ದೇಶ

Operation Sindoor: Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ಕಿರಾನಾ ಹಿಲ್ಸ್‌ ಅನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ದಾಳಿ ನಡೆಸಿರಲಿಲ್ಲ ಎಂದು ಭಾರತದ ಮಾಜಿ ಮುಖ್ಯ ರಕ್ಷಣಾ ಸಿಬ್ಬಂದಿ (CDS) ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

Operation Sindoor: Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?
ಪಾಕಿಸ್ತಾನದ ಕಿರಾನಾ ಹಿಲ್ಸ್ ಗೆ ಅಪ್ಪಳಿಸಿದ ಭಾರತದ ಡ್ರೋನ್ (ಸಂಗ್ರಹ ಚಿತ್ರ)
Published On :

ಲಾಹೋರ್: ಭಾರತ-ಪಾಕಿಸ್ತಾನ ನಡುವೆ ಆಪರೇಷನ್ ಸಿಂಧೂರ್ ಕುರಿತ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಭಾರತದ ಡ್ರೋನ್ ವೊಂದು ಪಾಕಿಸ್ತಾನದ ಪರಮಾಣು ನೆಲೆ ಮೇಲೆ ಆಪ್ಪಳಿಸಿತ್ತು ಎಂಬ ವಿಚಾರ ಇದೀಗ ಬಯಲಾಗಿದೆ.

ಹೌದು.. ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಸರ್ಗೋಧಾ ಸಮೀಪದ ಕಿರಾನಾ ಹಿಲ್ಸ್‌ಗೆ ಭಾರತೀಯ ‘ಲಾಯಿಟರಿಂಗ್ ಮ್ಯುನಿಷನ್’ (ಸ್ಫೋಟಕ ಹೊತ್ತ ಡ್ರೋನ್) ಅಪ್ಪಳಿಸಿತ್ತು. ಆದರೆ ಕಿರಾನಾ ಹಿಲ್ಸ್‌ ಅನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ದಾಳಿ ನಡೆಸಿರಲಿಲ್ಲ ಎಂದು ಭಾರತದ ಮಾಜಿ ಮುಖ್ಯ ರಕ್ಷಣಾ ಸಿಬ್ಬಂದಿ (CDS) ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ವಿವೇಕಾನಂದ ಕೇಂದ್ರದಲ್ಲಿ ಮಾತನಾಡಿದ ಜನರಲ್ ಚೌಹಾಣ್, ಭಾರತೀಯ ಡ್ರೋನ್‌ಗಳು ಸರ್ಗೋಧಾ ಮತ್ತು ಕಿರಾನಾ ಹಿಲ್ಸ್ ಸುತ್ತಮುತ್ತಲಿನ ರಾಡಾರ್‌ಗಳನ್ನು ಪತ್ತೆಹಚ್ಚಿ ದಾಳಿ ಮಾಡಲು ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ.

ಇಸ್ರೇಲ್ ವಿನ್ಯಾಸದ ಹರೋಪ್ ಡ್ರೋನ್ ಆಗಿರುವ ಸಾಧ್ಯತೆಯಿರುವ ಈ ಲಾಯಿಟರಿಂಗ್ ಮ್ಯುನಿಷನ್‌ಗೆ ನಿರ್ದಿಷ್ಟ ಕಾರ್ಯಾಚರಣಾ ಅವಧಿ ಇರುತ್ತದೆ. ಸುಮಾರು ಎರಡು ಗಂಟೆಗಳ ಕಾಲ ಗುರಿಯನ್ನು ಹುಡುಕಿದರೂ ಗುರಿ ಸಿಗದಿದ್ದರೆ ಅದು ತನ್ನ ಕಾರ್ಯಾಚರಣೆಯ ಅಂತ್ಯದಲ್ಲಿ ಎಲ್ಲೋ ಅಪ್ಪಳಿಸಬಹುದು ಎಂದು ಚೌಹಾಣ್ ವಿವರಿಸಿದ್ದಾರೆ.

ಕಿರಾನಾ ಹಿಲ್ಸ್ ಗುರಿಯಾಗಿತ್ತೇ?

ಇನ್ನು ಭಾರತೀಯ ಡ್ರೋನ್ ಕಿರಾನಾ ಹಿಲ್ಸ್ ಅನ್ನೇ ಗುರಿಯಾಗಿಸಿಕೊಂಡಿತ್ತೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು, 'ನಾವು ಕಿರಾನಾ ಹಿಲ್ಸ್‌ ಅನ್ನು ಗುರಿಯಾಗಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

'ಸರ್ಗೋಧಾ ಮತ್ತು ಕಿರಾನಾ ಹಿಲ್ಸ್ ಸುತ್ತಮುತ್ತ ರಾಡಾರ್‌ಗಳನ್ನು ಹುಡುಕಲು ನಾವು ಹಲವು ಲಾಯಿಟರಿಂಗ್ ಮ್ಯುನಿಷನ್‌ಗಳನ್ನು ಕಳುಹಿಸಿದ್ದೆವು. ಅವುಗಳ ಕಾರ್ಯಾಚರಣಾ ಅವಧಿ ಸುಮಾರು ಎರಡು ಗಂಟೆಗಳು. ಗುರಿ ಸಿಗದಿದ್ದರೆ ಅದು ಎಲ್ಲೋ ಅಪ್ಪಳಿಸುತ್ತದೆ. ಬಹುಶಃ ಅವುಗಳಲ್ಲಿ ಒಂದು ಕಿರಾನಾ ಹಿಲ್ಸ್‌ಗೆ ಅಪ್ಪಳಿಸಿರಬಹುದು” ಎಂದು ಅವರು ಹೇಳಿದ್ದಾರೆ.

