ದೇಶ

H-1B ವೀಸಾ ಉದ್ಯೋಗಿಗಳನ್ನು 'ಜಿಗಿತದಾಳುಗಳು' ಎಂದ ಜೆಡಿ ವ್ಯಾನ್ಸ್: 'ವಸಾಹತುಶಾಹಿ ಮನಸ್ಥಿತಿ ಬಿಡಿ'; ಭಾರತ ತೀವ್ರ ಆಕ್ರೋಶ..!

ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಅಮೆರಿಕದ ಕಾರ್ಮಿಕರ ವೇತನವನ್ನು ಕಡಿಮೆ ಮಾಡಲಾಗುತ್ತಿದೆ ಮತ್ತು ಸ್ಥಳೀಯ ಉದ್ಯೋಗಿಗಳ ಬದಲಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.

H-1B ವೀಸಾ ಉದ್ಯೋಗಿಗಳನ್ನು 'ಜಿಗಿತದಾಳುಗಳು' ಎಂದ ಜೆಡಿ ವ್ಯಾನ್ಸ್: 'ವಸಾಹತುಶಾಹಿ ಮನಸ್ಥಿತಿ ಬಿಡಿ'; ಭಾರತ ತೀವ್ರ ಆಕ್ರೋಶ..!
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
Published On :

ನವದೆಹಲಿ: ಎಚ್-1ಬಿ (H-1B) ವೀಸಾ ಹೊಂದಿರುವ ಭಾರತೀಯ ವೃತ್ತಿಪರರನ್ನು "ಜೀತದಾಳುಗಳು" ಎಂದು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕರೆದಿದ್ದು, ಈ ಹೇಳಿಕೆಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗುರುವಾರ ವೀಸಾ ವಂಚನೆ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರು, H-1B ವೀಸಾ ಉದ್ಯೋಗಿಗಳನ್ನು “indentured servants” (ಸಾಲ ಅಥವಾ ಒಪ್ಪಂದದ ಬಂಧನದಲ್ಲಿ ದುಡಿಯುವ ಕಾರ್ಮಿಕರು) ಎಂದು ಬಣ್ಣಿಸಿದ್ದರು.

ಅಮೆರಿಕದ ಸಮಾನ ಹುದ್ದೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೋಲಿಸಿದರೆ H-1B ವೀಸಾ ಹೊಂದಿರುವವರು ಕಡಿಮೆ ವೇತನ ಪಡೆಯುತ್ತಿದ್ದಾರೆ. ವಿದೇಶಿ ಹೊರಗುತ್ತಿಗೆ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆತಂದು, ಇಲ್ಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ ಎಂದೂ ಆರೋಪಿಸಿದ್ದರು.

ಅಮೆರಿಕದಲ್ಲಿ H-1B ವೀಸಾದಡಿ ಕೆಲಸ ಮಾಡುತ್ತಿದ್ದರೆ, ಅದೇ ಹುದ್ದೆಯಲ್ಲಿ ನೇಮಕಗೊಂಡಿರುವ ಅಮೆರಿಕದ ಪ್ರಜೆಗೆ ಹೋಲಿಸಿದರೆ ನೀವು 20,000 ಡಾಲರ್ ಕಡಿಮೆ ವೇತನ ಪಡೆಯುತ್ತಿದ್ದೀರಿ. ಈ ವಿದೇಶಿ ಹೊರಗುತ್ತಿಗೆ ಕಂಪನಿಗಳಲ್ಲಿ ಯಾವುದಾದರೂ ನಿಮ್ಮನ್ನು ಕರೆತಂದಿದ್ದರೆ, ಅದೇ ರೀತಿಯ ಹುದ್ದೆಯಲ್ಲಿರುವ ಅಮೆರಿಕದ ಪ್ರಜೆಗೆ ಹೋಲಿಸಿದರೆ ನೀವು 48,000 ಡಾಲರ್ ಕಡಿಮೆ ವೇತನ ಪಡೆಯುತ್ತಿದ್ದೀರಿ ಎಂದು ಹೇಳಿದ್ದರು.

ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಅಮೆರಿಕದ ಕಾರ್ಮಿಕರ ವೇತನವನ್ನು ಕಡಿಮೆ ಮಾಡಲಾಗುತ್ತಿದೆ ಮತ್ತು ಸ್ಥಳೀಯ ಉದ್ಯೋಗಿಗಳ ಬದಲಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.

