ಉತ್ತರ ಪ್ರದೇಶದಲ್ಲಿ ಭಾರಿ ಗಾಳಿ, ಮಳೆ: 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ವ್ಯಕ್ತಿ ಬದುಕಿದ್ದೇ ಅದೃಷ್ಟ! Video
ಉತ್ತರ ಪ್ರದೇಶದ ಬರೆಲಿಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದ್ದು, ಮಳೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಭಾರಿ ಗಾಳಿಗೆ ಸಿಲುಕಿದ ಜಾಹಿರಾತು ಫಲಕವೊಂದು ವ್ಯಕ್ತಿಯನ್ನು ಎಸೆದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಉತ್ತರ ಪ್ರದೇಶದ ಬರೆಲಿಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬುಧವಾರ ರಾಜ್ಯದ ಹಲವು ಭಾಗಗಳಲ್ಲಿ ಬೀಸಿದ ಭೀಕರ ಚಂಡಮಾರುತದ ವೇಳೆ, ಒಬ್ಬ ವ್ಯಕ್ತಿ ಟಿನ್ ಶೆಡ್ ಜೊತೆಗೆ ಸುಮಾರು 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟಿದ್ದಾನೆ. ನನ್ಹೇ ಮಿಯಾನ್ ಎಂಬ ವ್ಯಕ್ತಿ ಬರೊಬ್ಬರಿ 50 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗಳಾಗಿವೆ. ಈ ಘಟನೆ ಬರೆಲಿ ಜಿಲ್ಲೆಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಬಮಿಯಾನಾ ಗ್ರಾಮದಲ್ಲಿ ನಡೆದಿದೆ.
ಗಾಯಾಳು ಹೇಳಿಕೊಂಡಂತೆ, ಜೋರಾಗಿ ಗಾಳಿ ಬಿಸುತ್ತಿತ್ತು. ಈ ವೇಳೆ ಹಗ್ಗವನ್ನು ಹಿಡಿದಿದ್ದೆ. ಆದರೆ ಗಾಳಿಯ ರಭಸಕ್ಕೆ ಹಗ್ಗಾ ತುಂಡಾಯಿತು. ಈ ವೇಳೆ ಹಗ್ಗದ ಜೊತೆ ಇದ್ದ ಟಿನ್ ಶೀಟ್ ಜೊತೆಗೆ ನಾನೂ ಕೂಡ ಗಾಳಿಯಲ್ಲಿ ಹಾರಿಹೋದೆ. ಸುಮಾರು 50 ಅಡಿ ಎತ್ತರಕ್ಕೆ ಹಾರಿ ಸುಮಾರು 500 ಮೀಟರ್ ದೂರಕ್ಕೆ ಎಸೆಯಲ್ಪಟ್ಟೆ. ಕೆಳಗೆ ಬಿದ್ದಾಗ ನನ್ನ ಕೈ ಮತ್ತು ಕಾಲುಗಳು ತುಂಬಾ ನೋಯುತ್ತಿದ್ದವು ಎಂದು ಹೇಳಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
“ಅದು ಸುಮಾರು 30-40 ಅಡಿ ಎತ್ತರದಲ್ಲಿತ್ತು. ನಾನು ಎಲ್ಲಿಗೆ ಬಿದ್ದೆ ಎಂಬುದೇ ಗೊತ್ತಾಗಲಿಲ್ಲ. ಕನಿಷ್ಠ 50 ಅಡಿ ದೂರಕ್ಕೆ ಎಸೆಯಲ್ಪಟ್ಟೆ, ಗಾಳಿ ರಭಸ ಹೆಚ್ಚಿದ್ದರಿಂದ ತಮ್ಮನ್ನು ರಕ್ಷಿಸಬಹುದು ಎಂಬ ಭರವಸೆಯಲ್ಲಿ ಹಗ್ಗವನ್ನು ಹಿಡಿದಿದ್ದೆ. ಆದರೆ ಬಲವಾದ ಗಾಳಿ ಹಗ್ಗವನ್ನು ತುಂಡುಮಾಡಿತು ಎಂದು ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಸರ್ಕಾರದಿಂದ ನೆರವು
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದ್ದು, ಗಾಯಾಳು ನನ್ಹೇ ಮಿಯಾನ್ ಭೇಟಿ ಮಾಡಿ ಸರ್ಕಾರದಿಂದ ಅಗತ್ಯ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಭೀಕರ ಹವಾಮಾನ
ಇನ್ನು ಉತ್ತರ ಪ್ರದೇಶದಲ್ಲಿ ಭೀಕರ ಹವಾಮಾನ ಪರಿಸ್ಥಿತಿ ಎದುರಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿರುಗಾಳಿ, ಮಳೆ ಮತ್ತು ಮಿಂಚಿನಿಂದ ಉಂಟಾದ ಹಾನಿಯ ವಿವರಗಳನ್ನು ಪ್ರತಿ ಮೂರು ಗಂಟೆಗೂ ಕಳುಹಿಸುವಂತೆ ಸೂಚಿಸಿದ್ದಾರೆ. “ಪ್ರತಿ ಮೂರು ಗಂಟೆಗೆ ಪರಿಸ್ಥಿತಿಯ ಮಾಹಿತಿ ಕಳುಹಿಸಲು ಜಿಲ್ಲೆಗಳಿಗೆ ಸೂಚಿಸಲಾಗಿದೆ. ಪರಿಹಾರ ಧನ ವಿತರಣೆ, ರಕ್ಷಣಾ ಕಾರ್ಯಾಚರಣೆ ಮತ್ತು ಇತರ ನೆರವು ಕಾರ್ಯಗಳ ಮಾಹಿತಿಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ನವೀಕರಿಸಬೇಕು,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇದಲ್ಲದೆ ಪರಿಹಾರ ಕಾರ್ಯಗಳು ಹಾಗೂ ಪರಿಹಾರ ಧನ ವಿತರಣೆ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಗುರುವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರಿ ಮಳೆಗೆ 89 ಮಂದಿ ಬಲಿ
ಸುದ್ದಿ ಸಂಸ್ಥೆ PTI ವರದಿ ಪ್ರಕಾರ, ಬುಧವಾರ ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದ ಪರಿಣಾಮ ಕನಿಷ್ಠ 89 ಮಂದಿ ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ 87 ಮನೆಗಳಿಗೆ ಹಾನಿಯಾಗಿದ್ದು, 114 ಪಶುಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಗ್‌ರಾಜ್, ಭದೋಹಿ, ಫತೇಹ್ಪುರ್ ಮತ್ತು ಸೋನಭದ್ರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



