ದೇಶ

ATF ದರ ಏರಿಕೆ ಎಫೆಕ್ಟ್; ದೇಶೀಯ ವಿಮಾನ ಸೇವೆ ಕಡಿತಕ್ಕೆ Air India, IndiGo ನಿರ್ಧಾರ..!

ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಪಾಲು ಹೊಂದಿರುವ ಈ ಎರಡು ಕಂಪನಿಗಳು, ಪ್ರಯಾಣಿಕರ ಬೇಡಿಕೆ ಕುಸಿತ ಹಾಗೂ ಇಂಧನ ವೆಚ್ಚ ಏರಿಕೆಯಿಂದ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲು ಮುಂದಾಗಿದೆ.

ATF ದರ ಏರಿಕೆ ಎಫೆಕ್ಟ್; ದೇಶೀಯ ವಿಮಾನ ಸೇವೆ ಕಡಿತಕ್ಕೆ Air India, IndiGo ನಿರ್ಧಾರ..!
ವಿಮಾನ ಸೇವೆ (ಸಂಗ್ರಹ ಚಿತ್ರ) — online desk
Published On :

ನವದೆಹಲಿ: ಅಮೆರಿಕಾ-ಇರಾನ್ ಯುದ್ಧದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಮಾತ್ರವಲ್ಲ, ಭಾರತದ ವಿಮಾನಯಾನ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರತೊಡಗಿದೆ.

ವಿಮಾನ ಇಂಧನವಾದ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆ ಭಾರೀ ಏರಿಕೆಯಾದ ಹಿನ್ನೆಲೆ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಇಂಡಿಗೋ ಜೂನ್ 1ರಿಂದ ಮುಂದಿನ ಮೂರು ತಿಂಗಳ ಕಾಲ ದೇಶೀಯ ವಿಮಾನ ಸೇವೆಗಳನ್ನು ಕಡಿತಗೊಳಿಸಲು ನಿರ್ಧರಿಸಿವೆ.

ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಪಾಲು ಹೊಂದಿರುವ ಈ ಎರಡು ಕಂಪನಿಗಳು, ಪ್ರಯಾಣಿಕರ ಬೇಡಿಕೆ ಕುಸಿತ ಹಾಗೂ ಇಂಧನ ವೆಚ್ಚ ಏರಿಕೆಯಿಂದ ಕಾರ್ಯಾಚರಣೆಗಳನ್ನು ಕಡಿಮೆ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ತನ್ನ ದೇಶೀಯ ವಿಮಾನ ಕಾರ್ಯಾಚರಣೆಗಳಲ್ಲಿ ಸುಮಾರು 15 ಶೇಕಡಾ ಕಡಿತ ಮಾಡಲಿದ್ದು, ಇಂಡಿಗೋ 5ರಿಂದ 7 ಶೇಕಡಾ ಸೇವೆಗಳನ್ನು ಸ್ಥಗಿತಗೊಳಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವಚ್ಚದಲ್ಲಿ ಸುಮಾರು 40 ಶೇಕಡಾ ಪಾಲು ATF ಬೆಲೆಯದ್ದಾಗಿದೆ. ಯುದ್ಧದ ಬಳಿಕ ATF ದರ ಕಿಲೋಲೀಟರ್‌ಗೆ ರೂ.80 ಸಾವಿರದಿಂದ ರೂ.1 ಲಕ್ಷಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ವಿವಿಧ ರಾಜ್ಯಗಳಲ್ಲಿ VAT ದರ ಬೇರೆಯಾಗಿರುವುದರಿಂದ ಇಂಧನ ವೆಚ್ಚವೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಅಂತರರಾಷ್ಟ್ರೀಯ ವಿಮಾನ ಸೇವೆಗಳಲ್ಲೂ ಕಡಿತ ಘೋಷಿಸಿರುವ ಏರ್ ಇಂಡಿಯಾ, ಯಾವುದೇ ಮಾರ್ಗವನ್ನು ಸಂಪೂರ್ಣ ರದ್ದುಗೊಳಿಸುವುದಿಲ್ಲವಾದರೂ ಕೆಲವು ಪ್ರಮುಖ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಮುಂಬೈಯಿಂದ ಅಹಮದಾಬಾದ್, ನಾಗ್ಪುರ, ಪಾಟ್ನಾ ಮತ್ತು ಭೋಪಾಲ್‌ಗೆ ಇರುವ ಸೇವೆಗಳು ಕಡಿಮೆಯಾಗಲಿದ್ದು, ದೆಹಲಿಯಿಂದ ಹೈದರಾಬಾದ್, ಬೆಂಗಳೂರು ಮತ್ತು ಕೊಲ್ಕತ್ತಾಕ್ಕೆ ಇರುವ ವಿಮಾನಗಳ ಸಂಖ್ಯೆಯಲ್ಲೂ ಇಳಿಕೆ ಆಗಲಿದೆ.

