ಸಂಭಾಲ್ ಅಕ್ರಮ ಮಸೀದಿ ತೆರವು ವೇಳೆ 'I Love Muhammad' ಪೋಸ್ಟರ್, PAK ಧ್ವಜ ಮಾದರಿ ಹಸಿರು ಬಾವುಟ ಪತ್ತೆ: 8 ಮಂದಿ ವಿರುದ್ಧ ಪ್ರಕರಣ
ತೆರವು ಕಾರ್ಯಾಚರಣೆ ವೇಳೆ ಮಸೀದಿಯೊಳಗಿಂದ ‘I Love Muhammad’ ಎಂದು ಬರೆದಿದ್ದ 49 ಪೋಸ್ಟರ್‌ಗಳು ಮತ್ತು ಪಾಕಿಸ್ತಾನದ ಧ್ವಜವನ್ನು ಹೋಲುವ ಹಸಿರು ಬಣ್ಣದ ಧ್ವಜ ಪತ್ತೆಯಾಗಿತ್ತು.

ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾದ ಮಸೀದಿಯೊಂದನ್ನು ತೆರವುಗೊಳಿಸುವ ವೇಳೆ ‘I Love Muhammad’ ಎಂಬ ಬರಹವಿದ್ದ 49 ಪೋಸ್ಟರ್‌ಗಳು ಹಾಗೂ ಪಾಕಿಸ್ತಾನದ ರಾಷ್ಟ್ರೀಯ ಧ್ವಜವನ್ನು ಹೋಲುವ ಹಸಿರು ಧ್ವಜ ಪತ್ತೆಯಾದ ಹಿನ್ನೆಲೆಯಲ್ಲಿ ಎಂಟು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಖಾಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮುಸ್ತಫಾ ಖಾದ್ರಿ ಮಸೀದಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ನೆಲಸಮಗೊಳಿಸಲಾಗಿತ್ತು.
ಈ ಮಸೀದಿ ಸುಮಾರು 1,200 ಚದರ ಮೀಟರ್ ಸ್ಮಶಾನ (ಗೋರಿಸ್ಥಾನ)ದ ಭೂಮಿಯ ಮೇಲೆ ಅಕ್ರಮವಾಗಿ ನಿರ್ಮಾಣಗೊಂಡಿತ್ತು ಎನ್ನಲಾಗಿದೆ.
ತೆರವು ಕಾರ್ಯಾಚರಣೆ ವೇಳೆ ಮಸೀದಿಯೊಳಗಿಂದ ‘I Love Muhammad’ ಎಂದು ಬರೆದಿದ್ದ 49 ಪೋಸ್ಟರ್‌ಗಳು ಮತ್ತು ಪಾಕಿಸ್ತಾನದ ಧ್ವಜವನ್ನು ಹೋಲುವ ಹಸಿರು ಬಣ್ಣದ ಧ್ವಜ ಪತ್ತೆಯಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಸಿಂಗ್ ತಿಳಿಸಿದ್ದಾರೆ.
ಈ ಸಂಬಂಧ ಮಸೀದಿಯ ಮುತವಲ್ಲಿ (ಉಸ್ತುವಾರಿ) ಜಾಕೀರ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದೆಡೆ, ಸಂಭಾಲ್ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ. “'I Love Muhammad' ಪೋಸ್ಟರ್ ಅಥವಾ ಹಸಿರು ಧ್ವಜ ಇಟ್ಟುಕೊಳ್ಳುವುದೇ ಅಪರಾಧವಾಗಿದ್ದರೆ, ನನ್ನ ಮನೆಯಲ್ಲೂ ಇಂತಹ ಪೋಸ್ಟರ್‌ಗಳು ಮತ್ತು ಹಸಿರು ಧ್ವಜಗಳಿವೆ. ಹಾಗಾದರೆ ನನ್ನ ಮೇಲೂ ಯಾವ ಕಾನೂನಿನಡಿ ಪ್ರಕರಣ ದಾಖಲಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಮಸೀದಿ ಸುಮಾರು 150 ವರ್ಷಗಳಷ್ಟು ಹಳೆಯದು ಎಂದು ಹೇಳಿರುವ ಅವರು, 1995ರಿಂದ ಉತ್ತರ ಪ್ರದೇಶ ಗಜೆಟ್‌ನಲ್ಲಿ ವಕ್ಫ್ ಆಸ್ತಿಯಾಗಿ ನೋಂದಣಿಯಾಗಿರುವ ದಾಖಲೆಗಳಿವೆ ಎಂದು ವಾದಿಸಿದ್ದಾರೆ.
ಮಸೀದಿ ತೆರವು ಕ್ರಮ ಕಾನೂನುಬಾಹಿರವಾಗಿದ್ದು, ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅಂಕಿತ್ ಖಂಡೇಲ್ವಾಲ್ ಅವರು ಮಾತನಾಡಿ, ಮಸೀದಿ ಸಮಿತಿಯು ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ನೀಡಿದ್ದ ತೆರವು ಆದೇಶವನ್ನು ಮೇಲ್ಮನವಿ ಹಂತದಲ್ಲೂ ಎತ್ತಿಹಿಡಿಯಲಾಗಿದೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ಬಿಷ್ಣೋಯಿ ಅವರು ಮಾತನಾಡಿ, ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಕಾನೂನುಬದ್ಧವಾಗಿ ಮಸೀದಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಸೀದಿ ತೆರವು, ಪೋಸ್ಟರ್‌ಗಳ ಪತ್ತೆ ಹಾಗೂ ಪ್ರಕರಣ ದಾಖಲಾದ ಬೆಳವಣಿಗೆಗಳು ಸಂಭಾಲ್ ಜಿಲ್ಲೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



