ಕಾಶ್ಮೀರಿ ಪಂಡಿತರ ನರಮೇಧ: 28 ವರ್ಷಗಳ ಬಳಿಕ Wandhama ಕೇಸ್ ಫೈಲ್ ರೀ-ಓಪನ್, ತನಿಖೆ ಪುನರಾರಂಭ..!
1998ರ ಜನವರಿ 25-26ರ ಮಧ್ಯರಾತ್ರಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ಉಗ್ರರು ಗಂದರ್ಬಲ್ ಜಿಲ್ಲೆಯ ವಂಧಾಮಾ ಗ್ರಾಮದ ಕಾಶ್ಮೀರಿ ಪಂಡಿತರ ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.

ಶ್ರೀನಗರ: ಕಾಶ್ಮೀರಿ ಪಂಡಿತರ ನರಮೇಧದ ಹಳೆಯ ಪ್ರಕರಣಗಳಿಗೆ ಮತ್ತೆ ಜೀವ ನೀಡುವ ಕಾರ್ಯಕ್ಕೆ ಜಮ್ಮು-ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಮುಂದಾಗಿದೆ.
1998ರಲ್ಲಿ ಗಂದರ್ಬಲ್ ಜಿಲ್ಲೆಯ ವಂಧಮಾದಲ್ಲಿ ನಡೆದ ಹತ್ಯಾಕಾಂಡದಲ್ಲಿ 23 ಕಾಶ್ಮೀರಿ ಪಂಡಿತರು ಬಲಿಯಾಗಿದ್ದ ಪ್ರಕರಣದ ಕಡತವನ್ನು ಸುಮಾರು 28 ವರ್ಷಗಳ ಬಳಿಕ ಮರು ತೆರೆದು ಎಸ್ಐಎ ತನಿಖೆ ಪುನರಾರಂಭಿಸಿದೆ.
ಹತ್ಯೆಯ ಹಿಂದಿರುವ ಸಂಚು ಹಾಗೂ ಕೃತ್ಯಕ್ಕೆ ಹೊಣೆಗಾರರನ್ನು ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದು ತನಿಖೆಯ ಪ್ರಮುಖ ಉದ್ದೇಶವಾಗಿದೆ.
1998ರ ಜನವರಿ 25-26ರ ಮಧ್ಯರಾತ್ರಿ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದ ಉಗ್ರರು ಗಂದರ್ಬಲ್ ಜಿಲ್ಲೆಯ ವಂಧಾಮಾ ಗ್ರಾಮದ ಕಾಶ್ಮೀರಿ ಪಂಡಿತರ ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಒಂಬತ್ತು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 23 ಮಂದಿ ಮೃತಪಟ್ಟಿದ್ದರು.
ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಗಂದರ್ಬಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದರೂ, ಪ್ರಕರಣ ಇದುವರೆಗೆ ಇತ್ಯರ್ಥವಾಗಿರಲಿಲ್ಲ. ಎಸ್ಐಎ ಇದೀಗ ಪ್ರಕರಣದ ತನಿಖೆಯನ್ನು ಪುನರಾರಂಭಿಸಿದೆ.
ಹತ್ಯಾಕಾಂಡದ ಹಿಂದಿರುವ ಸಂಚನ್ನು ಬಯಲಿಗೆಳೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು. ಸಾಕ್ಷಿಗಳು ನೀಡುವ ಹೇಳಿಕೆಗಳು ಹಾಗೂ ಲಭ್ಯವಾಗುವ ಪುರಾವೆಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲು ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸ ತನಿಖೆಯ ಭಾಗವಾಗಿ ಈ ಹಿಂದೆ ನಡೆದ ತನಿಖೆಯನ್ನು ಮರುಪರಿಶೀಲಿಸುವುದು, ಲಭ್ಯವಿರುವ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುವುದು ಹಾಗೂ ಪ್ರಕರಣದ ಘಟನೆಗಳ ಸರಮಾಲೆಯನ್ನು ಪತ್ತೆಹಚ್ಚಲು ಮತ್ತು ಆರೋಪಿಗಳನ್ನು ಗುರುತಿಸಲು ನೆರವಾಗಬಹುದಾದ ಹೊಸ ಸುಳಿವುಗಳನ್ನು ಹುಡುಕಲಾಗುತ್ತದೆ ಎಂದು ತಿಳಿಸಿದೆ.
ಉಗ್ರಗಾಮಿತ್ವದ ಆರಂಭಿಕ ವರ್ಷಗಳಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಮರುಪರಿಶೀಲಿಸುವ ಎಸ್ಐಎಯ ವ್ಯಾಪಕ ಕ್ರಮದ ಭಾಗವಾಗಿಯೇ ವಂಧಾಮಾ ಪ್ರಕರಣದ ತನಿಖೆಯನ್ನೂ ಪುನರಾರಂಭಿಸಲಾಗಿದೆ.
