Ketan Agarwal Murder: ತಪ್ಪಿತಸ್ಥಳಾಗಿದ್ದರೆ ಕೇತನ್ ಬಿದ್ದ ಕೋಟೆಯಿಂದಲೇ ಆಕೆಯನ್ನೂ ತಳ್ಳಿ'; ಮೊದಲ ಬಾರಿಗೆ ಮೌನ ಮುರಿದ ಸಿಯಾ ತಂದೆ..!
ಕೇತನ್ ನಮ್ಮ ಮನೆಯ ಮಗನಂತೆಯೇ ಆಗಿದ್ದ. ಅವರ ಮೇಲೆ ನಮಗೆ ಅಪಾರ ಪ್ರೀತಿ ಇತ್ತು. ಒಳ್ಳೆಯ ಗುಣದ, ಉತ್ತಮ ಭವಿಷ್ಯ ಹೊಂದಿದ್ದ ಯುವಕನನ್ನು ಕಳೆದುಕೊಂಡಿದ್ದೇವೆ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಅವರ ಮದುವೆಯನ್ನು ಉದಯಪುರದಲ್ಲಿ ಅದ್ಧೂರಿಯಾಗಿ ನಡೆಸುವ ಕನಸು ಕಂಡಿದ್ದೆವು.

ಪುಣೆ: ಪುಣೆಯ ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿಯಾ ಗೋಯಲ್ ಅವರ ಕುಟುಂಬ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.
ಕೇತನ್ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿದ ಸಿಯಾ ತಂದೆ, "ನನ್ನ ಮಗಳೇ ತಪ್ಪಿತಸ್ಥಳಾಗಿದ್ದರೂ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಆಗ್ರಹಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಿಯಾ ತಂದೆ ಪ್ರವೀಣ್ ಗೋಯಲ್, "ಇದು ಅತ್ಯಂತ ದುಃಖಕರ ಘಟನೆ. ನಡೆದಿರುವುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಕೇತನ್ ಅವರ ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಆದರೆ, ನಮಗೂ ನಮ್ಮ ಮಗನನ್ನೇ ಕಳೆದುಕೊಂಡಂತಾಗಿದೆ" ಎಂದು ಭಾವುಕರಾದರು.
"ಕೇತನ್ ನಮ್ಮ ಮನೆಯ ಮಗನಂತೆಯೇ ಆಗಿದ್ದ. ಅವರ ಮೇಲೆ ನಮಗೆ ಅಪಾರ ಪ್ರೀತಿ ಇತ್ತು. ಒಳ್ಳೆಯ ಗುಣದ, ಉತ್ತಮ ಭವಿಷ್ಯ ಹೊಂದಿದ್ದ ಯುವಕನನ್ನು ಕಳೆದುಕೊಂಡಿದ್ದೇವೆ. ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಅವರ ಮದುವೆಯನ್ನು ಉದಯಪುರದಲ್ಲಿ ಅದ್ಧೂರಿಯಾಗಿ ನಡೆಸುವ ಕನಸು ಕಂಡಿದ್ದೆವು. ಈಗ ಆ ಕನಸು ನುಚ್ಚುನೂರಾಗಿದೆ" ಎಂದು ಕಣ್ಣೀರಿಟ್ಟಿದ್ದಾರೆ.
ಸಿಯಾ ಮತ್ತು ಕೇತನ್ ಅವರ ಸಂಬಂಧದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. "ಸಿಯಾ ಎಂದಿಗೂ ಈ ಮದುವೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ನಿಶ್ಚಿತಾರ್ಥವಾದ ದಿನದಿಂದಲೂ ಆಕೆ ಸಂತೋಷವಾಗಿಯೇ ಇದ್ದಳು. ಯಾವಾಗಲೂ ಕೇತನ್ ಬಗ್ಗೆಯೇ ಮಾತನಾಡುತ್ತಿದ್ದಳು. ಕೇತನ್ ಅವರ ಪೋಷಕರು ಸಮಸ್ಯೆ ಇದೆ ಎಂದು ನಮಗೆ ಸೂಚನೆ ನೀಡಿದ್ದರೆ, ನಾವು ಕೂಡಲೇ ಮಾತನಾಡಿ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೆವು" ಎಂದು ಹೇಳಿದ್ದಾರೆ.
ಇದೇ ವೇಳೆ ಕೇತನ್ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಅವರು, "ಕೊಲೆ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು. ಕೇತನ್ ಬಿದ್ದ ಅದೇ ಕೋಟೆಯಿಂದ ತಪ್ಪಿತಸ್ಥರನ್ನು ತಳ್ಳಬೇಕು, ಅದು ನನ್ನ ಮಗಳೇ ಆಗಿದ್ದರೂ ಸಹ, ಕೆಳಗೆ ತಳ್ಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಸಿಯಾ ಗೋಯಲ್ ಹಾಗೂ ಆಕೆಯ ಸ್ನೇಹಿತ ಚೇತನ್ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



