Assam: ಜೋರ್ಹತ್ ವಾಯುನೆಲೆಯಲ್ಲಿ AN-32 ವಿಮಾನ ಪತನ; ಕೊನೇ ಕ್ಷಣದಲ್ಲಿ ಆಗಿದ್ದೇನು? Video
ವಿಮಾನವು ನಿಯಮಿತ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮವಾಗಿ ಐದು IAF ಸಿಬ್ಬಂದಿ ಸಾವನ್ನಪ್ಪಿದ್ದರು. ಸಹ ಪೈಲಟ್ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುವಾಹತಿ: ಕಳೆದ ಶನಿವಾರ ಐದು ಸಿಬ್ಬಂದಿಗಳ ದಾರುಣ ಸಾವಿಗೆ ಕಾರಣವಾದ ಅಸ್ಸಾಂ ಜೋರ್ಹತ್ ವಾಯುನೆಲೆಯಲ್ಲಿ ಸಂಭವಿಸಿದ AN-32 ವಿಮಾನ ಪತನದ ಅಂತಿಮ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು.. ಭಾರತೀಯ ವಾಯುಸೇನೆಗೆ ಸೇರಿದ AN-32 ವಿಮಾನ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಜೋರ್ಹತ್‌ನಲ್ಲಿ ನಡೆದ ದುರಂತ ಘಟನೆಯ ಸುತ್ತಲಿನ ಕ್ಷಣಗಳನ್ನು ತೋರಿಸುತ್ತಿದೆ.
ಭಾರತೀಯ ವಾಯುಪಡೆಯ ಸಾರಿಗೆ ವಿಮಾನವು ನಿಯಮಿತ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದರ ಪರಿಣಾಮವಾಗಿ ಐದು IAF ಸಿಬ್ಬಂದಿ ಸಾವನ್ನಪ್ಪಿದ್ದರು. ಸಹ ಪೈಲಟ್ ಬದುಕುಳಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಕಾರಣವನ್ನು ನಿರ್ಧರಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ.
ಅಂತಿಮ ಕ್ಷಣದಲ್ಲಿ ಆಗಿದ್ದೇನು?
ಅಂಟೋನೋವ್ AN-32 ವಿಮಾನವು ನಿಯಮಿತ ತರಬೇತಿ/ಕಾರ್ಯಾಚರಣಾ ಹಾರಾಟದಲ್ಲಿತ್ತು. ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಇಳಿಯುವ ವೇಳೆ ವಿಮಾನವು ರನ್ ವೇ ಮೇಲೆ ಇಳಿಯಿತಾದರೂ ಅಂತಿಮ ಕ್ಷಣದಲ್ಲಿ ನಿಯಂತ್ರಣ ತಪ್ಪಿ ರನ್‌ವೇಯಿಂದ ಹೊರ ಹೋಗಿತ್ತು.
ನಂತರ ಅದು ಟ್ಯಾಕ್ಸಿವೇ ದಾಟಿ, ಹಳ್ಳಕ್ಕೆ ಇಳಿದು ಅದರ ಮೂತಿ ನೆಲಕ್ಕೆ ಅಪ್ಪಳಿಸಿತು. ಈ ವೇಳೆ ವಿಮಾನ ಹಲವು ಭಾಗಗಳಾಗಿ ಒಡೆದು ಬೆಂಕಿಗಾಹುತಿಯಾಯಿತು.
ಅಪಘಾತದ ವೇಳೆ ವಿಮಾನದಲ್ಲಿ ಒಟ್ಟು ಆರು ಸಿಬ್ಬಂದಿ ಇದ್ದರು. ಈ ದುರಂತದಲ್ಲಿ ಐವರು ಭಾರತೀಯ ವಾಯುಪಡೆ ಸಿಬ್ಬಂದಿ ಮೃತಪಟ್ಟರು, ಒಬ್ಬ ಸಹ-ಪೈಲಟ್ (Co-pilot) ಬದುಕುಳಿದು ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟರು.
ದುರಂತಕ್ಕೆ ಕಾರಣವೇನು?
ದುರಂತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಸಲು ಭಾರತೀಯ ವಾಯುಪಡೆಯು ಕೋರ್ಟ್ ಆಫ್ ಇಂಕ್ವೈರಿ (Court of Inquiry)ಗೆ ಆದೇಶಿಸಿದೆ. ತಾಂತ್ರಿಕ ದೋಷ, ರನ್‌ವೇ ಸಮಸ್ಯೆ, ಮಾನವೀಯ ತಪ್ಪು ಅಥವಾ ಇತರ ಕಾರಣಗಳಿಂದ ದುರಂತ ಸಂಭವಿಸಿರಬಹುದೇ ಎಂಬುದನ್ನು ತನಿಖೆ ಪರಿಶೀಲಿಸುತ್ತಿದೆ. ಇದುವರೆಗೆ ಯಾವುದೇ ಅಂತಿಮ ವರದಿ ಪ್ರಕಟವಾಗಿಲ್ಲ.
ಮೃತಪಟ್ಟ ಸಿಬ್ಬಂದಿ
ಈ ದುರಂತದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಫ್ಲಿಂಟ್ ಲೆಫ್ಟಿನೆಂಟ್ ಶುಭಮ್ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ, ಅಗ್ನಿವೀರ್ ವಾಯು ಖೇಮಾರಾಮ್ ಕುಮಾವತ್ ಮತ್ತು ಅಗ್ನಿವೀರ್ ವಾಯು ಡ್ಯಾನಿಶ್ ಆಲಂ ಸಾವನ್ನಪ್ಪಿದ್ದಾರೆ.
ಅಂದಹಾಗೆ AN-32 ಸೋವಿಯತ್ ವಿನ್ಯಾಸದ ಅವಳಿ-ಎಂಜಿನ್ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, ಇದನ್ನು ಭಾರತೀಯ ವಾಯುಪಡೆಯು ಎತ್ತರದ ಮತ್ತು ದೂರದ ಪ್ರದೇಶಗಳು ಸೇರಿದಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್, ಸರಕು ಸಾಗಣೆ ಮತ್ತು ಕಾರ್ಯಾಚರಣೆಯ ಬೆಂಬಲಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ.
ಮೊದಲಿಗೆ ಈ ವಿಮಾನವನ್ನು 1980ರ ದಶಕದಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. ಸೈನಿಕರು, ಆಹಾರ ಸಾಮಗ್ರಿಗಳು ಮತ್ತು ಉಪಕರಣಗಳನ್ನು ದೂರದ ಹಾಗೂ ಎತ್ತರದ ಪ್ರದೇಶಗಳಿಗೆ ಸಾಗಿಸಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ವಿಮಾನಗಳ ಆಧುನೀಕರಣ ನಡೆದಿದ್ದರೂ, ಈ ವಿಮಾನಗಳ ವಯಸ್ಸು ಈಗ 40 ವರ್ಷಕ್ಕಿಂತ ಹೆಚ್ಚಾಗಿದೆ. ಈ ದುರಂತದ ಬಳಿಕ AN-32 ವಿಮಾನಗಳ ಸುರಕ್ಷತೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.
ಇದೇ ಮೊದಲೇನಲ್ಲ
ಜೋರ್ಹಾತ್ ನಲ್ಲಿ ಸಂಭವಿಸಿದ ದುರಂತ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇದೇ ಎಎನ್ 32 ಸರಣಿಯ ವಿಮಾನಗಳು ಅಪಘಾತಕ್ಕೀಡಾಗಿವೆ. 2019ರಲ್ಲಿ Antonov An-32 ವಿಮಾನವು ಇದೇ ಜೋರ್ಹತ್ ನಿಂದ ಅರುಣಾಚಲ ಪ್ರದೇಶದ ಮೆಚುಕಾಕ್ಕೆ ತೆರಳುವ ವೇಳೆ ನಾಪತ್ತೆಯಾಗಿತ್ತು. ಬಳಿಕ ಅದು ಪರ್ವತ ಪ್ರದೇಶದಲ್ಲಿ ಪತನಗೊಂಡು ವಿಮಾನದಲ್ಲಿದ್ದ ಎಲ್ಲಾ 13 ಮಂದಿ ಮೃತಪಟ್ಟಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




