ರಾಜ್ಯದಲ್ಲಿ SIR ತಾತ್ಕಾಲಿಕ ತಡೆಗೆ ಎನ್‌ಡಿಎ ಪಟ್ಟು; ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು!
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎನ್‌ಡಿಎ ನಿಯೋಗ ದೆಹಲಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಭೇಟಿ ಮಾಡಿತು.

ನವದೆಹಲಿ: ಕರ್ನಾಟಕದಲ್ಲಿ ಅಕ್ರಮ SIR ಪ್ರಕ್ರಿಯೆ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದ ಎನ್‌ಡಿಎ, ಮಂಗಳವಾರ ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಿಗೂ ದೂರು ನೀಡಿ ಗಮನ ಸೆಳೆದಿದೆ. ತಕ್ಷಣವೇ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ SIRಗೆ ತಾತ್ಕಾಲಿಕ ತಡೆ ನೀಡುವಂತೆಯೂ ಒತ್ತಾಯಿಸಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎನ್‌ಡಿಎ ನಿಯೋಗ ದೆಹಲಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ನಡೆಯುತ್ತಿರುವ ಅಕ್ರಮ SIR ಬಗ್ಗೆ ದಾಖಲೆಗಳ ಸಮೇತ ದೂರು ಸಲ್ಲಿಸಿತು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕ್‌ಗಾಗಿ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಎನ್‌ಡಿಎ ನಾಯಕರು ಗಂಭೀರ ಆರೋಪ ಮಾಡಿದರು.
ಕೇಂದ್ರದ ಯಾವುದೇ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿಲ್ಲ. ಸಮುದಾಯ ಭವನ, ಮಸೀದಿ ಮತ್ತು BLOಗಳ ನಿವಾಸಗಳಲ್ಲೇ ಕುಳಿತು ಪರಿಷ್ಕರಣೆ ಅರ್ಜಿ ಭರ್ತಿ ಮಾಡಲಾಗುತ್ತಿದೆ. ಅಲ್ಲದೇ, ಇದೇ ಉದ್ದೇಶಕ್ಕೆ ವಾಟ್ಸಾಪ್ ಗುಂಪುಗಳನ್ನೂ ರಚಿಸಿಕೊಂಡು ಪ್ರಚಾರಪಡಿಸುತ್ತಿದ್ದಾರೆ. ಇದು SIR ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆಯಾಗಿದೆ ಮತ್ತು ಚುನಾವಣಾ ವ್ಯವಸ್ಥೆಗೆ ಧಕ್ಕೆ ತರಲಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಧಾರ್ಮಿಕ ಅನುಸಾರ ಬಿಎಲ್‌ಒ ನಿಯೋಜನೆ: SIR ನಡೆಸುವಾಗ BLOಗಳ ಧರ್ಮ ಅಪ್ರಸ್ತುತ. ಆದರೆ, ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ನಿರ್ದಿಷ್ಟ ಧರ್ಮಕ್ಕೆ ಸೇರಿದ BLOಗಳನ್ನೇ ನಿಯೋಜಿಸುತ್ತಿರುವುದು ಕಂಡುಬಂದಿದೆ. ಇಂತಹ ನಿಯೋಜನೆಯನ್ನು ಕೇಂದ್ರ ಚುನಾವಣಾ ಆಯೋಗದಿಂದ ತಕ್ಷಣ ಪರಿಶೀಲನೆ ನಡೆಸಬೇಕು. ಅನಧಿಕೃತ ಧಾರ್ಮಿಕ ಸ್ಥಳಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಹಭಾಗಿ ಬಿಎಲ್‌ಒಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಜ್ಞಾನೇಶಕುಮಾರ್ ಅವರನ್ನು ನಿಯೋಗ ಒತ್ತಾಯಿಸಿದೆ.
ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ. ಈಗಾಗಲೇ ಸಂಗ್ರಹಿಸಿದ ಎಲ್ಲಾ ಅರ್ಜಿಗಳ ಮರು ಪರಿಶೀಲನೆಗೆ ನಿರ್ದೇಶಿಸಬೇಕು ಮತ್ತು ರಾಜ್ಯದ ಪ್ರತಿ ಜಿಲ್ಲೆಗೂ ಮೇಲ್ವಿಚಾರಣೆಗೆ ಇತರೆ ರಾಜ್ಯಗಳ ಕೇಂದ್ರ ವೀಕ್ಷಕರನ್ನು ನೇಮಿಸಬೇಕು. ಈಗಾಗಲೇ SIR ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಕಾರ್ಯವಿಧಾನ, ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಮತ್ತು ಅಕ್ರಮದಲ್ಲಿ ತೊಡಗಿದ ಎಲ್ಲಾ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷದ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಹೊಸದಾಗಿ SIR ಪ್ರಕ್ರಿಯೆಗೆ ಆದೇಶಿಸಿ: ರಾಜ್ಯದಲ್ಲಿ ಪ್ರಸ್ತುತ ಅಕ್ರಮವಾಗಿ ನಡೆಯುತ್ತಿರುವ SIR ಪ್ರಕ್ರಿಯೆಗೆ ತಡೆ ನೀಡಿ ಮತ್ತೆ ಹೊಸದಾಗಿ ಆರಂಭಿಸಲು ಆದೇಶಿಸಿ ಹಾಗೂ SIR ಪ್ರಕ್ರಿಯೆ ನ್ಯಾಯಯುತ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ನಡೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
2028ಕ್ಕೆ ಮತಬ್ಯಾಂಕ್ ಅಣಿ ಮಾಡಿಕೊಳ್ತಿದೆ ಕಾಂಗ್ರೆಸ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಅಧಿಕಾರಿಗಳನ್ನು, ಬಿಎಲ್‌ಒ, ಬಿಎಲ್‌ಎಗಳನ್ನು ಹೆದರಿಸಿ ಬೆದರಿಸಿ SIR ಅಕ್ರಮದ ಮೂಲಕ 2028ರ ವಿಧಾನಸಭೆ ಚುನಾವಣೆಗೆ ತನ್ನ ಮತಬ್ಯಾಂಕ್ ಅನ್ನು ಈಗಲೇ ಅಣಿ ಮಾಡಿಕೊಳ್ಳುತ್ತಿದೆ. SIR ಮಾರ್ಗಸೂಚಿ ಪ್ರಕಾರ ಅರ್ಹತಾ ಮಾನದಂಡಗಳನ್ನು ಅನುಸರಿಸದೆ ಸಂಬಂಧಿಕರ ಹೆಸರುಗಳನ್ನು ಪರಿಶೀಲನೆಗಾಗಿ ಸ್ವೀಕರಿಸುತ್ತಿರುವುದು ಕಂಡುಬಂದಿದೆ. BLOಗಳು ಪರಿಶೀಲನಾ ಪ್ರಕ್ರಿಯೆ ಮತ್ತು ಸಂಬಂಧಿತ ಚಟುವಟಿಕೆಗಳ ಬಗ್ಗೆ BLAಗಳಿಗೆ ತಿಳಿಸುತ್ತಿಲ್ಲ. ಪರಿಣಾಮ ಪಾರದರ್ಶಕತೆಗೆ ಧಕ್ಕೆ ಬರುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಿದಂತಾಗುತ್ತಿದೆ ಎಂದು ನಿಯೋಗದ ನಾಯಕರು ಆರೋಪಿಸಿದರು.
ಈ ಪರಿಷ್ಕರಣೆ ಪಟ್ಟಿ ಅನುಮತಿಸಬೇಡಿ: ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮೂಲಕ ಚುನಾವಣಾ ವ್ಯವಸ್ಥೆಯನ್ನು ಸಮಗ್ರ ರೀತಿಯಲ್ಲಿ ಬಲಪಡಿಸುವ ಕಾರ್ಯಕ್ಕಿಳಿದಿದೆ. ಆದರೆ, ಕರ್ನಾಟಕದಲ್ಲಿ BLOಗಳು ಅಕ್ರಮದ ಮೂಲಕ ಈ ಉದ್ದೇಶವನ್ನೇ ಸೋಲಿಸುತ್ತಿದ್ದಾರೆ. ಹಾಗಾಗಿ ಚುನಾವಣಾ ಆಯೋಗ ಈ ವಿಧಾನದ ಮತಪಟ್ಟಿಯನ್ನು ಅನುಮತಿಸಬಾರದು ಎಂದು ಮನವಿ ಮಾಡಿದರು.
SIR ಪ್ರಕ್ರಿಯೆ ನಡೆದ ದಾಖಲೆಗಳುಳ್ಳ ಪೆನ್‌ಡ್ರೈವ್ ಸಲ್ಲಿಕೆ: ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕರ್ನಾಟಕದಲ್ಲಿ ಅಕ್ರಮ SIR ಪ್ರಕ್ರಿಯೆ ನಡೆದ ದಾಖಲೆಗಳುಳ್ಳ ಪೆನ್‌ಡ್ರೈವ್ ಅನ್ನು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರಿಗೆ ಸಲ್ಲಿಸಿದರು.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಮತ್ತಿತರ ಪ್ರಮುಖ ನಾಯಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