ಕಿರಾನಾ ಹಿಲ್ಸ್ ಸರ್ಗೋಧಾದಿಂದ ಸುಮಾರು 10 ಕಿ.ಮೀ. ಉತ್ತರದಲ್ಲಿದ್ದು, ಪಾಕಿಸ್ತಾನದ ಸೇನೆಯ ಪ್ರಮುಖ ರಕ್ಷಣಾ ಮತ್ತು ಅಣು ಸಂಬಂಧಿತ ಮೂಲಸೌಕರ್ಯ ಪ್ರದೇಶವೆಂದು ಪರಿಗಣಿಸಲಾಗಿದೆ.

ಸ್ಕಾರ್ಡು ದಾಳಿಗೂ ಅನುಮತಿ!

ಆಪರೇಷನ್ ಸಿಂಧೂರ್ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸ್ಕಾರ್ಡು ಮೇಲೆ ದಾಳಿ ನಡೆಸಲು ಭಾರತೀಯ ವಾಯುಪಡೆಗೆ ಅನುಮತಿ ನೀಡಲಾಗಿತ್ತು ಎಂಬುದನ್ನೂ ಜನರಲ್ ಚೌಹಾಣ್ ಬಹಿರಂಗಪಡಿಸಿದ್ದಾರೆ.

“ಮುಖ್ಯಸ್ಥರು ಸರ್ಗೋಧಾ ಮೇಲೆ ದಾಳಿ ನಡೆಸಬೇಕೇ ಎಂದು ನನ್ನನ್ನು ಕೇಳಿದರು. ನಾನು ‘ಮುಂದುವರಿಯಿರಿ’ ಎಂದು ಹೇಳಿ, ಇನ್ನೂ ಎರಡು ಗುರಿಗಳನ್ನು ಗುರುತಿಸುವಂತೆ ಸೂಚಿಸಿದೆ. ಅವರು ಗುರುತಿಸಿದ ಗುರಿಗಳಲ್ಲಿ ಸ್ಕಾರ್ಡು ಕೂಡ ಒಂದು. ನಾವು ಅನುಮತಿ ನೀಡಿದ್ದೆವು. ಆದರೆ ಬಳಿಕ ಸ್ಕಾರ್ಡು ಪ್ರದೇಶದಲ್ಲಿ ಹವಾಮಾನ ಹದಗೆಟ್ಟಿದ್ದರಿಂದ ಗುರಿಯನ್ನು ಭೋಲಾರಿಗೆ ಬದಲಾಯಿಸಲಾಯಿತು” ಎಂದು ಅವರು ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯ ಗಾಂಧಿನಗರ ಮೂಲದ ಸೌತ್ ವೆಸ್ಟರ್ನ್ ಏರ್ ಕಮಾಂಡ್ ಭೋಲಾರಿಯಲ್ಲಿನ ಹ್ಯಾಂಗರ್ ಮೇಲೆ ದಾಳಿ ನಡೆಸಿತ್ತು. ಮೇ 10ರಂದು ನಡೆದ ವಾಯುದಾಳಿಯ ಪ್ರಮುಖ ದೃಶ್ಯಗಳಲ್ಲಿ ಈ ದಾಳಿಯೂ ಒಂದಾಗಿತ್ತು ಎನ್ನಲಾಗಿದೆ.

ರಾಷ್ಟ್ರೀಯ ವಾಹಿನಿಯೊಂದು ಪ್ರಸಾರ ಮಾಡಿದ್ದ ಉಪಗ್ರಹ ಚಿತ್ರಗಳಲ್ಲಿ ಹ್ಯಾಂಗರ್‌ನ ಮೇಲ್ಛಾವಣಿಯಲ್ಲಿ ದೊಡ್ಡ ಪ್ರಮಾಣದ ಹಾನಿ ಕಂಡುಬಂದಿತ್ತು. ಕಟ್ಟಡದ ಒಳಭಾಗ ಕುಸಿದಿರುವುದು ಹಾಗೂ ರನ್‌ವೇಗೆ ಸಂಪರ್ಕಿಸುವ ಪ್ರದೇಶದಲ್ಲಿ ಅವಶೇಷಗಳು ಹರಡಿಕೊಂಡಿರುವುದು ದಾಳಿಯ ತೀವ್ರತೆಯನ್ನು ತೋರಿಸಿತ್ತು. ಹಾನಿ ಮುಖ್ಯವಾಗಿ ಒಂದೇ ಕಟ್ಟಡಕ್ಕೆ ಸೀಮಿತವಾಗಿರುವುದು ದಾಳಿ ನಿಖರವಾಗಿ ನಡೆಸಲಾಗಿತ್ತು ಎಂಬುದನ್ನು ಸೂಚಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.