ದೇಶ

Delimitation ಪರಿಷ್ಕೃತ ಮಸೂದೆ ವಿವಾದ: ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ..!

ಡಿಲಿಮಿಟೇಶನ್ ಪ್ರಸ್ತಾವನೆ ಕುರಿತು ಚರ್ಚಿಸಲು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಸರ್ವಪಕ್ಷ ಸಭೆ ನಡೆಸುವಂತೆ ಮನವಿ ಮಾಡಿದ್ದೆ. ಆದರೆ ಆ ಮನವಿಯನ್ನು ಸರ್ಕಾರ ಪರಿಗಣಿಸಲಿಲ್ಲ.

Delimitation ಪರಿಷ್ಕೃತ ಮಸೂದೆ ವಿವಾದ: ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ..!
ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 'ಪರಿಷ್ಕೃತ ಕ್ಷೇತ್ರ ಮರುವಿಂಗಡಣೆ ಮಸೂದೆ'ಯನ್ನು (Revised Delimitation Bill) ಮಂಡಿಸುವ ಮುನ್ನ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ದೇಶದ ಭವಿಷ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಈ ಸೂಕ್ಷ್ಮ ಮಸೂದೆಯನ್ನು ಮಂಡಿಸುವ ಮುನ್ನ, ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ಒಮ್ಮತ ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಡಿಲಿಮಿಟೇಶನ್ ಪ್ರಸ್ತಾವನೆ ಕುರಿತು ಚರ್ಚಿಸಲು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಸರ್ವಪಕ್ಷ ಸಭೆ ನಡೆಸುವಂತೆ ಮನವಿ ಮಾಡಿದ್ದೆ. ಆದರೆ ಆ ಮನವಿಯನ್ನು ಸರ್ಕಾರ ಪರಿಗಣಿಸಲಿಲ್ಲ.

2026ರ ಸಂವಿಧಾನ (131ನೇ ತಿದ್ದುಪಡಿ) ಮಸೂದೆ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಅಗತ್ಯವಿದ್ದ ಮೂರರಲ್ಲಿ ಎರಡು ಭಾಗದ ಬಹುಮತ ಪಡೆಯಲು ವಿಫಲವಾಗಿತ್ತು.

ಮುಂಬರುವ ಸಂಸತ್ತಿನ ಮಳೆಗಾಲ ಅಧಿವೇಶನದಲ್ಲಿ ಪರಿಷ್ಕೃತ 131ನೇ ತಿದ್ದುಪಡಿ ಮಸೂದೆಯನ್ನು ಮರು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿ ವರದಿಗಳನ್ನು ಗಮನಿಸಿದ್ದೇನೆ. ಆದ್ದರಿಂದ, ಪರಿಷ್ಕೃತ ಡಿಲಿಮಿಟೇಶನ್ ಪ್ರಸ್ತಾವನೆ ಕುರಿತು ಸರ್ವಪಕ್ಷ ಸಭೆ ಕರೆದು, ಮಸೂದೆ ಮಂಡನೆಗೂ ಮುನ್ನ ಎಲ್ಲ ಪಕ್ಷಗಳಿಗೆ ಅದರ ಅಧ್ಯಯನಕ್ಕೆ ಸಾಕಷ್ಟು ಸಮಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಪತ್ರದ ನಡುವೆ, ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಅಗತ್ಯವಿರುವ ಎರಡು-ಮೂರರಷ್ಟು ಬಹುಮತವನ್ನು ಲೋಕಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟ ಪಡೆದುಕೊಳ್ಳುವತ್ತ ಸಾಗುತ್ತಿದೆ ಎಂಬ ರಾಜಕೀಯ ಚರ್ಚೆಯೂ ನಡೆಯುತ್ತಿದೆ.

ಇದೇ ವೇಳೆ, ಇಂಡಿಯಾ ಮೈತ್ರಿಕೂಟದ ಅಂಗಪಕ್ಷವಾದ ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಅವರು, ದೇಶದ ಎಲ್ಲ ರಾಜ್ಯಗಳ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಏಕರೀತಿಯಾಗಿ ಶೇ.50ರಷ್ಟು ಹೆಚ್ಚಿಸುವ ಭರವಸೆ ಕೇಂದ್ರ ಸರ್ಕಾರ ನೀಡಿದರೆ, ಡಿಲಿಮಿಟೇಶನ್ ಮಸೂದೆಗೆ ಬೆಂಬಲಿಸುವ ಬಗ್ಗೆ ತಮ್ಮ ಪಕ್ಷ ಚಿಂತನೆ ನಡೆಸಲಿದೆ ಎಂದು ಸೂಚಿಸಿದ್ದಾರೆ.

ಸರ್ಕಾರವು ಏಪ್ರಿಲ್ 17ರಂದು ಮಸೂದೆಗೆ ಅಗತ್ಯ ಬಹುಮತ ಗಳಿಸಲು ವಿಫಲವಾಗಿತ್ತು. ಆದರೆ, ದಕ್ಷಿಣ ರಾಜ್ಯಗಳ ಆತಂಕ ನಿವಾರಿಸಲು ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳ ಲೋಕಸಭೆಯಲ್ಲಿನ ರಾಜಕೀಯ ಪ್ರಾತಿನಿಧ್ಯ ಕುಗ್ಗುವ ಭೀತಿ ವ್ಯಕ್ತವಾಗಿದೆ.

ಲೋಕಸಭಾ ಸ್ಥಾನಗಳ ಸಂಖ್ಯೆ 850ಕ್ಕೆ ಏರಿಕೆ?

ಮಹಿಳಾ ಮೀಸಲಾತಿ ಕಾಯ್ದೆಯನ್ನು 2029ರ ಲೋಕಸಭೆ ಚುನಾವಣೆಗೆ ಮುನ್ನ ಜಾರಿಗೆ ತರುವ ಉದ್ದೇಶದಿಂದ, 2011ರ ಜನಗಣತಿ ಆಧಾರಿತ ಕ್ಷೇತ್ರ ಮರುವಿಂಗಡಣೆ ಬಳಿಕ ಪ್ರಸ್ತುತ 543 ಸ್ಥಾನಗಳಿರುವ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಗರಿಷ್ಠ 850ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.

ಪ್ರಸ್ತುತ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಎನ್‌ಡಿಎಗೆ ಲೋಕಸಭೆಯಲ್ಲಿ 360 ಮತಗಳ ಬೆಂಬಲ ಅಗತ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.