್ರಮ್ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ, ತೀರ್ಪಿನ ಬಳಿಕ ಆತಂಕ..

ಮೀರತ್: ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ರನ್ನು ಭೀಕರವಾಗಿ ಕೊಂದು ದೇಹವನ್ನು ತುಂಡಾಗಿ ಕತ್ತರಿಸಿ ನೀಲಿ ಡ್ರಮ್ ನಲ್ಲಿ ಹಾಕಿದ್ದ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಇದೀಗ ಜೈಲಲ್ಲೇ ನಿದ್ರೆ-ಊಟ ಬಿಟ್ಟು ಕಂಗಾಲಾಗಿದ್ದಾರೆ ಎನ್ನಲಾಗಿದೆ.
ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೀರತ್ನ ನೀಲಿ ಡ್ರಮ್ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ, ತೀರ್ಪಿನ ಬಳಿಕ ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ. ಇಬ್ಬರೂ ಊಟವನ್ನೂ ಮಾಡದೆ ಮಾನಸಿಕವಾಗಿ ವಿಚಲಿತರಾಗಿದ್ದಾರೆ ಎಂದು ಜೈಲು ಆಡಳಿತದ ಮೂಲಗಳು ತಿಳಿಸಿವೆ.
ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್ಪೂತ್ ಅವರನ್ನು ಕೊಂದು, ಅವರ ದೇಹವನ್ನು ಸಿಮೆಂಟ್ ತುಂಬಿದ ಡ್ರಮ್ನಲ್ಲಿ ಅಡಗಿಸಿದ್ದ ಪ್ರಕರಣದಲ್ಲಿ ಮುಸ್ಕಾನ್ ಮತ್ತು ಸಾಹಿಲ್ಗೆ ಮೀರತ್ ಕೋರ್ಟ್ ಇತ್ತೀಚೆಗೆ ಮರಣದಂಡನೆ ವಿಧಿಸಿತ್ತು. ಬುಧವಾರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ಬಳಿಕ ಇಬ್ಬರ ಆತಂಕ ಹೆಚ್ಚಾಗಿದೆ. ವಿಶೇಷವಾಗಿ, ತನ್ನ 10 ತಿಂಗಳ ಮಗಳು ರಾಧಾಳ ಭವಿಷ್ಯ ಮತ್ತು ಆರೈಕೆಯ ಬಗ್ಗೆ ಮುಸ್ಕಾನ್ ಚಿಂತಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋರ್ಟ್ ತೀರ್ಪಿಗೂ ಮುನ್ನ ಮತ್ತು ಬಳಿಕ ಇಬ್ಬರೂ ಊಟ ಮಾಡಿಲ್ಲ ಎಂದು ಜೈಲು ಆಡಳಿತದ ಮೂಲಗಳು ಹೇಳಿವೆ. ಮರಣದಂಡನೆ ಶಿಕ್ಷೆ ಪ್ರಕಟವಾದಾಗ ಮುಸ್ಕಾನ್ ಅಚ್ಚರಿ ಮತ್ತು ಅವಿಶ್ವಾಸ ವ್ಯಕ್ತಪಡಿಸುವ ರೀತಿಯಲ್ಲಿ “ಅರ್ರೆ!” ಎಂದು ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.
ಬಿಳಿ ಬಣ್ಣದ ಜೈಲು ಸಮವಸ್ತ್ರ, ಕೆಲಸದ ಜವಾಬ್ದಾರಿ
ನ್ಯಾಯಾಲಯಕ್ಕೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದ್ದ ಇಬ್ಬರನ್ನೂ ಪ್ರತ್ಯೇಕ ಬ್ಯಾರಕ್ಗಳಲ್ಲಿ ಇರಿಸಲಾಗಿದೆ. ಮುಸ್ಕಾನ್ ಅವರನ್ನು 12ಬಿ ಬ್ಯಾರಕ್ನಲ್ಲಿ ಹಾಗೂ ಸಾಹಿಲ್ ಅವರನ್ನು 15ನೇ ಬ್ಯಾರಕ್ನಲ್ಲಿ ಇರಿಸಲಾಗಿದೆ.
ಕೈದಿ ಸಂಖ್ಯೆ ನಿಯೋಜನೆ
ಜೈಲು ನಿಯಮದಂತೆ ಇಬ್ಬರಿಗೂ ಉಡುಪುಗಳನ್ನು ನೀಡಲಾಗಿದೆ. ಸಾಹಿಲ್ಗೆ ಎರಡು ಜೊತೆ ಬಿಳಿ ಕುರ್ತಾ-ಪೈಜಾಮಾ ನೀಡಲಾಗಿದ್ದು, ಮುಸ್ಕಾನ್ಗೆ ಬಿಳಿ ಸೀರೆ ಮತ್ತು ಕೆನೆ ಬಣ್ಣದ ಉಡುಪು ನೀಡಲಾಗಿದೆ.
ಜೈಲಿನ ದಿನಚರಿಯ ಭಾಗವಾಗಿ ಮುಸ್ಕಾನ್ಗೆ ಹೊಲಿಗೆ ಕೆಲಸ ಹಾಗೂ ಸಾಹಿಲ್ಗೆ ಕೃಷಿ ಕೆಲಸವನ್ನು ವಹಿಸಲಾಗಿದೆ. ಜೈಲಿನ ದಾಖಲೆಗಳಿಗಾಗಿ ಇಬ್ಬರಿಗೂ ಕೈದಿ ಸಂಖ್ಯೆಗಳನ್ನು ನೀಡಲಾಗಿದ್ದು, ಸಾಹಿಲ್ಗೆ 395/2026 ಮತ್ತು ಮುಸ್ಕಾನ್ಗೆ 396/2026 ಸಂಖ್ಯೆ ನಿಗದಿಪಡಿಸಲಾಗಿದೆ.
ಏನಿದು ನೀಲಿ ಡ್ರಮ್ ಪ್ರಕರಣ?
2025ರ ಮಾರ್ಚ್ 3ರಂದು ಮೀರತ್ನ ಬ್ರಹ್ಮಪುರಿ ಪ್ರದೇಶದಲ್ಲಿ ಸೌರಭ್ ರಾಜ್ಪೂತ್ ಅವರನ್ನು ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ಸಿಮೆಂಟ್ ತುಂಬಿದ ನೀಲಿ ಡ್ರಮ್ನಲ್ಲಿ ಅಡಗಿಸಲಾಗಿತ್ತು. ಸುಮಾರು ಎರಡು ವಾರಗಳ ಬಳಿಕ ದಂಪತಿಯ ಮನೆಯಲ್ಲಿ ಅವಶೇಷಗಳು ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಮುಸ್ಕಾನ್ ಮತ್ತು ಸಾಹಿಲ್ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಸೌರಭ್ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಸೆಪ್ಟೆಂಬರ್ 30ರಂದು ಇಬ್ಬರೂ ದೋಷಿಗಳೆಂದು ತೀರ್ಪು ನೀಡಲಾಗಿತ್ತು.
ಬಳಿಕ ನಡೆದ ಶಿಕ್ಷೆಯ ವಿಚಾರಣೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಮಹಾಭಾರತವನ್ನು ಉಲ್ಲೇಖಿಸಿ, ಶಿಕ್ಷೆಯೂ ಧರ್ಮದ ಒಂದು ರೂಪವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಒಟ್ಟು 126 ವಿಚಾರಣೆಗಳು ನಡೆದ 13 ತಿಂಗಳ ವಿಚಾರಣೆಯ ಬಳಿಕ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




