'ವಿಜಯ್ ಖಂಡಿತಾ ಸಿಎಂ ಆಗುತ್ತಾರೆ': ಚೆನ್ನೈ ನಿವಾಸ ಮುಂದೆ ಕಣ್ಣೀರು ಹಾಕುತ್ತಾ ಮಂಡಿಯೂರಿ ಅಭಿಮಾನಿ ಪ್ರಾರ್ಥನೆ; Viral Video
ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಬೆಂಬಲಿಗ, ಪ್ರಾರ್ಥನೆ ಮುಗಿದ ಬಳಿಕ ವಿಜಯ್ ಮನೆ ಎದುರು ಮೊಣಕಾಲೂರಿ ಕಣ್ಣೀರು ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜಕೀಯ ಪರಿಸ್ಥಿತಿ ಉದ್ವಿಗ್ನವಾಗಿರುವ ನಡುವೆ, ನಟ-ರಾಜಕಾರಣಿ ವಿಜಯ್ ಅವರ ಬೆಂಬಲಿಗನೊಬ್ಬ ಭಾವನಾತ್ಮಕವಾಗಿ ಕಣ್ಣೀರಿಟ್ಟ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ಗುರುವಾರ ಚೆನ್ನೈನ ನೀಲಂಕರೈ ಪ್ರದೇಶದಲ್ಲಿರುವ ವಿಜಯ್ ನಿವಾಸದ ಹೊರಗೆ ಈ ಘಟನೆ ನಡೆದಿದೆ.
ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಬೆಂಬಲಿಗ, ಪ್ರಾರ್ಥನೆ ಮುಗಿದ ಬಳಿಕ ವಿಜಯ್ ಮನೆ ಎದುರು ಮೊಣಕಾಲೂರಿ ಕಣ್ಣೀರು ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿದೆ. ಪಿಟಿಐ ಸುದ್ದಿಸಂಸ್ಥೆಯ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ ಆತ ಭಾವುಕರಾಗಿದ್ದಾನೆ. ಜೊತೆಗೆ ವಿಜಯ್ ಮನೆ ಮುಂದೆ ಪೊಲೀಸ್ ಸಿಬ್ಬಂದಿ ಕಾಣಿಸದಿರುವುದನ್ನೂ ಪ್ರಶ್ನಿಸಿದ್ದಾನೆ.
“ವಿಜಯ್ ಅವರು ಖಂಡಿತವಾಗಿಯೂ ಮುಖ್ಯಮಂತ್ರಿ ಆಗುತ್ತಾರೆ. ಸುದ್ದಿಚಾನೆಲ್‌ಗಳು ಏನು ಬೇಕಾದರೂ ಹೇಳಲಿ, ಆದರೆ ಅಂತಿಮವಾಗಿ ಆ ಸ್ಥಾನಕ್ಕೆ ಬರುವವರು ಅವರೇ. ಎಷ್ಟು ಅಡೆತಡೆಗಳು ಬಂದರೂ ಅವರು ಎದುರಿಸಿ ಮುಂದೆ ಸಾಗುತ್ತಾರೆ. ನನಗೆ ತುಂಬ ನೋವಾಗುತ್ತಿದೆ. ಇಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಇಲ್ಲ. ಏನು ಹೇಳಬೇಕು ಅನ್ನೋದೂ ಗೊತ್ತಾಗುತ್ತಿಲ್ಲ. ತುಂಬ ವಿಚಿತ್ರ ಅನಿಸುತ್ತಿದೆ. ಇಷ್ಟು ಹೋರಾಟ ಮಾಡಿ ಇಲ್ಲಿ ಬಂದಿರುವಾಗ ಕೆಲವರು ಹೀಗೆ ವರ್ತಿಸುವುದು ನೋವು ಕೊಡುತ್ತಿದೆ,” ಎಂದು ಬೆಂಬಲಿಗ ಕಣ್ಣೀರು ಹಾಕುತ್ತಾ ಹೇಳಿದ್ದಾನೆ.
ಮತ್ತೊಂದು ವೈರಲ್ ವಿಡಿಯೋದಲ್ಲಿ ವಿಜಯ್ ನಿವಾಸದ ಹೊರಗಿನ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ ಎನ್ನಲಾಗಿದೆ. ಬುಧವಾರದವರೆಗೆ ನಟನ ಮನೆ ಎದುರು ನೂರಾರು ಪೊಲೀಸ್ ಸಿಬ್ಬಂದಿ ನಿಯೋಜಿತರಾಗಿದ್ದರು.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ವಿಜಯ್ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಈ ಭಾವನಾತ್ಮಕ ದೃಶ್ಯಗಳು ಗಮನ ಸೆಳೆದಿವೆ.
ಬುಧವಾರ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಡಿಎಂಕೆ ಜೊತೆಗಿನ ಪೂರ್ವ ಚುನಾವಣಾ ಮೈತ್ರಿಯಿಂದ ಹೊರಬಂದು ಕಾಂಗ್ರೆಸ್ ಪಕ್ಷವು ವಿಜಯ್ ಪಕ್ಷಕ್ಕೆ ಬೆಂಬಲ ನೀಡಿದೆ.
234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಆದರೆ ಕಾಂಗ್ರೆಸ್‌ನ ಐದು ಶಾಸಕರ ಬೆಂಬಲ ಸಿಕ್ಕಿದ್ದರೂ ವಿಜಯ್ ಅವರಿಗೆ ಇನ್ನೂ ಬಹುಮತದ ಸಂಖ್ಯೆಗೆ ಕೊರತೆಯಿದೆ. ಸರ್ಕಾರ ರಚಿಸಲು ಆಹ್ವಾನಿಸುವ ಮೊದಲು 118 ಶಾಸಕರ ಬೆಂಬಲವನ್ನು ತೋರಿಸುವಂತೆ ರಾಜ್ಯಪಾಲ ಅರ್ಲೇಕರ್ ವಿಜಯ್ ಅವರಿಗೆ ಸೂಚಿಸಿದ್ದಾರೆ.
ವಿಜಯ್ ಗೆದ್ದಿರುವ ಎರಡು ಕ್ಷೇತ್ರಗಳಲ್ಲಿ ಒಂದನ್ನು ತೆರವುಗೊಳಿಸಬೇಕಾಗಿರುವುದರಿಂದ ಅವರ ಬಲ 107ಕ್ಕೆ ಇಳಿಯಬಹುದು. ಜೊತೆಗೆ ಒಬ್ಬ ಶಾಸಕ ಸ್ಪೀಕರ್ ಆಗುವ ಸಾಧ್ಯತೆ ಇದ್ದು, ಸಾಮಾನ್ಯವಾಗಿ ವಿಶ್ವಾಸಮತ ಯಾಚನೆ ವೇಳೆ ಸಮಬಲದ ಪರಿಸ್ಥಿತಿ ಉಂಟಾದಾಗ ಮಾತ್ರ ಸ್ಪೀಕರ್ ಮತ ಚಲಾಯಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



