ದೇಶ

ಉತ್ತರ ಪ್ರದೇಶದಲ್ಲಿ ಬಿರುಗಾಳಿ, ಮಳೆ: ಪ್ರಯಾಗ್ ರಾಜ್ ನಲ್ಲಿ 21 ಸೇರಿದಂತೆ 100 ಜನರ ದುರ್ಮರಣ!

ಒಬ್ಬ ವ್ಯಕ್ತಿ ಟಿನ್ ಶೆಡ್ ಜೊತೆಗೆ ಸುಮಾರು 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟಿದ್ದಾನೆ. ನನ್ಹೇ ಮಿಯಾನ್ ಎಂಬ ವ್ಯಕ್ತಿ ಬರೊಬ್ಬರಿ 50 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗಳಾಗಿವೆ.

ಉತ್ತರ ಪ್ರದೇಶದಲ್ಲಿ ಬಿರುಗಾಳಿ, ಮಳೆ: ಪ್ರಯಾಗ್ ರಾಜ್ ನಲ್ಲಿ 21 ಸೇರಿದಂತೆ 100 ಜನರ ದುರ್ಮರಣ!
ಬಿರುಗಾಳಿ ಮಳೆಗೆ ರಸ್ತೆ ಮೇಲೆ ಬಿದ್ದ ಮರ
Published On :

ಲಖನೌ: ಉತ್ತರ ಪ್ರದೇಶದಾದ್ಯಂತ ನಿನ್ನೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿಗೆ ನೂರು ಜನರು ಸಾವನ್ನಪ್ಪಿದ್ದಾರೆ. ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ರಾಜ್ಯಾದ್ಯಂತ ಹಲವು ಮನೆಗಳು ಹಾನಿಗೊಳಗಾಗಿವೆ. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, 24 ಗಂಟೆಗಳ ಒಳಗೆ ಆರ್ಥಿಕ ನೆರವು ವಿತರಿಸಲು ಆದೇಶಿಸಿದ್ದಾರೆ.

ಪ್ರಯಾಗರಾಜ್‌ನಲ್ಲಿ ಅತಿ ಹೆಚ್ಚು 21 ಮಂದಿ ಸಾವನ್ನಪ್ಪಿದ್ದರೆ, ಭದೋಹಿಯಲ್ಲಿ 18, ಮಿರ್ಜಾಪುರದಲ್ಲಿ 15, ಫತೇಪುರದಲ್ಲಿ 10, ಉನ್ನಾವೊ ಮತ್ತು ಬದೌನ್‌ನಲ್ಲಿ ತಲಾ ಆರು, ಪ್ರತಾಪ್‌ಗಢ ಮತ್ತು ಬರೇಲಿಯಲ್ಲಿ ತಲಾ ನಾಲ್ಕು ಮತ್ತು ಸೀತಾಪುರ್, ರಾಯ್‌ಬರೇಲಿ ಮತ್ತು ಚಂದೌಲಿ, ಕಾನ್ಪುರ್ ದೇಹತ್, ಹಾರ್ಡೋಯ್ ಮತ್ತು ಸಂಭಾಲ್‌ನಿಂದ ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಕೌಶಂಬಿ, ಶಹಜಹಾನ್‌ಪುರ, ಸೋನ್‌ಭದ್ರ ಮತ್ತು ಲಖಿಂಪುರದಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹವಾಮಾನ ಬದಲಾವಣೆ: ಉತ್ತರ ಪ್ರದೇಶದ ಹಲವೆಡೆ ಧೂಳು ತುಂಬಿದ ಮೋಡಗಳು ಆವರಿಸುವುದರೊಂದಿಗೆ ನಿನ್ನೆ ಸಂಜೆ ಇದ್ದಕ್ಕಿಂತೆ ಹವಾಮಾನದಲ್ಲಿ ಬದಲಾವಣೆಯಾಯಿತು. ಅತಿ ವೇಗದ ಗಾಳಿಯಿಂದ ಹೋರ್ಡಿಂಗ್‌ಗಳು ಮತ್ತು ಶೆಡ್‌ಗಳು ಹಾರಿ ಹೋಗಿದ್ದು, ಮರಗಳು ಉರುಳಿಬಿದ್ದ ಕಾರಣ ಅನೇಕರು ಮರಗಳು ಮತ್ತು ಫ್ಲೈಓವರ್‌ಗಳ ಕೆಳಗೆ ಆಶ್ರಯ ಪಡೆಯಬೇಕಾಯಿತು. ಹಲವು ರಸ್ತೆಗಳು ಮುಚ್ಚಿಹೋಗಿದ್ದು, ಮರಗಳು ಉರುಳಿ ವಾಹನಗಳು ಜಖಂಗೊಂಡಿವೆ. ಬಿರುಗಾಳಿಯಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ.

