Video: ಶಾಲೆ ನಿರ್ಮಾಣದ ಹೆಸರಲ್ಲಿ 800 ವರ್ಷ ಹಳೆಯ ಐತಿಹಾಸಿಕ ಶಿವ ದೇಗುಲ ಧ್ವಂಸ; ವ್ಯಾಪಕ ಆಕ್ರೋಶ
ತೆಲಂಗಾಣದ ವರಂಗಲ್ ಜಿಲ್ಲೆಯ ಅಶೋಕ್ ನಗರದಲ್ಲಿರುವ ಖಾನಾಪುರ ಮಂಡಲದ ಸುಮಾರು 800 ವರ್ಷ ಹಳೆಯ ಕಾಕತೀಯ ಕಾಲದ ಶಿವ ದೇವಾಲಯವನ್ನು ಧ್ವಂಸಗೊಳಿಸಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವರಂಗಲ್: ತೆಲಂಗಾಣದ ವರಂಗಲ್ ಜಿಲ್ಲೆಯ ಅಶೋಕ್ ನಗರದಲ್ಲಿರುವ ಖಾನಾಪುರ ಮಂಡಲದ ಸುಮಾರು 800 ವರ್ಷ ಹಳೆಯ ಕಾಕತೀಯ ಕಾಲದ ಶಿವ ದೇವಾಲಯವನ್ನು ಧ್ವಂಸಗೊಳಿಸಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಕುರಿತು ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಇತಿಹಾಸಕಾರರು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ದೇವಾಲಯವನ್ನು ಸರ್ಕಾರದ ಇಂಟಿಗ್ರೇಟೆಡ್ ಶಾಲೆ ನಿರ್ಮಾಣಕ್ಕಾಗಿ ಭೂಮಿ ತೆರವುಗೊಳಿಸಲು ಬುಲ್ಡೋಜರ್ ಬಳಸಿ ನೆಲಸಮಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಐತಿಹಾಸಿಕ ದೇಗುಲ
ಇತಿಹಾಸಕಾರರ ಪ್ರಕಾರ ಈ ದೇವಾಲಯವು ಗಣಪತಿದೇವ ಆಡಳಿತದ 13ನೇ ಶತಮಾನಕ್ಕೆ ಸೇರಿದ್ದು. ದೇವಾಲಯ ಪ್ರದೇಶದಲ್ಲಿ ಕ್ರಿ.ಶ. 1231ರ ಫೆಬ್ರವರಿಯ ಏಳು ಸಾಲಿನ ಅಪರೂಪದ ತೆಲುಗು ಶಾಸನ ಪತ್ತೆಯಾಗಿತ್ತು. ಆ ಶಾಸನದಲ್ಲಿ ರಾಜನನ್ನು “ಮಹಾರಾಜ” ಮತ್ತು “ರಾಜಾಧಿರಾಜುಲು” ಎಂದು ಉಲ್ಲೇಖಿಸಲಾಗಿತ್ತು. 1965ರಲ್ಲಿ ಹೆರಿಟೇಜ್ ಇಲಾಖೆ ಈ ಕಟ್ಟಡವನ್ನು ದಾಖಲೆ ಮಾಡಿತ್ತು. ಈ ದೇವಾಲಯವು ಐತಿಹಾಸಿಕ “ಕೋಟ ಕಟ್ಟ” ಮಣ್ಣಿನ ಕೋಟೆ ಪ್ರದೇಶದೊಳಗೆ ಇತ್ತು.
ವ್ಯಾಪಕ ಆಕ್ರೋಶ, ದೂರು ದಾಖಲು
ಪ್ರಾಚೀನ ಕೋಟೆ ನಿರ್ಮಾಣಗಳಿಗೆ ಪ್ರಸಿದ್ಧವಾಗಿರುವ ಈ ಪಾರಂಪರಿಕ ತಾಣವನ್ನು ಸುಲಭವಾಗಿ ಸಂರಕ್ಷಿಸಬಹುದಾಗಿತ್ತು ಅಥವಾ ಬೇರೆಡೆ ಸ್ಥಳಾಂತರಿಸಬಹುದಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ಈ ಘಟನೆಯ ಕುರಿತು ತೆಲಂಗಾಣ ಹಕ್ಕುಗಳ ವಕೀಲ ರಾಮಾರಾವ್ ಇಮ್ಮನೇನಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.
