ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದ ರೈತ ಸಂಘಟನೆಗಳು; ಮೇ.27ರಂದು ಮುಷ್ಕರಕ್ಕೆ ಕರೆ
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ CACP, ಖಾರೀಫ್ ಮತ್ತು ರಬಿ ಹಂಗಾಮಿನ ಅಧಿಸೂಚಿತ ಬೆಳೆಗಳಿಗೆ MSP ಶಿಫಾರಸು ಮಾಡುವ ತಜ್ಞ ಸಲಹಾ ಸಂಸ್ಥೆಯಾಗಿದೆ.

ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಮತ್ತೆ ರೈತಪರ ಸಂಘಟನೆಗಳು ರಾಷ್ಟ್ರವ್ಯಾಪಿ ಹೋರಾಟ ಆರಂಭಿಸುವುದಾಗಿ ಘೋಷಿಸಿದ್ದು ಇದೇ ಮೇ 27 ಶುಕ್ರವಾರದಂದು ಮುಷ್ಕರಕ್ಕೆ ಕರೆ ನೀಡಿವೆ.
ಸಂಯುಕ್ತ ಕಿಸಾನ್ ಮೋರ್ಚಾ ಮೇ 27ರಿಂದ ರಾಷ್ಟ್ರವ್ಯಾಪಿ ಹೋರಾಟ ಆರಂಭಿಸುವುದಾಗಿ ಘೋಷಿಸಿದ್ದು, ಕೇಂದ್ರ ಸರ್ಕಾರದ ಇತ್ತೀಚಿನ ಕನಿಷ್ಠ ಬೆಂಬಲ ಬೆಲೆ (MSP) ಆದೇಶ ಮತ್ತು 2026-27ರ ಖಾರೀಫ್ ಹಂಗಾಮಿನ ಬೆಲೆ ನೀತಿಗೆ ಸಂಬಂಧಿಸಿದ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (Commission for Agricultural Costs and Prices) (CACP)ದ ವರದಿ ಪ್ರತಿಗಳನ್ನು ಸುಟ್ಟು ಹಾಕಲು ರೈತ ಸಂಘಟನೆಗಳು ಮತ್ತು ಕೃಷಿ ಕಾರ್ಮಿಕರಿಗೆ ಕರೆ ನೀಡಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ CACP, ಖಾರೀಫ್ ಮತ್ತು ರಬಿ ಹಂಗಾಮಿನ ಅಧಿಸೂಚಿತ ಬೆಳೆಗಳಿಗೆ MSP ಶಿಫಾರಸು ಮಾಡುವ ತಜ್ಞ ಸಲಹಾ ಸಂಸ್ಥೆಯಾಗಿದೆ.
“ಮೋಸದ MSP ವ್ಯವಸ್ಥೆ” ರೈತ ಸಂಘಟನೆಗಳ ಆರೋಪ
ವರ್ಚುವಲ್ ಪತ್ರಿಕಾಗೋಷ್ಠಿಯ ನಂತರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ SKM, ಕೇಂದ್ರ ಸರ್ಕಾರ “ಮೋಸದ MSP ವ್ಯವಸ್ಥೆ” ಹೇರಿದೆ ಎಂದು ಆರೋಪಿಸಿದೆ. ಇಂಧನ ದರ ಏರಿಕೆ ಮೂಲಕ ರೈತರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗಿದೆ ಹಾಗೂ ರಸಗೊಬ್ಬರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ ಎಂದು ಸಂಘಟನೆ ಟೀಕಿಸಿದೆ. ರಸಗೊಬ್ಬರ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳನ್ನು ನಡೆಸುವುದಾಗಿ ಕಿಸಾನ ಮೋರ್ಚಾ ಘೋಷಿಸಿದ್ದು, ಕಾಳಸಂತೆ ನಿಯಂತ್ರಣದಲ್ಲೂ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ.
MSP ವಿರುದ್ಧ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
2021-22ರಲ್ಲಿ ದೆಹಲಿ ಗಡಿಭಾಗಗಳಲ್ಲಿ ನಡೆದ ಐತಿಹಾಸಿಕ ರೈತ ಹೋರಾಟಕ್ಕೆ ನೇತೃತ್ವ ನೀಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ, 2026-27ರ ಖಾರೀಫ್ ಹಂಗಾಮಿಗೆ ಘೋಷಿಸಲಾದ MSP ರಚನೆ ವಿರುದ್ಧ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದೆ.
ಇತ್ತೀಚಿನ ಇಂಧನ ದರ ಏರಿಕೆ ಮತ್ತು ಗಂಭೀರವಾಗುತ್ತಿರುವ ರಸಗೊಬ್ಬರ ಸಮಸ್ಯೆಯನ್ನೂ ಪ್ರತಿಭಟನೆಯ ಪ್ರಮುಖ ವಿಷಯಗಳಾಗಿ ಸಂಘಟನೆ ಉಲ್ಲೇಖಿಸಿದೆ.
ರೈತ ಸಂಘಟನೆಗಳ ಪ್ರಕಾರ, ಉತ್ಪಾದನಾ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದ್ದರೂ MSP ಏರಿಕೆ ರೈತರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಡೀಸೆಲ್, ರಸಗೊಬ್ಬರ ಮತ್ತು ಕೃಷಿ ಉಪಕರಣಗಳ ಬೆಲೆ ಏರಿಕೆ ರೈತರ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿರುವ MSP ವ್ಯವಸ್ಥೆ ರೈತರಿಗೆ ನಿಜವಾದ ಲಾಭ ನೀಡುತ್ತಿಲ್ಲ ಎಂದು SKM ವಾದಿಸಿದೆ.
ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿದ್ಧತೆ
ಮೇ 27ರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳು, ಧರಣಿಗಳು ಮತ್ತು MSP ಆದೇಶ ಪ್ರತಿಗಳ ದಹನ ಕಾರ್ಯಕ್ರಮಗಳನ್ನು ಆಯೋಜಿಸಲು SKM ಸಂಬಂಧಿತ ರೈತ ಸಂಘಟನೆಗಳಿಗೆ ಸೂಚನೆ ನೀಡಿದೆ. ಈ ಹೋರಾಟವು ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗುವ ಸಾಧ್ಯತೆ ಇದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



