ಜಿಗಣಿ ಕ್ವಾರಿ ದುರಂತ: 2 ದಿನಗಳ ನಿರಂತರ ಶೋಧದ ಬಳಿಕ ಟೆಕ್ಕಿ ಮೃತದೇಹ ಪತ್ತೆ..!
30 ವರ್ಷದ ವಿನಯ್ ಹಲಸೂರು ನಿವಾಸಿಯಾಗಿದ್ದು, ಮೂಲತಃ ಆಂಧ್ರಪ್ರದೇಶದವರು. ಶುಕ್ರವಾರ ಟ್ರೆಕ್ಕಿಂಗ್ ತಂಡದೊಂದಿಗೆ ಜಿಗಣಿ ಬಳಿಯ ಯಲ್ಲಮ್ಮನದೊಡ್ಡಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು.

ಬೆಂಗಳೂರು: ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಮೃತದೇಹ ಕೊನೆಗೂ ಪತ್ತೆಯಾಗಿದೆ.
ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿ ಬಳಿ ಅಕ್ಟೋಬರ್ 2ರಂದು ಈ ದುರಂತ ಸಂಭವಿಸಿತ್ತು, ಸತತ ಎರಡು ದಿನಗಳ ಕಾಲ ನಡೆಸಿದ ತೀವ್ರ ರಕ್ಷಣಾ ಕಾರ್ಯಾಚರಣೆಯ ನಂತರ ಭಾನುವಾರ ಬೆಳಿಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ.
ಭಾನುವಾರ ಬೆಳಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಇತರ ರಕ್ಷಣಾ ತಂಡಗಳು ಮೃತದೇಹವನ್ನು ಪತ್ತೆಹಚ್ಚಿವೆ.
30 ವರ್ಷದ ವಿನಯ್ ಹಲಸೂರು ನಿವಾಸಿಯಾಗಿದ್ದು, ಮೂಲತಃ ಆಂಧ್ರಪ್ರದೇಶದವರು. ಶುಕ್ರವಾರ ಟ್ರೆಕ್ಕಿಂಗ್ ತಂಡದೊಂದಿಗೆ ಜಿಗಣಿ ಬಳಿಯ ಯಲ್ಲಮ್ಮನದೊಡ್ಡಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು.
ಬಳಿಕ ಶುಕ್ರವಾರ ಸಂಜೆ ತಂಡದ ಸುಮಾರು ಐವರು ಸದಸ್ಯರು ನೀರು ತುಂಬಿದ್ದ ಸುಮಾರು 100 ಅಡಿ ಆಳದ ಕ್ವಾರಿಗೆ ಇಳಿದಿದ್ದರು. ಈ ಕ್ವಾರಿಯಲ್ಲಿ ಸುಮಾರು 15 ವರ್ಷಗಳ ಹಿಂದೆ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿತ್ತು.
ವಿನಯ್ ಅವರ ಸ್ನೇಹಿತರ ಪ್ರಕಾರ, ಎಲ್ಲರೂ ಸುಮಾರು ಒಂದು ಗಂಟೆ ಕಾಲ ಕ್ವಾರಿಯಲ್ಲಿ ಈಜುತ್ತಿದ್ದರು. ಕ್ವಾರಿಯ ಮಧ್ಯಭಾಗದಲ್ಲಿದ್ದ ವಿನಯ್ ಏಕಾಏಕಿ ಸಹಾಯಕ್ಕಾಗಿ ಕೂಗಲು ಆರಂಭಿಸಿದರು. ಆದರೆ, ರಕ್ಷಿಸುವ ಮುನ್ನವೇ ಅವರು ನೀರಿನಲ್ಲಿ ಮುಳುಗಿದ್ದರು.
ತಂಡದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹಾಗೂ NDRF ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಈಶ್ವರ್ ಮಲ್ಪೆ ನೇತೃತ್ವದ ಸ್ಕೂಬಾ ಡೈವಿಂಗ್ ತಂಡವೂ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿತು. ಸುದೀರ್ಘ ಶೋಧದ ಬಳಿಕ ಭಾನುವಾರ ಬೆಳಗ್ಗೆ ವಿನಯ್ ಅವರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ವಿನಯ್ ಅವರಿಗೆ ಈಜು ಬರುತ್ತಿತ್ತು, ಆದರೆ, ಅವರು ವೃತ್ತಿಪರ ಈಜುಗಾರರಾಗಿರಲಿಲ್ಲ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.
ಕ್ವಾರಿಯ ಮಧ್ಯಭಾಗದಲ್ಲಿ ಈಜುವಾಗ ಅವರು ಆಯಾಸಗೊಂಡು ನೀರಿನಲ್ಲಿ ಮುಳುಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



