Mangaluru: ವಿದ್ಯಾರ್ಥಿ ಸಂಘದ ಕಾರ್ಯಕ್ರಮದ ವೇಳೆ ತಡೆ ಗೋಡೆ ಕುಸಿತ; ವಿದ್ಯಾರ್ಥಿ ಬ್ರೇನ್‌ಡೆಡ್, ನಾಲ್ವರಿಗೆ ಗಾಯ, Video
ಮೃತಪಟ್ಟ ವಿದ್ಯಾರ್ಥಿಯನ್ನು ಹಳೆಅಂಗಡಿ ನಿವಾಸಿ ಮೊಹಮ್ಮದ್ ಶಮಾಜ್ (16) ಎಂದು ಗುರುತಿಸಲಾಗಿದ್ದು, ಅವರು ಕಾಲೇಜು ವಿದ್ಯಾರ್ಥಿಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಕಟ್ಟಡದ ಮೊದಲ ಮಹಡಿಯ ಪ್ಯಾರಪಿಟ್ (ತಡೆ) ಗೋಡೆ ಕುಸಿದು ಬಿದ್ದ ಪರಿಣಾಮ 16 ವರ್ಷದ ವಿದ್ಯಾರ್ಥಿಯೊಬ್ಬ ಬ್ರೇನ್‌ಡೆಡ್ ಆಗಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರ ಯೆಮ್ಮೆಕೆರೆನಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಹಳೆಅಂಗಡಿ ನಿವಾಸಿ ಮೊಹಮ್ಮದ್ ಶಮಾಜ್ (16) ಎಂದು ಗುರುತಿಸಲಾಗಿದ್ದು, ಅವರು ಕಾಲೇಜು ವಿದ್ಯಾರ್ಥಿಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಕಾರ್ಯಕ್ರಮ ನಡೆಯುತ್ತಿದ್ದಾಗ ಶಮಾಜ್ ನೆಲ ಮಹಡಿಯಲ್ಲಿ ನಿಂತಿದ್ದ ವೇಳೆ ಮೇಲಿನಿಂದ ಪ್ಯಾರಪಿಟ್ ಗೋಡೆಯ ಒಂದು ಭಾಗ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.
ಘಟನೆ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದು, ಕಾರ್ಯಕ್ರಮಕ್ಕಾಗಿ ರಾಮಲಕ್ಷ್ಮಿ ಹಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರು. ಹಾಲ್‌ನಲ್ಲಿ ಜನದಟ್ಟಣೆ ಹೆಚ್ಚಾದ ಕಾರಣ ಹಲವು ವಿದ್ಯಾರ್ಥಿಗಳು ಹೊರಗಿನ ಕಾರಿಡಾರ್‌ನಲ್ಲಿ ನಿಂತಿದ್ದರು.
ಈ ವೇಳೆ ಕೆಲ ವಿದ್ಯಾರ್ಥಿಗಳು ದುರ್ಬಲವಾಗಿದ್ದ ಪ್ಯಾರಪಿಟ್ ಗೋಡೆಗೆ ಒರಗಿ ನಿಂತಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳ ಭಾರ ತಾಳದೆ ಗೋಡೆ ಕುಸಿದಿರುವ ಶಂಕೆ ವ್ಯಕ್ತವಾಗಿದೆ.
ರಕ್ಷಣಾ ಕಾರ್ಯಾಚರಣೆ, ಆಸ್ಪತ್ರೆಗೆ ದಾಖಲು
ಗೋಡೆ ಕುಸಿದ ತಕ್ಷಣ ಗಾಯಗೊಂಡ ವಿದ್ಯಾರ್ಥಿಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಶಮಾಜ್ ಅವರನ್ನು ವೈದ್ಯರು ಬ್ರೇನ್‌ಡೆಡ್ ಎಂದು ಘೋಷಿಸಿದ್ದಾರೆ.
ಗಾಯಗೊಂಡವರನ್ನು ಸುರಿಂಜೆ ನಿವಾಸಿ ಮೊಹಮ್ಮದ್ ಶನಾನ್ (18), ಅಡ್ಯಾರ್‌ನ ಹನೀಫ್ (23), ಕಸ್ಬಾ ಬೆಂಗ್ರೆಯ ಮೊಹಮ್ಮದ್ ಶಕೀಲ್ ಹುಸೇನ್ (18) ಹಾಗೂ ಕಾವೂರಿನ ಗಾಂಧಿನಗರ ನಿವಾಸಿ ದಾವೂದ್ ಫರ್ಸೀನ್ ಅಹ್ಮದ್ (18) ಎಂದು ಗುರುತಿಸಲಾಗಿದೆ.
ಕಾರ್ಯಕ್ರಮ ಮುಕ್ತಾಯಗೊಂಡು ಅತಿಥಿಗಳು ಸ್ಥಳದಿಂದ ತೆರಳಿದ ಕೆಲವೇ ಸಮಯದ ಬಳಿಕ ಈ ಘಟನೆ ಸಂಭವಿಸಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಘಟನೆ ಕುರಿತು ಪಾಂಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



