ಬೆಂಗಳೂರು-ಮುಂಬೈ ಹೊಸ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ: ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭ- ಅಶ್ವಿನಿ ವೈಷ್ಣವ್
ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಯಿದೆ ಎಂದು ಘೋಷಿಸಿದರು.

ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವಿನ ಹೊಸ ಎಕ್ಸ್ ಪ್ರೆಸ್ ರೈಲಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಮಹತ್ವದ ಹೆಜ್ಜೆಯಾಗಿದೆ.
ನಂತರ ಮಾತನಾಡಿದ ಅಶ್ವಿನಿ ವೈಷ್ಣವ್, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಬಹುಕಾಲದ ಬೇಡಿಕೆಗಳು ಇದೀಗ ಈಡೇರುತ್ತಿವೆ. ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಯಿದೆ ಎಂದು ಘೋಷಿಸಿದರು. ಮೂಲಸೌಕರ್ಯ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಅನುದಾನದಲ್ಲಿ ಮಹತ್ತರ ಏರಿಕೆ ಕಂಡುಬಂದಿದ್ದು, ಕರ್ನಾಟಕದಾದ್ಯಂತ ವಿವಿಧ ಯೋಜನೆಗಳ ಅನುಷ್ಠಾನ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು ₹2,160 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ 9 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣವನ್ನು ₹485 ಕೋಟಿ ರೂ. ವೆಚ್ಚದಲ್ಲಿ ಹಾಗೂ ಯಶವಂತಪುರ ನಿಲ್ದಾಣವನ್ನು ₹367 ಕೋಟಿ ರೂ. ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ. 2014ರಿಂದ ಕರ್ನಾಟಕದಲ್ಲಿ ಸುಮಾರು 1,750 ಕಿಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ. ಹಾಸನ–ಮಂಗಳೂರು ವಿಭಾಗದಂತಹ ಸವಾಲಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ಪರೀಕ್ಷಾ ಕಾರ್ಯಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಕುರಿತು ಮಾತನಾಡಿದ ಅವರು, ನಾಲ್ಕೂ ಕಾರಿಡಾರ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಮತ್ತು ಹೀಲಲಿಗೆ–ರಾಜನುಕುಂಟೆ ಕಾರಿಡಾರ್‌ಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದ್ದು, ನಿಲ್ದಾಣ ಕಾಮಗಾರಿಗಳು ನಡೆಯುತ್ತಿವೆ. ಕೆಎಸ್ಆರ್ ಬೆಂಗಳೂರು–ದೇವನಹಳ್ಳಿ ಮಾರ್ಗಸೂಚಿಗೆ ರಾಜ್ಯ ಸರ್ಕಾರ ಮತ್ತು ರೈಲ್ವೆಯ ಜಂಟಿ ಅನುಮೋದನೆ ದೊರೆತಿದ್ದು, ಜಿಯೋಟೆಕ್ನಿಕಲ್ ಸಮೀಕ್ಷೆ ಪೂರ್ಣಗೊಂಡಿದೆ. ಕೆಂಗೇರಿ–ವೈಟ್‌ಫೀಲ್ಡ್ ಮಾರ್ಗಕ್ಕೂ ಇತ್ತೀಚೆಗೆ ಅನುಮೋದನೆ ದೊರೆತಿದ್ದು, ಸಮೀಕ್ಷಾ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ದೇವನಹಳ್ಳಿ ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ ಹಾಗೂ ಹೆಬ್ಬಾಳ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಈ ಉಪನಗರ ರೈಲು ಜಾಲ ಸಂಪರ್ಕಿಸಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ತಿಳಿಸಿದ ಅವರು, ಬೆಂಗಳೂರು–ಮಂಗಳೂರು ಮಾರ್ಗದ ಪರೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲೇ ಕರಾವಳಿ ಭಾಗದ ಸಂಪರ್ಕ ಮಡಗಾಂವ್‌ವರೆಗೆ ಸುಧಾರಿಸಲಿದೆ
