'ನಾನು 56 ವರ್ಷದ ಯುವಕನ ಬಗ್ಗೆ ಮಾತನಾಡುತ್ತಿಲ್ಲ': ಸಂಸತ್ತಿನಲ್ಲಿ ರಾಹುಲ್ ಗಾಂಧಿ ಕಾಲೆಳೆದ ಪ್ರಧಾನಿ ಮೋದಿ
ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ ಸೃಷ್ಟಿಸಿರುವ ಈ ಸ್ಟಾರ್ಟ್ ಅಪ್ ತಂಡದ ಯುವ ವಿಜ್ಞಾನಿಗಳ ಸರಾಸರಿ ವಯಸ್ಸು ಕೇವಲ 28 ವರ್ಷಗಳು ಮಾತ್ರ ಎಂಬುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಸಾಂಪ್ರದಾಯಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ ಇತಿಹಾಸ ಬರೆದಿರುವ 'ಸ್ಕೈರೂಟ್ ಏರೋಸ್ಪೇಸ್' ಬಾಹ್ಯಾಕಾಶ ಸಂಸ್ಥೆಯ ಯುವ ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದರು.
ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲಿ ಕ್ರಾಂತಿ ಸೃಷ್ಟಿಸಿರುವ ಈ ಸ್ಟಾರ್ಟ್ ಅಪ್ ತಂಡದ ಯುವ ವಿಜ್ಞಾನಿಗಳ ಸರಾಸರಿ ವಯಸ್ಸು ಕೇವಲ 28 ವರ್ಷಗಳು ಮಾತ್ರ ಎಂಬುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು, "ನಾನು ಇಲ್ಲಿ ಯಾವುದೇ 56 ವರ್ಷದ 'ಯುವಕನ' ಬಗ್ಗೆ ಮಾತನಾಡುತ್ತಿಲ್ಲ" ಎಂದು ಲೇವಡಿ ಮಾಡಿದರು. ಜೂನ್ ತಿಂಗಳಷ್ಟೇ 56ನೇ ವರ್ಷಕ್ಕೆ ಕಾಲಿಟ್ಟಿರುವ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಸದಾ 'ಯುವ ನಾಯಕ' ಎಂದು ಬಿಂಬಿಸುವುದನ್ನು ಪ್ರಧಾನಿಯವರು ಈ ಮೂಲಕ ಪರೋಕ್ಷವಾಗಿ ಟೀಕಿಸಿದರು.
ದೇಶದ ಯುವ ಇನೋವೇಟರ್‌ಗಳ ಇಂತಹ ಮಹತ್ತರ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಿವೆ ಮತ್ತು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡುತ್ತಿವೆ ಎಂದು ಪ್ರಧಾನಿ ಹೆಮ್ಮೆಯಿಂದ ನುಡಿದರು.
ವಿಕ್ರಮ್-1 ರಾಕೆಟ್ ತನ್ನ ಅಂತಿಮ ದಹನ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಸುಮಾರು 450 ಕಿಮೀ ಎತ್ತರದ ಕಕ್ಷೆಗೆ ಪೇಲೋಡ್‌ಗಳನ್ನು ಸೇರಿಸಿದೆ. ಇದರೊಂದಿಗೆ ಖಾಸಗಿ ಕಕ್ಷಾ ಉಡಾವಣಾ ಸಾಮರ್ಥ್ಯ ಹೊಂದಿರುವ ವಿಶ್ವದ ಮೂರನೇ ದೇಶವಾಗಿ ಭಾರತ ಹೊರಹೊಮ್ಮಿದೆ.
2014ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ವೇಳೆ ನರೇಂದ್ರ ಮೋದಿ ಅವರು "56 ಇಂಚಿನ ಎದೆ" ಎಂಬ ಪದಪ್ರಯೋಗವನ್ನು ಬಳಸಿದ್ದರು. ಧೈರ್ಯ ಮತ್ತು ದೃಢ ನಾಯಕತ್ವದ ಪ್ರತೀಕವಾಗಿ ಬಳಸಿದ್ದ ಈ ಹೇಳಿಕೆಯನ್ನು ಕಾಂಗ್ರೆಸ್ ಹಲವು ಬಾರಿ ಟೀಕೆಗೆ ಬಳಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



