ದೇಶ

'ಭವಿಷ್ಯ ಕಾಣುತ್ತಿಲ್ಲ'; ಬಿಜೆಪಿ ನಾಯಕತ್ವ ಭೇಟಿ ಮಾಡಿದ Annamalai; ಸ್ವತಂತ್ರ ರಾಜಕೀಯ ಪಯಣದ ಸುಳಿವು!

ಸಭೆಯಲ್ಲಿ ಅಣ್ಣಾಮಲೈ ಅವರು ತಾವು ರಾಜಕೀಯವಾಗಿ ಸ್ವತಂತ್ರ ಹಾದಿಯಲ್ಲಿ ಸಾಗಲು ಬಯಸುತ್ತಿರುವುದಾಗಿ ಬಿಜೆಪಿ ನಾಯಕತ್ವಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಭವಿಷ್ಯ ಕಾಣುತ್ತಿಲ್ಲ'; ಬಿಜೆಪಿ ನಾಯಕತ್ವ ಭೇಟಿ ಮಾಡಿದ Annamalai; ಸ್ವತಂತ್ರ ರಾಜಕೀಯ ಪಯಣದ ಸುಳಿವು!
ಕೆ ಅಣ್ಣಾಮಲೈ
Published On :

ನವದೆಹಲಿ: ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ (K. Annamalai) ಅವರು ಮಂಗಳವಾರ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿದ್ದು, ಇದರ ಬೆನ್ನಲ್ಲೇ ರಾಜಕೀಯ ಭವಿಷ್ಯದ ಕುರಿತು ಊಹಾಪೋಹಗಳು ಮತ್ತಷ್ಟು ತೀವ್ರಗೊಂಡಿವೆ.

ಬಿಜೆಪಿ ತೊರೆಯುವ ಸಾಧ್ಯತೆ ಹಾಗೂ ಹೊಸ ರಾಜಕೀಯ ಪಕ್ಷ ಸ್ಥಾಪನೆಯ ಕುರಿತ ಚರ್ಚೆಗಳ ನಡುವೆಯೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಮೂಲಗಳ ಪ್ರಕಾರ, ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ (B. L. Santhosh) ಅವರನ್ನು ಭೇಟಿ ಮಾಡಿ ತಮ್ಮ ಮುಂದಿನ ರಾಜಕೀಯ ಹೆಜ್ಜೆಗಳ ಕುರಿತು ಚರ್ಚೆ ನಡೆಸಿದರು.

ಸ್ವತಂತ್ರ ಹಾದಿ

ಸಭೆಯಲ್ಲಿ ಅಣ್ಣಾಮಲೈ ಅವರು ತಾವು ರಾಜಕೀಯವಾಗಿ ಸ್ವತಂತ್ರ ಹಾದಿಯಲ್ಲಿ ಸಾಗಲು ಬಯಸುತ್ತಿರುವುದಾಗಿ ಬಿಜೆಪಿ ನಾಯಕತ್ವಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಬಿಜೆಪಿಯೊಂದಿಗೆ ಸೌಹಾರ್ದಯುತವಾಗಿ ಬೇರ್ಪಟ್ಟು ತಮ್ಮದೇ ಆದ ರಾಜಕೀಯ ಪಯಣ ಆರಂಭಿಸಲು ಇಚ್ಛಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಹೊಸ ಪಕ್ಷ ಸ್ಥಾಪನೆಗೆ ಸಿದ್ಧತೆ?

ತಮಿಳುನಾಡಿನಲ್ಲಿ ರಾಷ್ಟ್ರೀಯತಾವಾದಿ ಚಿಂತನೆ ಆಧಾರಿತ ಹೊಸ ರಾಜಕೀಯ ಪಕ್ಷವನ್ನು ಅಣ್ಣಾಮಲೈ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿಗಳ ನಡುವೆ ಈ ಸಭೆ ನಡೆದಿರುವುದು ಗಮನಾರ್ಹವಾಗಿದೆ.

ಮೂಲಗಳ ಪ್ರಕಾರ, ಬಿಜೆಪಿ ನಾಯಕತ್ವ ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು, ಅವರಿಗೆ ವಿವಿಧ ಹುದ್ದೆಗಳ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಿದೆ. ಆದರೆ, ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳು ಸೇರಿದಂತೆ ರಾಜ್ಯಸಭಾ ಸದಸ್ಯತ್ವದ ಅವಕಾಶವನ್ನೂ ಅಣ್ಣಾಮಲೈ ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಕಾಣುತ್ತಿಲ್ಲ

ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಬಿಜೆಪಿಯೊಳಗೆ ತಮ್ಮ ರಾಜಕೀಯ ಭವಿಷ್ಯಕ್ಕೆ ಸೂಕ್ತ ಅವಕಾಶ ಕಾಣುತ್ತಿಲ್ಲ ಎಂದು ಅಣ್ಣಾಮಲೈ ನಾಯಕತ್ವಕ್ಕೆ ತಿಳಿಸಿದ್ದಾರೆ.

ಈ ಕಾರಣದಿಂದ ಪಕ್ಷದೊಂದಿಗೆ ಮುಂದುವರಿಯದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ತಮಿಳುನಾಡಿನ ಯಾವುದೇ ಪ್ರಸ್ತುತ ರಾಜಕೀಯ ಪಕ್ಷಕ್ಕೆ ಸೇರುವ ಉದ್ದೇಶವೂ ತಮ್ಮಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ನಟ ವಿಜಯ್ ರ ತಮಿಳಗ ವೇಟ್ರಿ ಕಳಗಂ ಸೇರಿದಂತೆ ಯಾವುದೇ ಪಕ್ಷಕ್ಕೆ ಸೇರುವ ಬದಲು, ಸ್ವತಂತ್ರ ರಾಜಕೀಯ ವೇದಿಕೆಯನ್ನು ನಿರ್ಮಿಸುವತ್ತ ಗಮನ ಹರಿಸಲು ಅಣ್ಣಾಮಲೈ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆಯ ಬಳಿಕ ಬೆಳವಣಿಗೆ

234 ಸದಸ್ಯರ ತಮಿಳುನಾಡು ವಿಧಾನಸಭೆಗೆ ನಡೆದ ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆದ್ದಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆಯುತ್ತಿವೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಸುಮಾರು ಒಂದು ತಿಂಗಳ ನಂತರ ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಕುರಿತು ಚರ್ಚೆಗಳು ತೀವ್ರಗೊಂಡಿದ್ದು, ಅವರು ಹೊಸ ರಾಜಕೀಯ ಪಕ್ಷ ಘೋಷಿಸುವ ಸಾಧ್ಯತೆಗಳ ಬಗ್ಗೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.