ರಾಮ ಮಂದಿರ ಲೂಟಿ ದುರದೃಷ್ಟಕರ; ಇದನ್ನು ಬಳಸಿಕೊಂಡು ಹಿಂದೂ ಧರ್ಮವನ್ನು ಕೆಣಕಲು ಯತ್ನ: ಕೊನೆಗೂ ಮೌನ ಮುರಿದ RSS
ಇದೇ ಮೊದಲ ಬಾರಿ ಪ್ರಕರಣದ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ತನಿಖೆಯ ನಂತರ ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್), ಘಟನೆ "ಅತ್ಯಂತ ದುರದೃಷ್ಟಕರ", ರಾಮ ಭಕ್ತರಿಗೆ, ಇಡೀ ಸಮಾಜದ ಭಾವನೆಗಳು ಮತ್ತು ನಂಬಿಕೆಗೆ "ತೀವ್ರ ನೋವುಂಟು ಮಾಡಿದೆ" ಎಂದು ಹೇಳಿದೆ.
ಇದೇ ಮೊದಲ ಬಾರಿ ಪ್ರಕರಣದ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ತನಿಖೆಯ ನಂತರ ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
"ಈ ದುರದೃಷ್ಟಕರ ಘಟನೆಯನ್ನು ಬಳಸಿಕೊಳ್ಳುವ ಮೂಲಕ "ಹಿಂದೂ ವಿರೋಧಿಗಳು ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳು" ಹಿಂದೂ ಧರ್ಮವನ್ನು ಕೆಣಕಲು ಪ್ರಯತ್ನಿಸುತ್ತಿವೆ ಎಂದು ಪ್ರತಿಪಾದಿಸಿದ ಹೊಸಬಾಳೆ, ಅಂತಹ "ಪಿತೂರಿಗಳನ್ನು" ತಡೆಯಲು "ಈ ಕಠಿಣ ಪರಿಸ್ಥಿಯಲ್ಲಿ" ಅಗತ್ಯವಾದ ತಾಳ್ಮೆ ಮತ್ತು ಸಂಯಮವನ್ನು ಪ್ರದರ್ಶಿಸಬೇಕೆಂದು ಇಡೀ ಹಿಂದೂ ಸಮಾಜಕ್ಕೆ ಕರೆ ನೀಡಿದ್ದಾರೆ.
"ಅಯೋಧ್ಯೆಯ ರಾಮ ಲಲ್ಲಾ ದೇವಸ್ಥಾನದಲ್ಲಿ ಇರಿಸಲಾಗಿರುವ ದೇಣಿಗೆ ಪೆಟ್ಟಿಗೆ ಕಳ್ಳತನ ದುರದೃಷ್ಟಕರ ಘಟನೆಯು ಇಡೀ ಸಮಾಜ ಮತ್ತು ರಾಮ ಭಕ್ತರ ಭಾವನೆಗಳಿಗೆ ಹಾಗೂ ನಂಬಿಕೆಗೆ ತೀವ್ರ ನೋವುಂಟು ಮಾಡಿದೆ" ಎಂದು ಆರ್‌ಎಸ್‌ಎಸ್ ನಾಯಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಈ ಘಟನೆಯಿಂದ ನಾವೆಲ್ಲರೂ ತುಂಬಾ ನೋವನ್ನು ಅನುಭವಿಸಿದ್ದೇವೆ ಮತ್ತು ಆಕ್ರೋಶಗೊಂಡಿದ್ದೇವೆ" ಎಂದು ಅವರು ಹೇಳಿದ್ದಾರೆ.
"ತಲೆಮಾರುಗಳ ಹೋರಾಟ ಹಾಗೂ ಕೋಟ್ಯಂತರ ರಾಮ ಭಕ್ತರ ಸಮರ್ಪಣಾ ಭಾವ, ತ್ಯಾಗ ಮತ್ತು ಬಲಿದಾನದ ಫಲವಾಗಿ, ಶ್ರೀ ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾದ ಭವ್ಯ ದೇವಾಲಯವು, ಸಮಸ್ತ ಹಿಂದೂ ಸಮಾಜಕ್ಕೆ ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯ ಕೇಂದ್ರಬಿಂದುವಾಗಿದೆ. ಇಂತಹ ಪವಿತ್ರ ಸ್ಥಳದಿಂದ ಭಕ್ತರ ದೇಣಿಗೆ ಲೂಟಿ ಹೊಡೆದಿರುವುದು ನಿಜಕ್ಕೂ ದುರದೃಷ್ಟಕರ" ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
"ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶೇಷ ಮನವಿಯ ಮೇರೆಗೆ, ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಅದರ ಶಿಫಾರಸುಗಳ ಆಧಾರದ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿದೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗುವವರಿಗೆ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ" ಎಂದು ಸಂಘದ ಸರಕಾರ್ಯವಾಹ ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ನೈತಿಕ ಹೊಣೆಹೊತ್ತು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