ದಕ್ಷಿಣ ಭಾರತಕ್ಕೂ ಇದರ ಪರಿಣಾಮ ಬೀಳಲಿದ್ದು, ಈ ಮಾರ್ಗಗಳ ರಿಟರ್ನ್ ಫ್ಲೈಟ್‌ಗಳನ್ನೂ ಕಡಿಮೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಅಂತರರಾಷ್ಟ್ರೀಯ ಸೇವೆಗಳಲ್ಲಿ ಕಡಿತದಿಂದ ದೇಶೀಯ ಸಂಪರ್ಕ ವಿಮಾನಗಳ ಬೇಡಿಕೆಯೂ ಕುಸಿಯಲಿದೆ ಎಂದು ವಿಮಾನಯಾನ ಕಂಪನಿಗಳು ಅಂದಾಜಿಸಿವೆ.

ವಿಶೇಷವಾಗಿ ದೆಹಲಿ ಮತ್ತು ಮುಂಬೈಗಳಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಜೂನ್ 1ರಿಂದ ಆಗಸ್ಟ್ ಅಂತ್ಯದವರೆಗೆ ಈ ಕಡಿತ ಜಾರಿಯಲ್ಲಿರಲಿದ್ದು, ಪ್ರಯಾಣಿಕರು ಟಿಕೆಟ್ ಬುಕ್ ಮಾಡದಂತೆ ಕೆಲವು ಸೇವೆಗಳನ್ನು ಈಗಾಗಲೇ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಶಾಲಾ ರಜೆ ಅವಧಿ ಬಳಿಕ ಸಾಮಾನ್ಯವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗುವುದೂ ಮತ್ತೊಂದು ಕಾರಣವಾಗಿದೆ ಎಂದು ಇಂಡಿಗೋ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿದಿನ ಸುಮಾರು 1,950 ವಿಮಾನಗಳನ್ನು ನಡೆಸುವ ಸಂಸ್ಥೆಗೆ ಸಣ್ಣ ಪ್ರಮಾಣದ ಕಡಿತವೂ ದೊಡ್ಡ ಸಂಖ್ಯೆಯ ವಿಮಾನ ರದ್ದುಪಡಿಸುವಿಕೆಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ವಿಮಾನಯಾನ ಕ್ಷೇತ್ರಕ್ಕೆ ನೆರವಾಗಲು ಕೇಂದ್ರ ಸರ್ಕಾರ ಏಪ್ರಿಲ್ 1, 2026ರಿಂದ ದೇಶೀಯ ವಿಮಾನ ಸಂಸ್ಥೆಗಳಿಗೆ ATF ದರ ಏರಿಕೆಯನ್ನು 25 ಶೇಕಡಕ್ಕಷ್ಟೇ ಮಿತಿಗೊಳಿಸಿತ್ತು. ಜೊತೆಗೆ ಪಾರ್ಕಿಂಗ್ ಶುಲ್ಕ ಕಡಿತ ಹಾಗೂ ತುರ್ತು ಸಾಲ ಯೋಜನೆಗಳನ್ನೂ ಘೋಷಿಸಿತ್ತು.

ಇದರ ನಡುವೆ ದೆಹಲಿ ಸರ್ಕಾರ ATF ಮೇಲಿನ VAT ಅನ್ನು 25 ಶೇಕಡದಿಂದ 7 ಶೇಕಡಕ್ಕೆ ಇಳಿಸಿದ್ದರೆ, ಮಹಾರಾಷ್ಟ್ರ ಸರ್ಕಾರವೂ 18 ಶೇಕಡದಿಂದ 7 ಶೇಕಡಕ್ಕೆ ಕಡಿತಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.