ವಾನ್ಸ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇಂತಹ ಪದಬಳಕೆಯು ವಸಾಹತುಶಾಹಿ ಮನಸ್ಥಿತಿಯನ್ನು ನೆನಪಿಸುತ್ತದೆ ಮತ್ತು ಅಮೆರಿಕದ ಆರ್ಥಿಕ ಪ್ರಗತಿಗೆ ಭಾರತೀಯರು ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಅಪಮಾನಿಸಿದಂತಾಗಿದೆ ಎಂದು ತಿಳಿಸಿದೆ.

ಇಂತಹ ವರ್ಣನೆಗಳು ಅನಗತ್ಯವಾಗಿದ್ದು, ಅಮೆರಿಕದ ಆರ್ಥಿಕತೆ ಮತ್ತು ಆವಿಷ್ಕಾರ ವ್ಯವಸ್ಥೆಗೆ ಭಾರತೀಯ ವೃತ್ತಿಪರರು ನೀಡಿರುವ ಕೊಡುಗೆಯನ್ನು ಕಡೆಗಣಿಸುತ್ತವೆ ಎಂದು ಹೇಳಿದೆ.

ಅಮೆರಿಕದ ಬೆಳವಣಿಗೆ ಮತ್ತು ಸಮೃದ್ಧಿಯನ್ನು ರೂಪಿಸುವಲ್ಲಿ ಹಲವು ತಲೆಮಾರುಗಳ ವಲಸಿಗರು ಮಹತ್ವದ ಪಾತ್ರ ವಹಿಸಿರುವುದನ್ನೂ ಸಚಿವಾಲಯ ಉಲ್ಲೇಖಿಸಿದೆ.

ವಸಾಹತುಶಾಹಿ ಪರಂಪರೆಯ ನೆನಪುಗಳನ್ನು ಮೂಡಿಸುವ ಪದಪ್ರಯೋಗ ಮಾಡುವುದು ತೀವ್ರ ಆಕ್ಷೇಪಾರ್ಹ” ಎಂದು ಸಚಿವಾಲಯ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಭಾರತ ನಿರಂತರವಾಗಿ ಗಮನಿಸುತ್ತಿರಲಿದೆ ಎಂದೂ ಹೇಳಿದೆ.

ಇದೇ ವೇಳ ಅಮೆರಿಕದ ಎಂಟು ಪ್ರಮುಖ ತಂತ್ರಜ್ಞಾನ ಕಂಪನಿಗಳನ್ನು ಶಾಶ್ವತ ಕಾರ್ಮಿಕ ಪ್ರಮಾಣೀಕರಣ (PERM) ಕಾರ್ಯಕ್ರಮದಿಂದ ಅಮಾನತುಗೊಳಿಸಿರುವ ನಿರ್ಧಾರವನ್ನೂ ಭಾರತ ಶುಕ್ರವಾರ ಖಂಡಿಸಿದೆ.

ಈ ಕ್ರಮವು ಉಭಯ ದೇಶಗಳ ಹಂಚಿಕೆಯ ಮಹತ್ವಾಕಾಂಕ್ಷೆಗಳಿಗೆ ಧಕ್ಕೆಯುಂಟುಮಾಡುತ್ತದೆ ಎಂದು ಎಚ್ಚರಿಸಿರುವ ಭಾರತ, H-1B ವೀಸಾದಡಿ ಕೆಲಸ ಮಾಡುವ ಉದ್ಯೋಗಿಗಳನ್ನು ‘ಬಂಧಿತ ಕಾರ್ಮಿಕರು’ ಎಂದು ಬಣ್ಣಿಸಿದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಅವರ ಹೇಳಿಕೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

PERM ಅರ್ಜಿಗಳ ಅಮಾನತಿನಿಂದ ಈಗಾಗಲೇ ಮಾನ್ಯವಾಗಿರುವ H-1B ವೀಸಾಗಳ ಸಿಂಧುತ್ವ ಅಥವಾ ವೀಸಾ ಹೊಂದಿರುವವರು ಮತ್ತು ಅವರ ಅವಲಂಬಿತರ ವಲಸೆ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ, ಸಂಬಂಧಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಉದ್ಯೋಗಿಗಳ ಗ್ರೀನ್ ಕಾರ್ಡ್ ಪ್ರಕ್ರಿಯೆಯ ಮೇಲೆ ಈ ನಿರ್ಧಾರವು ಕೆಲವು ಪರಿಣಾಮ ಬೀರಬಹುದು ಎಂದು ಒಪ್ಪಿಕೊಂಡಿದೆ.