1990ರಲ್ಲಿ ಕಾಶ್ಮೀರಿ ಪಂಡಿತ ಕವಿ ಹಾಗೂ ಸಾಹಿತಿ ಸರ್ವಾನಂದ ಕೌಲ್ ಪ್ರೇಮಿ ಮತ್ತು ಅವರ ಪುತ್ರ ವೀರೇಂದ್ರ ಕೌಲ್ ಅವರನ್ನು ಉಗ್ರರು ಹತ್ಯೆ ಮಾಡಿದ ಪ್ರಕರಣದ ತನಿಖೆಯನ್ನೂ ಎಸ್ಐಎ ಈಗಾಗಲೇ ಕೈಗೆತ್ತಿಕೊಂಡಿದೆ.
ಆಗಸ್ಟ್ 12ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ ಎಸ್ಐಎ ಶೋಧ ನಡೆಸಿತ್ತು. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್ನಾಗ್ನ ಸೋಫ್ ಶಾಲಿ ಗ್ರಾಮದ ನಿವಾಸಿಗಳಾಗಿದ್ದ 65 ವರ್ಷದ ಸರ್ವಾನಂದ್ ಕೌಲ್ ಪ್ರೇಮಿ ಮತ್ತು ಅವರ 27 ವರ್ಷದ ಪುತ್ರ ವೀರೇಂದ್ರ (27) ಅವರನ್ನು 1990ರ ಮೇ ತಿಂಗಳಲ್ಲಿ ಉಗ್ರರು ಹತ್ಯೆ ಮಾಡಿದ್ದರು.
ಇದೇ ವರ್ಷದ ಜೂನ್ನಲ್ಲಿ ಕಾಶ್ಮೀರಿ ಪಂಡಿತ ನರ್ಸ್ ಸರಳಾ ಭಟ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಎ ನ್ಯಾಯಾಲಯಕ್ಕೆ 737 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು.
1990ರ ಏಪ್ರಿಲ್ 19ರಂದು ನಡೆದ ಈ ಹತ್ಯೆಯಲ್ಲಿ ಜೆಕೆಎಲ್ಎಫ್ ಅಧ್ಯಕ್ಷ ಮೊಹಮ್ಮದ್ ಯಾಸಿನ್ ಮಲಿಕ್ ಸೇರಿದಂತೆ ಜೆಕೆಎಲ್ಎಫ್ನ ನಾಲ್ವರು ಉಗ್ರರ ವಿರುದ್ಧ ಆರೋಪಪಟ್ಟಿಯಲ್ಲಿ ಹೆಸರು ದಾಖಲಿಸಲಾಗಿದೆ.
ಶ್ರೀನಗರದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SKIMS) ಸಿಬ್ಬಂದಿ ನರ್ಸ್ ಆಗಿದ್ದ ಸರಳಾ ಭಟ್ ಅವರನ್ನು 1990ರ ಏಪ್ರಿಲ್ 18ರಂದು ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದರು.
ಐವರು ಆರೋಪಿಗಳ ಪೈಕಿ ಮೂವರು ಮೃತಪಟ್ಟಿದ್ದಾರೆ. ಯಾಸಿನ್ ಮಲಿಕ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದು, ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ಎನ್ಐಎ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಖುರ್ಷಿದ್ ಅಹ್ಮದ್ ಚಲ್ಕೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿದ್ದಾನೆ ಎಂದು ನಂಬಲಾಗಿದೆ.
1990ರಲ್ಲಿ ಕಣಿವೆಯಲ್ಲಿ ಉಗ್ರಗಾಮಿತ್ವ ತೀವ್ರಗೊಂಡ ಬಳಿಕ ಕಾಶ್ಮೀರಿ ಪಂಡಿತರು ದೊಡ್ಡ ಸಂಖ್ಯೆಯಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದರು.
ಈ ನಡುವೆ ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಅಂದಿನ ಉಪಾಧ್ಯಕ್ಷ ಟಿಕಾ ಲಾಲ್ ಟಪ್ಲೂ ಹಾಗೂ ಜೆಕೆಎಲ್ಎಫ್ ಸಂಸ್ಥಾಪಕ ಮಕ್ಬೂಲ್ ಭಟ್ಗೆ ಮರಣದಂಡನೆ ವಿಧಿಸಿದ್ದ ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರ ಹತ್ಯೆ ಪ್ರಕರಣಗಳನ್ನೂ ಮರು ತನಿಖೆಗೆ ಕೈಗೆತ್ತಿಕೊಳ್ಳಲು ಎಸ್ಐಎ ಸಿದ್ಧತೆ ನಡೆಸುತ್ತಿದೆ.
ಟಪ್ಲೂ ಅವರನ್ನು 1989ರ ಸೆಪ್ಟೆಂಬರ್ 13ರಂದು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ನಿವೃತ್ತ ನ್ಯಾಯಮೂರ್ತಿ ಗಂಜೂ ಅವರನ್ನು 1989ರ ನವೆಂಬರ್ 4ರಂದು ಶ್ರೀನಗರದ ಹರಿ ಸಿಂಗ್ ಸ್ಟ್ರೀಟ್ನಲ್ಲಿ ಉಗ್ರರು ಹತ್ಯೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



