ಉದ್ಯಮಿ ಸಾವಿಗೆ ಬಿಗ್ ಟ್ವಿಸ್ಟ್: ಫೋಟೋಶೂಟ್ ವೇಳೆ ಪ್ರಿಯಕರನ ಜತೆ ಸೇರಿ ಭಾವಿ ಪತಿಯನ್ನೇ ಪ್ರಪಾತಕ್ಕೆ ತಳ್ಳಿ ಕೊಂದ ವಧು!
ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ತನಿಖೆ ವೇಳೆ ಇದೊಂದು ಕೊಲೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಪೊಲೀಸರು ಪುಣೆ ಯುವತಿ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಿದ್ದಾರೆ.

ಪುಣೆ: ಜೂನ್ 18 ರಂದು ಮಹಾರಾಷ್ಟ್ರದ ಐತಿಹಾಸಿಕ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು ಆಕಸ್ಮಿಕ ಸಾವಲ್ಲ. ಇದೊಂದು ಭೀಕರ ಕೊಲೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಹೇಳಲಾಗಿತ್ತು. ಆದರೆ ಪೊಲೀಸ್ ತನಿಖೆ ವೇಳೆ ಇದೊಂದು ಕೊಲೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಪೊಲೀಸರು ಪುಣೆ ಯುವತಿ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಿದ್ದಾರೆ.
ಕೇತನ್ ವಿಶಾಲ್ ಅಗರ್ವಾಲ್ ಅವರು ಜೂನ್ 18 ರಂದು ಪುಣೆ ಬಳಿಯ ಲೋಹಗಡ್ ಕೋಟೆಯಲ್ಲಿ ಸುಮಾರು 400 ಅಡಿ ಆಳದ ಕಮರಿಗೆ ಬಿದ್ದು ಸಾವನ್ನಪ್ಪಿದ್ದರು. ಆ ಸಮಯದಲ್ಲಿ, ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಿದ್ಧವಾಗಿದ್ದ ಸಿಯಾ ಗೋಯಲ್, ವಿಹಾರದ ಸಮಯದಲ್ಲಿ ಫೋಟೋ ತೆಗೆಯುವಾಗ ಜಾರಿ ಬಿದ್ದಿರು ಎಂದು ಹೇಳಿದ್ದರು. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು.
ಆದರೆ ತನಿಖಾಧಿಕಾರಿಗಳು ಈಗ ಇದು ಆಕಸ್ಮಿಕ ಸಾವಲ್ಲ. ಕೊಲೆ ಎಂದು ಹೇಳಿದ್ದು, ಕೇತನ್ ಅವರನ್ನು ಅವರ ಭಾವಿ ಪತ್ನಿ ಮತ್ತು ಆಕೆಯ ಪ್ರೇಮಿ ಸೇರಿ ಕಣಿವೆಗೆ ತಳ್ಳಿದ್ದಾರೆ ಎಂದು ತಿಳಿಸಿದ್ದಾರೆ.
ಕೇತನ್ ಹಾಗೂ ಸಿಯಾ ಮದುವೆಗಾಗಿ 17 ಕೋಟಿ ರೂ. ಖರ್ಚು ಮಾಡಿ ಜೈಪುರದ ಅರಮನೆಯನ್ನೇ ಕಾಯ್ದಿರಿಸಲಾಗಿತ್ತು. ಅತಿಥಿಗಳನ್ನು ಕರೆತರಲು ಎರಡು ಖಾಸಗಿ ವಿಮಾನಗಳ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್ ನಲ್ಲಿ ಈ ಮದುವೆ ಧಾಂ ಧೂಂ ಆಗಿ ನೆರವೇರಬೇಕಿತ್ತು. ಆದರೆ ಒಲ್ಲದ ವಧು ಪ್ರಿಯತಮನ ಜೊತೆಗೂಡಿ ತನ್ನ ಭಾವೀ ಪತಿಯನ್ನೇ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿ ನಾಟಕವಾಡಿದ ಘಟನೆ ನಡೆದಿದೆ.
"ನಮ್ಮ ತಂಡಗಳು ಹಣಕಾಸಿನ ವಿವಾದ ಮತ್ತು ವೈಯಕ್ತಿಕ ಸಂಬಂಧಗಳು ಸೇರಿದಂತೆ ಹಲವು ಕೋನಗಳಿಂದ ತನಿಖೆ ನಡೆಸಿವೆ. ತನಿಖೆಯ ಸಮಯದಲ್ಲಿ, ಗೋಯಲ್, ಪುಣೆಯ ಕೊಂಧ್ವಾ ನಿವಾಸಿ ಚೇತನ್ ಬಾಬುಲಾಲ್ ಚೌಧರಿ(22) ಎಂಬ ಯುವಕನೊಂದಿಗೆ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬಂದಿತು" ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಹೇಳಿದ್ದಾರೆ.
ನಡೆದಿದ್ದು ಏನು?
ಜೂನ್ 19 ರಂದು ಸಿಯಾ ಗೋಯಲ್ ಹುಟ್ಟುಹಬ್ಬವಿತ್ತು. ಇದರ ಮುನ್ನಾದಿನ ಅಂದರೆ ಜೂನ್ 18 ರಂದು ಬೆಳಿಗ್ಗೆ, ಭಾವಿ ಪತ್ನಿಯ ಬರ್ತ್‌ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಕೇತನ್ ಮತ್ತು ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಬಂದಿದ್ದರು. ಕೋಟೆಯ ತುದಿಯಲ್ಲಿ ಬೆಳಿಗ್ಗೆ 10:30ರ ಸುಮಾರಿಗೆ ಫೋಟೋ ತೆಗೆದುಕೊಳ್ಳುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.
ಆದರೆ ಲೋನಾವಾಲಾ ಗ್ರಾಮಾಂತರ ಪೊಲೀಸರ ತನಿಖೆಯ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಕಾಡಿದ್ದವು. ಮೊಬೈಲ್ ಡೇಟಾ, ಕರೆ ದಾಖಲೆಗಳ ಪರಿಶೀಲನೆ ಮತ್ತು ಸ್ಥಳದಲ್ಲಿದ್ದ ಜನರ ಹೇಳಿಕೆಗಳನ್ನು ಪಡೆದುಕೊಂಡ ಬಳಿಕವಂತೂ ಪೊಲೀಸರ ಶಂಕೆ ತೀವ್ರವಾಯಿತು. ತಕ್ಷಣವೇ ಪೊಲೀಸರು ಆಕೆ ಮತ್ತು ಆಕೆಯ ಪ್ರೇಮಿಯನ್ನು ವಶಕ್ಕೆ ಪಡೆದರು. ತನಿಖಾಧಿಕಾರಿಗಳ ಪ್ರಕಾರ, ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಕೇತನ್‌ನನ್ನು ಆಳವಾದ ಪ್ರಪಾತಕ್ಕೆ ತಳ್ಳಿದ್ದಾರೆ ಎಂದು ತಿಳಿದುಬಂದಿದೆ. ಈ ಆರೋಪಿಗಳಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




