ಗಾಂಧಿ ಜಯಂತಿ: ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ..!
ರಾಜಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಗಾಂಧೀಜಿಯವರ ಸಮಾಧಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು.

ನವದೆಹಲಿ: ಮಹಾತ್ಮ ಗಾಂಧೀಜಿ ಅವರ 157ನೇ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಶುಕ್ರವಾರ ನವದೆಹಲಿಯ ರಾಜಘಾಟ್‌ಗೆ ತೆರಳಿ ಗೌರವ ನಮನ ಸಲ್ಲಿಸಿದರು.
ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಶಾಂತಿ, ಅಹಿಂಸೆ ಹಾಗೂ ಸ್ವಚ್ಛತೆಯ ಕುರಿತಾದ ಗಾಂಧೀಜಿಯವರ ಸಂದೇಶವನ್ನು ಸ್ಮರಿಸಲಾಗುತ್ತಿದೆ.
ರಾಜಘಾಟ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಗಾಂಧೀಜಿಯವರ ಸಮಾಧಿಯಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿ ನಮನ ಸಲ್ಲಿಸಿದರು.
ಇದೇ ವೇಳೆ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ದೆಹಲಿಯ ವಿಜಯ್ ಘಾಟ್‌ಗೆ ತೆರಳಿ ಗೌರವ ಸಲ್ಲಿಸಿದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ರಾಜಘಾಟ್‌ನಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಿದರು. ಬಳಿಕ ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿದರು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಣ್‌ಜಿತ್ ಸಿಂಗ್ ಸಂಧು, ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸೇರಿದಂತೆ ಹಲವು ಗಣ್ಯರು ರಾಜಘಾಟ್‌ನಲ್ಲಿ ಮಹಾತ್ಮ ಗಾಂಧೀಜಿಗೆ ಪುಷ್ಪ ನಮನ ಸಲ್ಲಿಸಿದರು.
ರಾಜಸ್ಥಾನದ ಜೈಪುರದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ರಾಜಸ್ಥಾನ ಸಚಿವಾಲಯದಲ್ಲಿ ಮಹಾತ್ಮ ಗಾಂಧೀಜಿಗೆ ಪುಷ್ಪ ನಮನ ಸಲ್ಲಿಸಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿಯೂ ಅವರು ಗೌರವ ಸಲ್ಲಿಸಿದರು.
ಹರಿಯಾಣದ ಗುರುಗ್ರಾಮದಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು, ನಗರವನ್ನು ಸ್ವಚ್ಛವಾಗಿಡುವಂತೆ ಜನರಿಗೆ ಮನವಿ ಮಾಡಿದರು.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಭಾಗವಾಗಿ ‘ಸ್ವಚ್ಛಾಥಾನ್ 2026’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಾಂಧಿ ಜಯಂತಿಯ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿ, ಜಗತ್ತಿನ ಹಲವು ಭಾಗಗಳಲ್ಲಿ ಸಂಘರ್ಷಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರ ಶಾಂತಿ ಮತ್ತು ಅಹಿಂಸೆಯ ಸಂದೇಶಕ್ಕೆ ಹೆಚ್ಚಿನ ಪ್ರಸ್ತುತತೆ ಇದೆ ಎಂದು ಹೇಳಿದರು.
ಗಾಂಧಿ ಜಯಂತಿಯಾಗಿ ಆಚರಿಸಲಾಗುತ್ತಿರುವ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದಂದು ದೇಶದ ಎಲ್ಲ ನಾಗರಿಕರ ಪರವಾಗಿ ರಾಷ್ಟ್ರಪಿತನಿಗೆ ಗೌರವಪೂರ್ವಕ ನಮನ ಸಲ್ಲಿಸುತ್ತೇನೆ,” ಎಂದು ರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಜಾಗತಿಕ ಸಮುದಾಯದಲ್ಲಿ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳಿಗೆ ವ್ಯಾಪಕ ಗೌರವವಿದೆ. ವಿಶ್ವದ ಹಲವು ಭಾಗಗಳಲ್ಲಿ ಯುದ್ಧ ಮತ್ತು ಸಂಘರ್ಷದ ವಾತಾವರಣವಿದ್ದು, ಇದರಿಂದ ಎಲ್ಲ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶ ಇನ್ನಷ್ಟು ಪ್ರಸ್ತುತವಾಗುತ್ತದೆ ಎಂದು ಹೇಳಿದ್ದಾರೆ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ರಾಷ್ಟ್ರೀಯ ಗುರಿಯತ್ತ ಭಾರತ ಮುನ್ನಡೆಯುತ್ತಿದ್ದು, ಅಭಿವೃದ್ಧಿಯ ಪ್ರಯೋಜನಗಳಿಂದ ಯಾವುದೇ ನಾಗರಿಕರು ವಂಚಿತರಾಗದಂತೆ ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.