ಬಿರುಗಾಳಿ ಎಷ್ಟು ಪ್ರಬಲವಾಗಿತ್ತು ಎಂಬುದನ್ನು ತೋರಿಸುವ ಹಲವು ವೀಡಿಯೊಗಳನ್ನು ರಾಜ್ಯಾದ್ಯಂತ ಹಂಚಿಕೊಳ್ಳಲಾಗಿದೆ. ಒಬ್ಬ ವ್ಯಕ್ತಿ ಟಿನ್ ಶೆಡ್ ಜೊತೆಗೆ ಸುಮಾರು 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟಿದ್ದಾನೆ. ನನ್ಹೇ ಮಿಯಾನ್ ಎಂಬ ವ್ಯಕ್ತಿ ಬರೊಬ್ಬರಿ 50 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗಳಾಗಿವೆ. ಈ ಘಟನೆ ಬರೆಲಿ ಜಿಲ್ಲೆಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಮಿಯಾನಾ ಗ್ರಾಮದಲ್ಲಿ ನಡೆದಿದೆ.

ಸಿಡಿಲು ಬಡಿದು ಗೋಡೆ ಕುಸಿತ: ಭದೋಹಿಯ ರಾಂಪುರದಲ್ಲಿ ಪಾಂಟೂನ್ ಸೇತುವೆ ಹಾನಿಗೊಳಗಾದ ನಂತರ ಹಲವು ಜನರು ಗಂಗಾ ನದಿಗೆ ಬಿದ್ದ ವರದಿಗಳಿವೆ. ಮತ್ತೊಂದು ಘಟನೆಯಲ್ಲಿ, ಮಿರ್ಜಾಪುರದ ಗೌರ ಪ್ರಮಾಣಪುರದಲ್ಲಿ ಸೇತುವೆ ಹಾನಿಗೊಳಗಾಗಿದ್ದು, 20 ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಫತೇಪುರದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಎಂಟು ಮಂದಿ ಖಾಗಾ ತಹಸಿಲ್‌ನಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ಐದು ಮಹಿಳೆಯರು ಸೇರಿದ್ದಾರೆ. ಇದಲ್ಲದೆ, ಸದರ್ ತಹಸಿಲ್‌ನಲ್ಲಿ ಗೋಡೆ ಕುಸಿದು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ತ್ರಿಪಾಠಿ ತಿಳಿಸಿದ್ದಾರೆ.

Story image

ಗೋಡೆ, ಶೆಡ್ ಕುಸಿತ, ಸಿಡಿಲು ಬಡಿತ ಮತ್ತಿತರ ಕಾರಣಗಳಿಂದ ಪ್ರತಾಪಗಢದಲ್ಲಿ ನಾಲ್ವರು ಸಾವನ್ನಪ್ಪಿದರೆ, ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಡಿಯೋರಿಯಾದಿಂದ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪರಿಹಾರ ವಿತರಣೆಗೆ ಮುಖ್ಯಮಂತ್ರಿ ಆದೇಶ: ರಾಜ್ಯಾದ್ಯಂತ ಅಕಾಲಿಕ ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಸಂಭವಿಸಿದ ಸಾವುಗಳು ಮತ್ತು ಹಾನಿಯನ್ನು ಮುಖ್ಯಮಂತ್ರಿ ಪರಿಶೀಲಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳ ಒಳಗೆ ಆರ್ಥಿಕ ನೆರವು ತಲುಪಿಸುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.