'ನನ್ನ ಜೊತೆ ಬದುಕು, ಇಲ್ಲವೇ ಸಾಯಿ'; ನಿಶ್ಚಿತಾರ್ಥಕ್ಕೆ ಸಿದ್ಧವಾಗಿದ್ದ ಪ್ರೇಯಸಿ ಕತ್ತು ಹಿಸುಕಿ ಕೊಂದು, ಆತ್ಮಹತ್ಯೆ ನಾಟಕವಾಡಿದ್ದ ಆರೋಪಿ ಬಂಧನ
ಚಂದ್ರಶೇಖರ್ ಮತ್ತು ಭವಾನಿ ಸುಮಾರು ಒಂದು ವರ್ಷದ ಹಿಂದೆ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದು, ಒಟ್ಟಿಗೆ ವಾಸಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆದರೆ, ಇತ್ತೀಚೆಗೆ ಚಂದ್ರಶೇಖರ್‌ಗೆ ಈಗಾಗಲೇ ಮದುವೆಯಾಗಿದ್ದು, ಆರು ವರ್ಷದ ಮಗು ಕೂಡ ಇದೆ ಎಂಬ ಸತ್ಯ ಭವಾನಿಗೆ ತಿಳಿದಿತ್ತು.

ಬೆಂಗಳೂರು: ರಹಸ್ಯವಾಗಿ ವಿವಾಹವಾಗಿದ್ದ ಯುವತಿಯ ನಿಶ್ಚಿತಾರ್ಥ ನಡೆಯಲಿರುವ ವಿಚಾರ ತಿಳಿದು ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು 26 ವರ್ಷದ ಭವಾನಿ ಎಸ್ ಎಂದು ಗುರುತಿಸಲಾಗಿದೆ. ಆಕೆ ತುಳಸಿ ನಗರ ನಿವಾಸಿಯಾಗಿದ್ದು, ಮೂಲತಃ ಮಾಗಡಿ ತಾಲೂಕಿನವರಾಗಿದ್ದರು. ತಿಗಳರಪಾಳ್ಯದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಬಿಲ್ಲಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಆರೋಪಿಯನ್ನು ಚಂದ್ರಶೇಖರ್ (33) ಎಂದು ಗುರ್ತಿಸಲಾಗಿದ್ದು. ಈತ ಆಟೋ ಚಾಲಕನಾಗಿದ್ದ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ಬೆಳಿಗ್ಗೆ ಭವಾನಿಯ ಅತ್ತೆ ಆಕೆಯ ತಾಯಿಗೆ ಕರೆ ಮಾಡಿ, ಭವಾನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಯುವಕನೊಬ್ಬನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಅನುಮಾನಗೊಂಡ ತಂದೆ ಶ್ರೀನಿವಾಸ್ ಎನ್ ಅವರು ಬೆಳಿಗ್ಗೆ ಸುಮಾರು 7.30ಕ್ಕೆ ಮಗಳಿಗೆ ಕರೆ ಮಾಡಿದ್ದಾರೆ.
ಹಲವಾರು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಅವರು ಮನೆ ಮಾಲೀಕರನ್ನು ಸಂಪರ್ಕಿಸಿ ವಿಚಾರಿಸಲು ಕೇಳಿದ್ದಾರೆ. ಬಳಿಕ ಮಾಲೀಕರು ಎಷ್ಟೇ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮನೆಯೊಳಗೆ ಭವಾನಿ ಮೃತ ಪತ್ತೆಯಾಗಿದೆ. ಇದೇ ವೇಳೆ ಆರೋಪಿ ಚಂದ್ರಶೇಖರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಜೀವಂತವಾಗಿರುವುದು ಕಂಡು ಬಂದಿದೆ. ಕೂಡಲೇ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮನೆಯೊಳಗೆ ವಿಷಕಾರಿ ಪದಾರ್ಥದ ವಾಸನೆ ಹರಡಿದ್ದು, ಭವಾನಿ ಹಾಗೂ ಚಂದ್ರಶೇಖರ್ ಇಬ್ಬರ ದೇಹದಿಂದಲೂ ಅದೇ ವಾಸನೆ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಚಂದ್ರಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ತನಿಖೆಯಲ್ಲಿ ಚಂದ್ರಶೇಖರ್ ಮತ್ತು ಭವಾನಿ ಸುಮಾರು ಒಂದು ವರ್ಷದ ಹಿಂದೆ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದು, ಒಟ್ಟಿಗೆ ವಾಸಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆದರೆ, ಇತ್ತೀಚೆಗೆ ಚಂದ್ರಶೇಖರ್‌ಗೆ ಈಗಾಗಲೇ ಮದುವೆಯಾಗಿದ್ದು, ಆರು ವರ್ಷದ ಮಗು ಕೂಡ ಇದೆ ಎಂಬ ಸತ್ಯ ಭವಾನಿಗೆ ತಿಳಿದಿತ್ತು.
ಈ ವಿಚಾರದಿಂದ ಮನನೊಂದ ಭವಾನಿ ತನ್ನ ಕುಟುಂಬದವರಿಗೆ ವಿಷಯ ತಿಳಿಸಿದ್ದರು. ಬಳಿಕ ಆಕೆಯ ಪೋಷಕರು ಮತ್ತೊಬ್ಬ ವರನನ್ನು ಹುಡುಕಿ ನಿಶ್ಚಿತಾರ್ಥದ ಸಿದ್ಧತೆಗಳನ್ನು ನಡೆಸುತ್ತಿದ್ದರು. ಮುಂದಿನ ವಾರ ನಿಶ್ಚಿತಾರ್ಥ ನಿಗದಿಯಾಗಿತ್ತು ಎನ್ನಲಾಗಿದೆ.
ಈ ವಿಚಾರ ತಿಳಿದ ಚಂದ್ರಶೇಖರ್ ಶನಿವಾರ ಭವಾನಿಯ ಮನೆಗೆ ಬಂದಿದ್ದು, ಜಗಳಕ್ಕಿಳಿದಿದ್ದಾನೆ. "ನೀನ್ನಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ. ಇಬ್ಬರೂ ಒಟ್ಟಿಗೆ ಬದುಕೋಣ ಅಥವಾ ಒಟ್ಟಿಗೆ ಸಾಯೋಣ" ಎಂದು ಹೇಳಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಚಂದ್ರಶೇಖರ್ ಅವರಿಬ್ಬರ ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಈ ಫೋಟೋವನ್ನು ಕಂಡ ಭವಾನಿಯ ಕುಟುಂಬದವರು ಆಕೆಯನ್ನು ಸಂಪರ್ಕಿಸಿದ್ದಾರೆ.
ವಿಷಯ ಎಲ್ಲರಿಗೂ ತಿಳಿದಿರುವುದು ಗೊತ್ತಾದ ಬಳಿಕ ಭವಾನಿ ಮತ್ತು ಚಂದ್ರಶೇಖರ್ ನಡುವೆ ಮತ್ತೊಮ್ಮೆ ಜಗಳ ನಡೆದಿದ್ದು, ವಾಗ್ವಾದದ ವೇಳೆ ಚಂದ್ರಶೇಖರ್ ಭವಾನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