ಈ ದೃಷ್ಟಿಕೋನವು ಎಲ್ಲರ ಕಲ್ಯಾಣ ಮತ್ತು ಉನ್ನತಿಯನ್ನು ಆಧರಿಸಿದ ಮಹಾತ್ಮ ಗಾಂಧೀಜಿಯವರ ‘ಸರ್ವೋದಯ’ದ ಆದರ್ಶವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
“ಗಾಂಧಿ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮ ನೈತಿಕ ನಡೆ ಹಾಗೂ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಸಶಕ್ತ, ಅಭಿವೃದ್ಧಿ ಹೊಂದಿದ ಮತ್ತು ಆತ್ಮನಿರ್ಭರ ಭಾರತ ನಿರ್ಮಿಸುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸೋಣ,” ಎಂದು ಕರೆ ನೀಡಿದ್ದಾರೆ.
ಇದೇ ವೇಳೆ, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು ಗಾಂಧಿ ಜಯಂತಿ ಅಕ್ಟೋಬರ್ 2ರಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31ರವರೆಗೆ ದೇಶಾದ್ಯಂತ 30 ದಿನಗಳ ಸ್ವಚ್ಛತಾ ಅಭಿಯಾನ ನಡೆಸುವಂತೆ ಕರೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ನಾಗರಿಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಇತರ ಸಂಘಟನೆಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗಾಂಧಿ ಜಯಂತಿಯಿಂದ ಅಕ್ಟೋಬರ್ 31ರಂದು ನಡೆಯಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದವರೆಗೆ ಸುಮಾರು 30 ದಿನಗಳ ಕಾಲ ದೇಶಾದ್ಯಂತ ಎಲ್ಲರೂ ಸ್ವಚ್ಛ ಭಾರತ ಅಭಿಯಾನವನ್ನು ಕೈಗೊಳ್ಳಬೇಕು. ದೇಶದ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಎಂದೇ ಪ್ರಸಿದ್ಧರಾದ ಮೋಹನದಾಸ್ ಕರಮಚಂದ್ ಗಾಂಧೀಜಿ ಅವರು 1869ರ ಅಕ್ಟೋಬರ್ 2ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದರು. ಅವರ ಜನ್ಮದಿನವನ್ನು ಪ್ರತಿವರ್ಷ ಗಾಂಧಿ ಜಯಂತಿಯಾಗಿ ಆಚರಿಸಲಾಗುತ್ತದೆ.
ಗಾಂಧೀಜಿಯವರ ಅಹಿಂಸೆಯ ತತ್ವ ಮತ್ತು ಸಂದೇಶವನ್ನು ಜಾಗತಿಕವಾಗಿ ಹರಡುವ ಉದ್ದೇಶದಿಂದ ವಿಶ್ವಸಂಸ್ಥೆ ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಘೋಷಿಸಿದೆ.
ಇದೇ ದಿನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜನ್ಮದಿನವನ್ನೂ ದೇಶ ಆಚರಿಸುತ್ತಿದೆ. 1904ರ ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಘಲ್ಸರಾಯ್‌ನಲ್ಲಿ ಜನಿಸಿದ ಶಾಸ್ತ್ರಿ ಅವರು 1964ರಿಂದ 1966ರವರೆಗೆ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು.
“ಜೈ ಜವಾನ್, ಜೈ ಕಿಸಾನ್” ಘೋಷಣೆಯ ಮೂಲಕ ಅವರು ಪ್ರಸಿದ್ಧರಾಗಿದ್ದು, 1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅವರ ಕೊಡುಗೆ ಹಾಗೂ ಆತ್ಮನಿರ್ಭರತೆ ಮತ್ತು ಕೃಷಿ ಕ್ಷೇತ್ರಕ್ಕೆ ನೀಡಿದ ಆದ್ಯತೆಗಾಗಿ ಸ್ಮರಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



