ಕಲ್ಲಂಗಡಿಯಲ್ಲಿ ಇಲಿ ಪಾಷಾಣ ಮಿಶ್ರಣ: ವಿಧಿವಿಜ್ಞಾನ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಹಿರಂಗ
ಒಂದೇ ಕುಟುಂದ ನಾಲ್ಕು ಸದಸ್ಯರ ಸಾವಿಗೆ ಕಲ್ಲಂಗಡಿ ಹಣ್ಣಲ್ಲ.. ಬದಲಿಗೆ ಅದರೊಳಗಿದ್ದ ಇಲಿ ಪಾಷಾಣ ತಯಾರಿಸುವ ರಾಸಾಯನಿಕ ಕಾರಣ ಎಂದು ಹೇಳಲಾಗಿದೆ.

ಮುಂಬೈ: ಮುಂಬೈನ ಒಂದೇ ಕುಟುಂಬದ ನಾಲ್ಕು ಮಂದಿಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಸಾವಿಗೂ ಮುನ್ನ ಕುಟುಂಬಸ್ಥರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣ ತಯಾರಿಸುವ ರಾಸಾಯನಿಕದ ಅಂಶ ಇದೆ ಎಂದು ಫಾರೆನ್ಸಿಕ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಒಂದೇ ಕುಟುಂದ ನಾಲ್ಕು ಸದಸ್ಯರ ಸಾವಿಗೆ ಕಲ್ಲಂಗಡಿ ಹಣ್ಣಲ್ಲ.. ಬದಲಿಗೆ ಅದರೊಳಗಿದ್ದ ಇಲಿ ಪಾಷಾಣ ತಯಾರಿಸುವ ರಾಸಾಯನಿಕ ಕಾರಣ ಎಂದು ಹೇಳಲಾಗಿದೆ. ವಿಷಪ್ರಯೋಗದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಫಾರೆನ್ಸಿಕ್ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಅಧಿಕಾರಿಗಳು, ಮೃತರ ದೇಹಗಳಲ್ಲಿ ಹಾಗೂ ಅವರು ಸೇವಿಸಿದ್ದ ಹಣ್ಣಿನ ಮಾದರಿಗಳಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ವಿಷಕಾರಿ ಪದಾರ್ಥದ ಗುರುತುಗಳನ್ನು ಪತ್ತೆಹಚ್ಚಿದ್ದಾರೆ. ಮೃತದೇಹಗಳ ಅಂಗಾಗಳಲ್ಲಿ ಹಸಿರು ಬಣ್ಣದ ಛಾಯೆ ಕಂಡುಬಂದ ಕೆಲವೇ ದಿನಗಳ ಬಳಿಕ ಈ ಪ್ರಕರಣದಲ್ಲಿ ಮಹತ್ವದ ತಿರುವು ಬೆಳಕಿಗೆ ಬಂದಿದೆ.
ಬಿರಿಯಾನಿ ತಿಂದು ಕಲ್ಲಂಗಡಿ ಸೇವಿಸಿದ್ದ ಕುಟುಂಬ
ಅಂದು ಅಬ್ದುಲ್ಲಾ ದಕಾದಿಯಾ 45, ಅವರ ಪತ್ನಿ ನಸ್ರೀನ್ ದಕಾದಿಯಾ 35 ಮತ್ತು ಅವರ ಪುತ್ರಿಯರಾದ ಜೈನಬ್ ದಕಾದಿಯಾ 13, ಆಯೇಶಾ ದಕಾದಿಯಾ 16 ತಮ್ಮ ಮುಂಬೈ ನಿವಾಸದಲ್ಲಿ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಅವರು ಅತಿಥಿಗಳಿಗೆ ಮಟನ್ ಪುಲಾವ್ ನೀಡಿದ್ದರು.
ಸಂಬಂಧಿಕರು ಮನೆಬಿಟ್ಟು ಹೋದ ಕೆಲ ಗಂಟೆಗಳ ಬಳಿಕ, ರಾತ್ರಿ 1 ಗಂಟೆ ಸುಮಾರಿಗೆ ಕುಟುಂಬದವರು ಕಲ್ಲಂಗಡಿ ಹಣ್ಣು ಸೇವಿಸಿದ್ದರು. ಬೆಳಿಗ್ಗೆ 5 ಗಂಟೆಯೊಳಗೆ ನಾಲ್ವರೂ ತೀವ್ರ ವಾಂತಿ ಮತ್ತು ಜಲದೋಷದಿಂದ ಬಳಲತೊಡಗಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟರು.
