ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, UGC-NET ವಿವಾದ ಮಧ್ಯೆ NTAಗೆ ಐವರು ಹಿರಿಯ ಅಧಿಕಾರಿಗಳ ನೇಮಕ
ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಒಬ್ಬ ಜಂಟಿ ನಿರ್ದೇಶಕ, ಒಬ್ಬ ಜಂಟಿ ಕಾರ್ಯದರ್ಶಿ ಹಾಗೂ ಮೂವರು ನಿರ್ದೇಶಕರ ನೇಮಕವನ್ನು ಪ್ರಕಟಿಸಿದೆ.

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿವಾದಗಳಿಗೆ ಗುರಿಯಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಪ್ರಮುಖ ಹುದ್ದೆಗಳಿಗೆ ಕೇಂದ್ರ ಸರ್ಕಾರ ಐವರು ಅಧಿಕಾರಿಗಳನ್ನು ನೇಮಕ ಮಾಡಿದೆ.
ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಒಬ್ಬ ಜಂಟಿ ನಿರ್ದೇಶಕ, ಒಬ್ಬ ಜಂಟಿ ಕಾರ್ಯದರ್ಶಿ ಹಾಗೂ ಮೂವರು ನಿರ್ದೇಶಕರ ನೇಮಕವನ್ನು ಪ್ರಕಟಿಸಿದೆ.
NTA ಸಂಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ನಡೆಯುತ್ತಿರುವ ಪುನಾರಚನೆ ಪ್ರಕ್ರಿಯೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಈ ಮೂಲಕ ಗುತ್ತಿಗೆ ಆಧಾರದ ಸಿಬ್ಬಂದಿಯ ಬದಲಿಗೆ ಕಾಯಂ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ.
ಕ್ಯಾಬಿನೆಟ್ ಸಮಿತಿ ಹೊರಡಿಸಿರುವ ಆದೇಶದ ಪ್ರಕಾರ, 2005ನೇ ಬ್ಯಾಚ್‌ನ IRS ಅಧಿಕಾರಿ ಅಂಶುಮಾನ್ ಶರ್ಮಾ ಅವರನ್ನು ಐದು ವರ್ಷಗಳ ಅವಧಿಗೆ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಎನ್ ಟಿಎಯಲ್ಲಿ ಖಾಲಿ ಇದ್ದ ನಿರ್ದೇಶಕರ ಹುದ್ದೆಯನ್ನು ಜಂಟಿ ಕಾರ್ಯದರ್ಶಿ ಹುದ್ದೆಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗಿದೆ.
2016ನೇ ಬ್ಯಾಚ್‌ನ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ ಅಧಿಕಾರಿ ಅಮಿತ್ ಸಾಂದಾರಿಯಾ ಅವರನ್ನು ಐದು ವರ್ಷಗಳ ಅವಧಿಗೆ ಜಂಟಿ ನಿರ್ದೇಶಕರಾಗಿ (ಉಪ ಕಾರ್ಯದರ್ಶಿ ದರ್ಜೆ) ನೇಮಿಸಲಾಗಿದೆ. ಕೇಂದ್ರ ನಿಯೋಜನೆಗೆ ಕಂದಾಯ ಇಲಾಖೆ ಅವರ ಹೆಸರನ್ನು ಶಿಫಾರಸು ಮಾಡಿತ್ತು.
2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ರವಿ ಕುಮಾರ್ ಸಿಂಗ್ ಅವರನ್ನು ಐದು ವರ್ಷಗಳ ಅವಧಿಗೆ ನಿರ್ದೇಶಕರಾಗಿ ನೇಮಿಸಲಾಗಿದೆ. ಕೇಂದ್ರ ನಿಯೋಜನೆಗೆ ಗೃಹ ಸಚಿವಾಲಯ ಅವರ ಹೆಸರನ್ನು ಶಿಫಾರಸು ಮಾಡಿತ್ತು.
2011ನೇ ಬ್ಯಾಚ್‌ನ ಆದಾಯ ತೆರಿಗೆ ಅಧಿಕಾರಿ ಸತ್ಯ ಎಸ್., ಪ್ರಸ್ತುತ ಸಹಕಾರ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು NTAಯ ನಿರ್ದೇಶಕರಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ‘ಲ್ಯಾಟರಲ್ ಶಿಫ್ಟ್’ ಆಧಾರದ ಮೇಲೆ 2030ರ ಆಗಸ್ಟ್ 24ರವರೆಗೆ ಅವರನ್ನು ನೇಮಿಸಲಾಗಿದೆ. ವಿ. ವೆಂಕಟೇಶ್ ಪ್ರಸನ್ನ ಅವರನ್ನು ಐದು ವರ್ಷಗಳ ಅವಧಿಗೆ NTAಯ ನಿರ್ದೇಶಕರಾಗಿ ನೇಮಿಸಲಾಗಿದೆ.
ಇದಕ್ಕೂ ಮುನ್ನ ಮೇ 16ರಂದು ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ತಕ್ಷಣದ ಆಧಾರದ ಮೇಲೆ ಇಬ್ಬರು ಜಂಟಿ ನಿರ್ದೇಶಕರು ಹಾಗೂ ಇಬ್ಬರು ಜಂಟಿ ಕಾರ್ಯದರ್ಶಿಗಳನ್ನು ನೇಮಿಸಿತ್ತು.
NEET-UG 2024 ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣಗಳನ್ನು ಪರಿಶೀಲಿಸಿದ್ದ ಕೆ. ರಾಧಾಕೃಷ್ಣನ್ ನೇತೃತ್ವದ ಏಳು ಸದಸ್ಯರ ಸಮಿತಿಯು ಎನ್ ಟಿಎಯಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸಲು ಖಾಯಂ ಸಿಬ್ಬಂದಿಯನ್ನು ನೇಮಿಸುವಂತೆ ಶಿಫಾರಸು ಮಾಡಿತ್ತು.
2025ರ ಡಿಸೆಂಬರ್‌ನಲ್ಲಿ ಸಂಸದೀಯ ಸಮಿತಿಯೂ ಸಂಸ್ಥೆಯ ಆಂತರಿಕ ವ್ಯವಸ್ಥೆಯನ್ನು ಬಲಪಡಿಸುವಂತೆ ಶಿಫಾರಸು ಮಾಡಿತ್ತು. NTA ಕೇವಲ 30ರಿಂದ 40 ಅಧಿಕಾರಿಗಳ ಸಣ್ಣ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿರುವುದೇಕೆ ಎಂದು ಸುಪ್ರೀಂ ಕೋರ್ಟ್ ಕೂಡ ಇತ್ತೀಚೆಗೆ ಪ್ರಶ್ನಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



