SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL
ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಅರ್ಜಿಯಲ್ಲಿ, ಚುನಾವಣಾ ಆಯುಕ್ತರ ಬಹುಮತದ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗ ಕೈಗೊಂಡಿರುವ ಎಲ್ಲ ನಿರ್ಧಾರಗಳನ್ನು ಕಾನೂನುಬಾಹಿರ ಮತ್ತು ಅಮಾನ್ಯವೆಂದು ಘೋಷಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (PIL), ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಗಳ ನಡುವೆಯೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಭಾರತೀಯ ಚುನಾವಣಾ ಆಯೋಗ (ECI) ಕೈಗೊಂಡಿದೆ ಎನ್ನಲಾದ ನಿರ್ಧಾರಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು SIRಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪ ದಾಖಲಿಸಿದ್ದರು ಎಂದು ವರದಿ ಮಾಡಿದ ಕೆಲ ದಿನಗಳ ಬಳಿಕ ಈ ಅರ್ಜಿ ಸಲ್ಲಿಸಲಾಗಿದೆ. ಈ ವರದಿಯಲ್ಲಿನ 14 ಆಕ್ಷೇಪಗಳ ವಿಚಾರವನ್ನು ಇತರ ವರದಿಗಳೂ ಉಲ್ಲೇಖಿಸಿವೆ.
ಬಾರ್ ಆ್ಯಂಡ್ ಬೆಂಚ್ ವರದಿ ಪ್ರಕಾರ, ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಅರ್ಜಿಯಲ್ಲಿ, ಚುನಾವಣಾ ಆಯುಕ್ತರ ಬಹುಮತದ ಒಪ್ಪಿಗೆಯಿಲ್ಲದೆ ಚುನಾವಣಾ ಆಯೋಗ ಕೈಗೊಂಡಿರುವ ಎಲ್ಲ ನಿರ್ಧಾರಗಳನ್ನು ಕಾನೂನುಬಾಹಿರ ಮತ್ತು ಅಮಾನ್ಯವೆಂದು ಘೋಷಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಡಿಯಲ್ಲಿ, ಸಂಪೂರ್ಣ ಆಯೋಗದ ಒಪ್ಪಿಗೆಯಿಲ್ಲದೆ ಅಥವಾ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023ರ ಸೆಕ್ಷನ್ 18ರ ಅಡಿಯಲ್ಲಿ ಚುನಾವಣಾ ಆಯುಕ್ತರ ಬಹುಮತದ ಅಭಿಪ್ರಾಯಕ್ಕೆ ವಿರುದ್ಧವಾಗಿ ಆರಂಭಿಸಿದ, ಅನುಮೋದಿಸಿದ ಅಥವಾ ಜಾರಿಗೊಳಿಸಿದ ಎಲ್ಲ ನಿರ್ಧಾರಗಳು, ಮಾರ್ಗಸೂಚಿಗಳು, ನಿರ್ದೇಶನಗಳು ಮತ್ತು ಸಾಫ್ಟ್‌ವೇರ್ ಬದಲಾವಣೆಗಳನ್ನು ಅಸಂವಿಧಾನಿಕ, ಅಧಿಕಾರ ವ್ಯಾಪ್ತಿಗೆ ಮೀರಿದ ಹಾಗೂ ಆರಂಭದಿಂದಲೇ ಅಮಾನ್ಯವೆಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗರ್ಗ್ ಹಾಗೂ ಭಾರತೀಯ ಚುನಾವಣಾ ಆಯೋಗದ ಮಹಾನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಸೀಮಾ ಖನ್ನಾ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಅಧಿಕೃತ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಜನಪ್ರತಿನಿಧಿತ್ವ ಕಾಯ್ದೆ, 1950ರ ಸೆಕ್ಷನ್ 32ರ ಅಡಿಯಲ್ಲಿ ದೂರು ದಾಖಲಿಸಿ, ವಿಚಾರಣೆ/ಪ್ರಾಸಿಕ್ಯೂಷನ್ ಆರಂಭಿಸುವಂತೆ ಸಂಬಂಧಪಟ್ಟ ಶಾಸನಬದ್ಧ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯ ಪ್ರಕಾರ, ಕಳೆದ ವರ್ಷ ನವೆಂಬರ್‌ನಿಂದ ಈ ವರ್ಷ ಆಗಸ್ಟ್‌ವರೆಗಿನ 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯುಕ್ತರಾದ ಡಾ. ಸುಖ್ಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ, ಆಯೋಗದ ಅನುಮೋದನೆಯಿಲ್ಲದೆ ಅದರ ಹೆಸರಿನಲ್ಲಿ ಕೈಗೊಳ್ಳಲಾಗಿದೆ ಎನ್ನಲಾದ ನಿರ್ಧಾರಗಳ ವಿರುದ್ಧ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಗಳನ್ನು ದಾಖಲಿಸಿದ್ದರು. ಒಂದೇ ದಿನದಲ್ಲಿ ನಾಲ್ಕು ಆಕ್ಷೇಪಗಳನ್ನು ದಾಖಲಿಸಲಾಗಿತ್ತು ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎನ್ನಲಾದ ಆರೋಪದ ಕುರಿತು ನ್ಯಾಯಾಂಗ ತನಿಖಾ ಆಯೋಗ ಅಥವಾ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ನಿಗದಿಪಡಿಸಲಾಗಿರುವ ಶಾಸನಬದ್ಧ ಫಾರಂ-6 ಅನ್ನು ಮರುಸ್ಥಾಪಿಸಿ, ಮೂಲ ಶಾಸನಬದ್ಧ ಅವಶ್ಯಕತೆಗಳ ಆಧಾರದ ಮೇಲೆ ಅರ್ಹರಾದ ಎಲ್ಲ ವಯಸ್ಕರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಬಾರ್ ಆ್ಯಂಡ್ ಬೆಂಚ್ ವರದಿ ಪ್ರಕಾರ, ಈ ಅರ್ಜಿಯನ್ನು ವಕೀಲ ಚಾಂದ್ ಖುರೇಷಿ ಅವರ ಮೂಲಕ ಸಲ್ಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