ಬೆಚ್ಚಿ ಬೀಳಿಸಿದ್ದ ಘಟನೆ
ಫಾರೆನ್ಸಿಕ್ ಪರೀಕ್ಷೆಯಲ್ಲಿ ನಾಲ್ವರೂ ಪ್ರಾಣಾಂತಿಕ ಇಲಿ ವಿಷದ ಪರಿಣಾಮದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರು ಅವರ ದೇಹಗಳಲ್ಲಿ ಜಿಂಕ್ ಫಾಸ್ಫೈಡ್ ಎಂಬ ವಿಷಕಾರಿ ರಾಸಾಯನಿಕದ ಗುರುತುಗಳನ್ನು ಪತ್ತೆಹಚ್ಚಿದ್ದಾರೆ. ಈ ರಾಸಾಯನಿಕವನ್ನು ಸಾಮಾನ್ಯವಾಗಿ ಇಲಿ ವಿಷದಲ್ಲಿ ಬಳಸಲಾಗುತ್ತದೆ. ಕುಟುಂಬದವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲಿಯೂ ಜಿಂಕ್ ಫಾಸ್ಫೈಡ್ ಪತ್ತೆಯಾಗಿದೆ. ಈ ರಾಸಾಯನಿಕ ಹಣ್ಣಿಗೆ ಆಕಸ್ಮಿಕವಾಗಿ ಸೇರಿತೇ ಅಥವಾ ಉದ್ದೇಶಪೂರ್ವಕವಾಗಿ ಹಣ್ಣಿನೊಳಗೆ ಇಂಜೆಕ್ಟ್ ಮಾಡಲಾಗಿತ್ತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಕಳೆದ ವಾರ ನಡೆದ ಪ್ರಾಥಮಿಕ ಫಾರೆನ್ಸಿಕ್ ಪರೀಕ್ಷೆಯಲ್ಲಿ ಮೃತರ ಕೆಲವು ಅಂಗಾಗಳು ಹಸಿರು ಬಣ್ಣಕ್ಕೆ ತಿರುಗಿದ್ದವು ಎಂಬುದು ತಿಳಿದುಬಂದಿತ್ತು. ಮೆದುಳು, ಹೃದಯ ಮತ್ತು ಅಂತರಗಳು ಸೇರಿದಂತೆ ಕೆಲವು ಅಂಗಗಳಲ್ಲಿ ಈ ಬಣ್ಣ ಬದಲಾವಣೆ ಕಂಡುಬಂದಿತ್ತು. ಇದು ವಿಷಪ್ರಯೋಗದ ಸೂಚನೆಯಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಅಬ್ದುಲ್ಲಾ ಅವರ ದೇಹದಲ್ಲಿ ಮಾರ್ಫಿನ್ ಎಂಬ ಶಕ್ತಿಶಾಲಿ ವೇದನಾ ನಿವಾರಕ ಔಷಧಿಯ ಗುರುತುಗಳೂ ಪತ್ತೆಯಾಗಿದ್ದವು. ಮಾರ್ಫಿನ್ ಸಾಮಾನ್ಯವಾಗಿ ನಿಯಂತ್ರಿತ ವೈದ್ಯಕೀಯ ಪರಿಸ್ಥಿತಿಯಲ್ಲಿ ಮಾತ್ರ ನೀಡಲಾಗುತ್ತದೆ. ಇದು ವೈದ್ಯಕೀಯ ಚಿಕಿತ್ಸೆ, ಆಕಸ್ಮಿಕ ಸಂಪರ್ಕ ಅಥವಾ ಇನ್ನಾವುದೇ ಅನುಮಾನಾಸ್ಪದ ಕಾರಣಕ್ಕೆ ಸಂಬಂಧಿಸಿದ್ದೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪೊಲೀಸರು ಮೊದಲು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿ ಕುಟುಂಬದ ಊಟಕ್ಕೆ ಬಂದಿದ್ದ ಅತಿಥಿಗಳ ಹೇಳಿಕೆಗಳನ್ನು ದಾಖಲಿಸಿದ್ದರು. ಮಟನ್ ಪುಲಾವ್ ಸೇವಿಸಿದ್ದ ಅತಿಥಿಗಳಿಗೆ ಯಾವುದೇ ತೊಂದರೆ ಆಗದ ಕಾರಣ, ತನಿಖಾಧಿಕಾರಿಗಳು ನಂತರ ಕುಟುಂಬ ಸೇವಿಸಿದ್ದ ಕಲ್ಲಂಗಡಿ ಹಣ್ಣಿನತ್ತ ಗಮನ ಹರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



