ಕೇರಳದಲ್ಲಿ ರಾಜಕೀಯ ಹೈಡ್ರಾಮಾ: ಅವಿಶ್ವಾಸ ನಿರ್ಣಯ; ಅಧಿಕಾರ ಕಳೆದುಕೊಂಡ ದೇಶದ ಕಿರಿಯ ಪೌರಸಭಾಧ್ಯಕ್ಷೆ!
ದೇಶದ ಅತಿ ಕಿರಿಯ ಪೌರಸಭೆ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿಯಾ ಬಿನು ಪುಳಿಕ್ಕಕಂಡಂ ಅವರಿಗೆ ಭಾರೀ ರಾಜಕೀಯ ಹಿನ್ನಡೆಯಾಗಿದ್ದು, ಕೇರಳದ ಪಾಲಾ ಪೌರಸಭೆಯಲ್ಲಿ ಅವರ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದೆ.

ತಿರುವನಂತಪುರಂ: ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರಿ ಮುಖಭಂಗ ಎದುರಿಸಿದ್ದು, ಅವಿಶ್ವಾಸ ನಿರ್ಣಯದಲ್ಲಿ ದೇಶದ ಕಿರಿಯ ಪೌರಸಭೆ ಅಧ್ಯಕ್ಷೆ ಎಂದು ದಾಖಲೆ ನಿರ್ಮಿಸಿದ್ದ ದಿಯಾ ಬಿನು ಅಧಿಕಾರ ಕಳೆದುಕೊಂಡಿದ್ದಾರೆ.
ಹೌದು.. ದೇಶದ ಅತಿ ಕಿರಿಯ ಪೌರಸಭೆ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿಯಾ ಬಿನು ಪುಳಿಕ್ಕಕಂಡಂ ಅವರಿಗೆ ಭಾರೀ ರಾಜಕೀಯ ಹಿನ್ನಡೆಯಾಗಿದ್ದು, ಕೇರಳದ ಪಾಲಾ ಪೌರಸಭೆಯಲ್ಲಿ ಅವರ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದೆ. ಇದರಿಂದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅಧಿಕಾರ ಕಳೆದುಕೊಂಡಿದೆ.
ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ (LDF) ಬೆಂಬಲಿಸಿದ ಅವಿಶ್ವಾಸ ನಿರ್ಣಯದ ಪರ 17 ಮತಗಳು ಚಲಾಯಿಸಲ್ಪಟ್ಟವು. ಈ ವೇಳೆ ಕಾಂಗ್ರೆಸ್‌ನ ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ನಿರ್ಣಯವನ್ನು ಬೆಂಬಲಿಸಿದರು. ಆಡಳಿತಾರೂಢ ಮೈತ್ರಿಕೂಟದ ಒಟ್ಟು ಐವರು ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದ ಪರಿಣಾಮ UDF ಆಡಳಿತ ಪತನಗೊಂಡಿತು.
'ವಿಪ್ ಬಂದಿರಲಿಲ್ಲ' ಎಂದ ಬಂಡಾಯ ಕಾಂಗ್ರೆಸ್ ಸದಸ್ಯರು
ಬಂಡಾಯ ಎದ್ದ ಕಾಂಗ್ರೆಸ್ ಸದಸ್ಯರು, ಪಕ್ಷದ ವಿಪ್ ತಮ್ಮಗೆ ತಲುಪಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಸಮಿತಿಯ ನಿರ್ಧಾರದಂತೆ ತಾವು ಮತ ಚಲಾಯಿಸಿದ್ದೇವೆ ಎಂದು ಹೇಳಿದ ಅವರು, ಪಾಲಾ ಪೌರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಮುಂದುವರಿಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
'ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಇಲ್ಲ'
ಇನ್ನು ಪದಚ್ಯುತಿಯ ಬಳಿಕ ಪ್ರತಿಕ್ರಿಯಿಸಿದ ದಿಯಾ ಬಿನು, ಪ್ರಜಾಪ್ರಭುತ್ವದ ತೀರ್ಪನ್ನು ಗೌರವದಿಂದ ಸ್ವೀಕರಿಸುವುದಾಗಿ ತಿಳಿಸಿದ್ದಾರೆ. "ನನ್ನ ವಿರುದ್ಧ ಭ್ರಷ್ಟಾಚಾರ, ಸಾರ್ವಜನಿಕ ಹಣದ ದುರುಪಯೋಗ, ಲಂಚ, ಸ್ವಜನಪಕ್ಷಪಾತ, ಸರ್ಕಾರದ ಆದೇಶ ಉಲ್ಲಂಘನೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆ ಕುರಿತಂತೆ ಒಂದೇ ಒಂದು ಆರೋಪವೂ ಸಾಬೀತಾಗಿಲ್ಲ. ನನ್ನ ವಿರುದ್ಧ ಸತ್ಯಾಂಶಾಧಾರಿತ ಆರೋಪವನ್ನೂ ಯಾರೂ ಮಾಡಿಲ್ಲ," ಎಂದು ಅವರು ಹೇಳಿದ್ದಾರೆ.
ಅಲ್ಲದೆ ಪೌರಸಭೆ ಅಧ್ಯಕ್ಷೆಯಾಗಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ಕಾನೂನುಬದ್ಧತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಆಧರಿಸಿತ್ತು ಎಂದು ದಿಯಾ ಬಿನು ಹೇಳಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಪೌರಸಭೆ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರು ಹಾಗೂ ಪಾಲಾ ಜನತೆಗೆ ಅವರು ಕೃತಜ್ಞತೆ ಸಲ್ಲಿಸಿದರು.
'ಅಧಿಕಾರ ತಾತ್ಕಾಲಿಕ, ಮೌಲ್ಯಗಳು ಶಾಶ್ವತ'
"ಸಾರ್ವಜನಿಕ ಹುದ್ದೆ ಎಂದರೆ ಅಧಿಕಾರದ ಸ್ಥಾನವಲ್ಲ, ಜನರು ನೀಡಿರುವ ಜವಾಬ್ದಾರಿ. ಹುದ್ದೆಗಳು ತಾತ್ಕಾಲಿಕ, ಆದರೆ ಮೌಲ್ಯಗಳು ಶಾಶ್ವತ," ಎಂದು ದಿಯಾ ಬಿನು ಹೇಳಿದ್ದಾರೆ. ಮುಂದೆಯೂ ಆಯ್ಕೆಯಾದ ಕೌನ್ಸಿಲರ್ ಆಗಿ ಪಾರದರ್ಶಕತೆ, ಕಾನೂನಿನ ಆಳ್ವಿಕೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ತಮ್ಮ ಸಾರ್ವಜನಿಕ ಜೀವನವನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