ನಂತರ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಪುರಾತತ್ವ ಇಲಾಖೆ ಪ್ರಕರಣ ದಾಖಲಿಸಿವೆ. ಪುರಾತತ್ವ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳ ಕಡ್ಡಾಯ ಅನುಮತಿ ಪಡೆಯದೇ ಕೆಲಸ ನಡೆಸಿದ ಅಧಿಕಾರಿಗಳ ವಿರುದ್ಧ ತೆಲಂಗಾಣ ಹೆರಿಟೇಜ್ ಕಾಯ್ದೆಯ ಸೆಕ್ಷನ್ 30 ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಹೆರಿಟೇಜ್ ಸಂರಕ್ಷಣಾ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸದೇ ವಿಫಲವಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಚ್ಚಿಬಿದ್ದ ಜಿಲ್ಲಾಡಳಿತ, ಮತ್ತೆ ದೇಗುಲ ನಿರ್ಮಾಣ ಭರವಸೆ
ಇನ್ನು ವ್ಯಾಪಕ ಆಕ್ರೋಶ ಮತ್ತು ದೂರುಗಳು ಬಂದ ಹಿನ್ನಲೆಯಲ್ಲಿ ಎಚ್ಚೆತ್ತ ಸ್ಥಳೀಯ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ತಂಡ ಮೇ 6ರಂದು ಜಂಟಿ ಪರಿಶೀಲನೆಯ ಬಳಿಕ ಸ್ಪಷ್ಟನೆ ನೀಡಿತು. 30 ಏಕರೆ ಪ್ರದೇಶದಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸುವ ವೇಳೆ ಹಳೆಯ ಜೀರ್ಣಾವಸ್ಥೆಯ ಕಟ್ಟಡದ ಅವಶೇಷಗಳು ಮಾತ್ರ ಕಂಡುಬಂದಿವೆ ಎಂದು ಆಡಳಿತ ತಿಳಿಸಿದೆ.
ಅಂತೆಯೇ ಇದು ಉದ್ದೇಶಪೂರ್ವಕ ಧ್ವಂಸ ನಡೆದಿಲ್ಲ. ಈ ಕಟ್ಟಡವನ್ನು ಅಧಿಕೃತವಾಗಿ ಸಂರಕ್ಷಿತ ಸ್ಮಾರಕವಾಗಿ ದಾಖಲು ಮಾಡಲಾಗಿರಲಿಲ್ಲ. ಆದರೆ ಸಾರ್ವಜನಿಕರ ಆಕ್ರೋಶ ಶಮನಗೊಳಿಸಲು ವರಂಗಲ್ ಜಿಲ್ಲಾಧಿಕಾರಿ ಡಾ. ಸತ್ಯಾ ಶಾರದಾ ಹಾಗೂ ನರಸಂಪೇಟ ಶಾಸಕ ದೋಂತಿ ಮಾಧವ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು. ಅದೇ ಸ್ಥಳದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಪುನರ್ನಿರ್ಮಿಸುವುದಾಗಿ ಅವರು ಭರವಸೆ ನೀಡಿದರು.
ಇತಿಹಾಸಕಾರರು, ಸ್ಥಪತಿಗಳು ಮತ್ತು ಪುರಾತತ್ವ ಇಲಾಖೆಯ ಸಲಹೆಯೊಂದಿಗೆ ಪುನರ್ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಈ ಪ್ರದೇಶವನ್ನು ಅಧಿಕೃತವಾಗಿ ಸಂರಕ್ಷಿತ ಪಾರಂಪರಿಕ ತಾಣವಾಗಿ ಘೋಷಿಸುವ ಕ್ರಮಗಳನ್ನೂ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