ಬೆಂಗಳೂರು–ಹೈದರಾಬಾದ್ ಹಾಗೂ ಬೆಂಗಳೂರು–ಚೆನ್ನೈ ನಡುವೆ ಬುಲೆಟ್ ಟ್ರೈನ್ ಕಾರಿಡಾರ್‌ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ದೀರ್ಘಕಾಲೀನ ಯೋಜನೆಯ ಭಾಗವಾಗಿ ಮುಂಬೈ, ಬೆಂಗಳೂರು ಹಾಗೂ ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ಸುಮಾರು 7,000 ಕಿಮೀ ಉದ್ದದ ಬುಲೆಟ್ ರೈಲಿನ ಜಾಲವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರಾದ ವಿ. ಸೋಮಣ್ಣ ಮಾತನಾಡಿ, ಹೊಸ ಬೆಂಗಳೂರು–ಮುಂಬೈ ರೈಲಿಗೆ ಅನುಮೋದನೆ ನೀಡಿದಕ್ಕಾಗಿ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ದೇಶದ ಅತ್ಯಂತ ಬ್ಯುಸಿ ಮಾರ್ಗಗಳಲ್ಲಿ ಒಂದಾದ ಈ ಮಾರ್ಗದಲ್ಲಿ ಹೊಸ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವುದಲ್ಲದೆ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪ್ರಸ್ತುತ 14 ಜಿಲ್ಲೆಗಳನ್ನು ಸಂಪರ್ಕಿಸುವ 12 ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಥಣಿಸಂದ್ರದಲ್ಲಿ ₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಡೆಪೋ ಮತ್ತು ಎಸ್‌ಎಂವಿಟಿ ಬೆಂಗಳೂರಿನಲ್ಲಿ ₹52.73 ಕೋಟಿ ವೆಚ್ಚದಲ್ಲಿ ಚೇರ್ ಕಾರ್ ನಿರ್ವಹಣಾ ಸೌಲಭ್ಯ ನಿರ್ಮಿಸಲಾಗುತ್ತಿದೆ. ಬೈಯಪ್ಪನಹಳ್ಳಿ–ಹೊಸೂರು ಡಬ್ಲಿಂಗ್ (₹1,116 ಕೋಟಿ), ಬೆಟ್ಟಹಲಸೂರು–ರಾಜಾನುಕುಂಟೆ ಡಬ್ಲಿಂಗ್ (₹248 ಕೋಟಿ) ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಕ್ವಾಡ್ರಪ್ಲಿಂಗ್ ಕಾಮಗಾರಿಗಳು (₹1,347 ಕೋಟಿ) ಸಾಮರ್ಥ್ಯ ವೃದ್ಧಿಗಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಶವಂತಪುರ, ಕೆಎಸ್ಆರ್ ಬೆಂಗಳೂರು, ಲೊಟ್ಟೆಗೊಲ್ಲಹಳ್ಳಿ, ಬೈಯಪ್ಪನಹಳ್ಳಿ, ಪೆನುಕೊಂಡ, ಮೈಸೂರು ಹಾಗೂ ಜೋಲಾರಪೀಟೆ ಪ್ರಮುಖ ವಿಭಾಗಗಳಲ್ಲಿ ಒಟ್ಟು ₹6,396 ಕೋಟಿ ವೆಚ್ಚದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಕಾಮಗಾರಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಒಟ್ಟಾರೆ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು, ಕರ್ನಾಟಕಕ್ಕೆ ₹7,748 ಕೋಟಿ ಮೊತ್ತದ ದಾಖಲೆಯ ರೈಲ್ವೆ ಬಜೆಟ್ ಅನುದಾನ ಲಭಿಸಿದೆ ಎಂದರು. 2014ರಿಂದ ಸುಮಾರು 3,840 ಕಿಮೀ ರೈಲು ಮಾರ್ಗ ಅಭಿವೃದ್ಧಿಪಡಿಸಲಾಗಿದ್ದು, 3,742 ಕಿಮೀ ವಿದ್ಯುದೀಕರಣ ಪೂರ್ಣಗೊಂಡಿದೆ. ಇದರಿಂದ ರಾಜ್ಯವು ಶೇ.100ರಷ್ಟು ವಿದ್ಯುದೀಕರಣದತ್ತ ಸಾಗುತ್ತಿದೆ ಎಂದು ಹೇಳಿದರು.
2014ರ ಮೊದಲು ಸುಮಾರು 150 ಇದ್ದ ROB/RUBಗಳ ಸಂಖ್ಯೆ ಈಗ 707ಕ್ಕೆ ಏರಿಕೆಯಾಗಿದೆ. ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ತೆರವುಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.ಸಂಸದರಾದ ಪಿ. ಸಿ. ಮೋಹನ್, ತೇಜಸ್ವಿಸೂರ್ಯ, ಲೆಹರ್ ಸಿಂಗ್ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



