ದೇಶ

'ಕ್ಯಾಮೆರಾ ಆ್ಯಂಗಲ್ ಬದಲಿಸಿದರೆ Zen-G ಗಳ ಮನಸ್ಸು ಗೆಲ್ಲೋದಿಕ್ಕೆ ಆಗಲ್ಲ, ನಿಮ್ಮ ಹೃದಯದ ಆ್ಯಂಗಲ್ ಬದಲಿಸಿಕೊಳ್ಳಿ': ಪ್ರಿಯಾಂಕಾ ಗಾಂಧಿ ಟಾಂಗ್; Video

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಮರುದಿನ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿ, ಮೊದಲ ಸಂದೇಶಕ್ಕೆ ಬಂದ ಪ್ರತಿಕ್ರಿಯೆಗಳು ಮತ್ತು ಸಲಹೆಗಳಿಗೆ ಧನ್ಯವಾದ ತಿಳಿಸಿದ್ದರು.

'ಕ್ಯಾಮೆರಾ ಆ್ಯಂಗಲ್ ಬದಲಿಸಿದರೆ Zen-G ಗಳ ಮನಸ್ಸು ಗೆಲ್ಲೋದಿಕ್ಕೆ ಆಗಲ್ಲ, ನಿಮ್ಮ ಹೃದಯದ ಆ್ಯಂಗಲ್ ಬದಲಿಸಿಕೊಳ್ಳಿ': ಪ್ರಿಯಾಂಕಾ ಗಾಂಧಿ ಟಾಂಗ್; Video
ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಯುವಜನತೆಯ ಪ್ರತಿಭಟನೆಗಳ ಮೇಲೆ ಪೊಲೀಸರು ನಡೆಸಿದ ದಮನಕಾರಿ ಕ್ರಮವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ "ಕ್ಯಾಮೆರಾ ಆಂಗಲ್ ಅಲ್ಲ, ಹೃದಯದ ಆಂಗಲ್ (Dil Ka Angle) ಬದಲಿಸಬೇಕು" ಎಂದು ವ್ಯಂಗ್ಯವಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿ ಹಾಗೂ ಯುವಕರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ, ಕಳೆದ ಗುರುವಾರ ಪ್ರಧಾನಿ ಮೋದಿ ರಾತ್ರಿ ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಮರುದಿನ ಮತ್ತೊಂದು ವಿಡಿಯೊ ಬಿಡುಗಡೆ ಮಾಡಿ, ಮೊದಲ ಸಂದೇಶಕ್ಕೆ ಬಂದ ಪ್ರತಿಕ್ರಿಯೆಗಳು ಮತ್ತು ಸಲಹೆಗಳಿಗೆ ಧನ್ಯವಾದ ತಿಳಿಸಿದ್ದರು.

ನಿನ್ನೆ ಲೋಕಸಭೆಯಲ್ಲಿ 2026ರ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ (ತಿದ್ದುಪಡಿ) ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಪ್ರಶ್ನಿಸಿದರು. ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗಕ್ಕೆ ಅನುಮತಿ ನೀಡಿದ್ದು ಯಾರು ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

ಕೇವಲ ಕಾಂಗ್ರೆಸ್ ಮಾತ್ರವಲ್ಲ, ಇಡೀ ದೇಶವೇ ಕೇಳುತ್ತಿದೆ. ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಆಶ್ರುವಾಯು, ಜಲಫಿರಂಗಿ, ಪೆಲೆಟ್ ಗನ್ ಮತ್ತು ಎಕೆ-47 ಬಳಸಲು ಯಾರು ಅನುಮತಿ ನೀಡಿದರು? ಗೃಹ ಸಚಿವರೋ ಅಥವಾ ಪ್ರಧಾನಮಂತ್ರಿಯೋ? ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಭಯೋತ್ಪಾದಕರಾಗಿದ್ದರೇ ಎಂದು ಕೂಡ ಅವರು ಪ್ರಶ್ನಿಸಿದರು.

ಕಳೆದ ಹತ್ತು ವರ್ಷಗಳಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿದ್ದು, ಇದರಿಂದ ಕೋಟ್ಯಂತರ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ಒಬ್ಬ ಅಪರಾಧಿಗೂ ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾದ ಯಾವುದೇ ಸದಸ್ಯನಿಗೂ ಶಿಕ್ಷೆಯಾಗಿಲ್ಲ ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿಗಳ ವಿಶ್ವಾಸವನ್ನು ಮರುಸ್ಥಾಪಿಸಬೇಕಾದರೆ ಸರ್ಕಾರ ತನ್ನ ಧೋರಣೆಯನ್ನು ಬದಲಿಸಿ, ಅಹಂಕಾರವನ್ನು ಬಿಟ್ಟು ನಡೆದುಕೊಳ್ಳಬೇಕು ಎಂದು ವಯನಾಡು ಸಂಸದೆ ಒತ್ತಾಯಿಸಿದರು.

ಇದೇ ವೇಳೆ, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ ಅವರನ್ನು ಸಂಸತ್ತಿನಲ್ಲಿ ಬಿಜೆಪಿ ಸಂಸದರು ಸ್ವಾಗತಿಸಿದ ಕ್ರಮವನ್ನೂ ಅವರು ಟೀಕಿಸಿದರು.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಅತ್ಯಂತ ನಾಚಿಕೆಗೇಡಿನ ರೀತಿಯಲ್ಲಿ ರಾಜೀನಾಮೆ ನೀಡಿದರು. ಆದರೂ ಸಂಸತ್ತಿನ ಮಕರ ದ್ವಾರದಲ್ಲಿ ಅವರನ್ನು ಸೂಪರ್‌ಸ್ಟಾರ್‌ನಂತೆ ಸ್ವಾಗತಿಸಲಾಯಿತು ಎಂದು ಅವರು ಹೇಳಿದರು.

ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರ ಮೇಲೂ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, "ಗರ್ಭಿಣಿ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರ ಬಿಡುಗಡೆಗೆ ಒಪ್ಪಿಗೆ ಸೂಚಿಸಿ, ಸಂತೋಷ ವ್ಯಕ್ತಪಡಿಸಿದ್ದ ವ್ಯಕ್ತಿ ಈಗ ಶಿಕ್ಷಣ ಸಚಿವರಾಗಿದ್ದಾರೆ ಎಂದು ಎಎನ್‌ಐ ವರದಿ ಉಲ್ಲೇಖಿಸಿ ಹೇಳಿದರು.

2022ರಲ್ಲಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನೀಡಿದ್ದ ಅನುಮತಿಯನ್ನು ಪ್ರಲ್ಹಾದ್ ಜೋಶಿ ಸಮರ್ಥಿಸಿಕೊಂಡಿದ್ದ ಹೇಳಿಕೆಯನ್ನು ಉಲ್ಲೇಖಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.