ಅಮೆರಿಕದ ಕಾರ್ಮಿಕ ಇಲಾಖೆ ಹಲವು ಪ್ರಮುಖ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಕಂಪನಿಗಳನ್ನು PERM ಕಾರ್ಯಕ್ರಮದಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಭಾರತ ಪ್ರತಿಕ್ರಿಯೆ ನೀಡಿದೆ.

ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಉದ್ಯೋಗ ಆಧಾರಿತ ಶಾಶ್ವತ ನಿವಾಸಕ್ಕೆ ಸಂಬಂಧಿಸಿದ PERM ಕಾರ್ಯಕ್ರಮವು H-1B ವೀಸಾ ಕಾರ್ಯಕ್ರಮಕ್ಕಿಂತ ಭಿನ್ನವಾಗಿದೆ ಎಂದು ಒತ್ತಿಹೇಳಿದೆ.

“PERM ಕಾರ್ಯಕ್ರಮವು H-1B ವೀಸಾ ಕಾರ್ಯಕ್ರಮಕ್ಕಿಂತ ಪ್ರತ್ಯೇಕವಾಗಿದೆ ಎಂಬುದನ್ನು ಗಮನಿಸಬೇಕು. PERM ಅರ್ಜಿಗಳ ಅಮಾನತಿನಿಂದ ಈಗಾಗಲೇ ಮಾನ್ಯವಾಗಿರುವ H-1B ವೀಸಾಗಳ ಸಿಂಧುತ್ವ ಅಥವಾ ವೀಸಾ ಹೊಂದಿರುವವರು ಮತ್ತು ಅವರ ಅವಲಂಬಿತರ ಸ್ಥಿತಿಯ ಮೇಲೆ ಸ್ವತಃ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಬಾಧಿತ ಕಂಪನಿಗಳ ಅರ್ಹ ಉದ್ಯೋಗಿಗಳ ಶಾಶ್ವತ ನಿವಾಸ ಅಥವಾ ಗ್ರೀನ್ ಕಾರ್ಡ್ ಪ್ರಕ್ರಿಯೆಯ ಮೇಲೆ ಕೆಲವು ಪರಿಣಾಮ ಉಂಟಾಗಬಹುದು” ಎಂದು ಸಚಿವಾಲಯ ತಿಳಿಸಿದೆ.

ನುರಿತ ಉದ್ಯೋಗಿಗಳ ಅಂತರರಾಷ್ಟ್ರೀಯ ಸಂಚಾರದಿಂದ ಉಭಯ ದೇಶಗಳಿಗೂ ಆರ್ಥಿಕ ಲಾಭವಾಗುತ್ತದೆ ಎಂದು ಭಾರತ ಪ್ರತಿಪಾದಿಸಿದೆ.

ಇದರಿಂದ ಭಾರತೀಯ ವೃತ್ತಿಪರರಿಗೆ ಉದ್ಯೋಗಾವಕಾಶಗಳು ದೊರೆಯುವುದರ ಜತೆಗೆ, ಅಮೆರಿಕದ ಕಂಪನಿಗಳಿಗೆ ನುರಿತ ಉದ್ಯೋಗಿಗಳು ಲಭ್ಯವಾಗುತ್ತಾರೆ. ಅವರು ಆವಿಷ್ಕಾರ, ಸಂಶೋಧನೆ, ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನೆರವಾಗುತ್ತಾರೆ ಎಂದು ಹೇಳಿದೆ.

ಇಂತಹ ಉದ್ಯೋಗಿಗಳ ಸಂಚಾರವು ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಮತ್ತು ಷೇರುದಾರರ ಸಂಪತ್ತಿನ ವೃದ್ಧಿಗೂ ಸಹಕಾರಿಯಾಗಿದೆ. ಇದು ಎರಡೂ ದೇಶಗಳಿಗೆ ಗಮನಾರ್ಹ ಪರಸ್ಪರ ಪ್ರಯೋಜನ ತರುವ ಕ್ಷೇತ್ರವಾಗಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ಅಮೆರಿಕ ಪ್ರಕಟಿಸಿರುವ ಕ್ರಮಗಳು ಎರಡೂ ದೇಶಗಳ ಹಂಚಿಕೆಯ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿಲ್ಲ ಎಂದು ಹೇಳಿರುವ ಭಾರತ, ನುರಿತ ಉದ್ಯೋಗಿಗಳ ಸಂಚಾರದ ಮಹತ್ವವನ್ನು ಎಲ್ಲ ಪಾಲುದಾರರು ಗುರುತಿಸಬೇಕು ಎಂದು ನಿರೀಕ್ಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.