Youtuber ವೈಷ್ಣವಿ ಹತ್ಯೆ ಪ್ರಕರಣ: ತಂಗಿಯ ಭೀಕರ ಕೊಲೆಗೆ ಪ್ರತೀಕಾರ; ಜಾಮೀನಿನ ಮೇಲೆ ಹೊರಗಿದ್ದ ಭಾವನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಮೈದುನ..! Video
'ವೈಶು ಅಮ್ಮ' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತರಾಗಿದ್ದ 20 ವರ್ಷದ ವೈಷ್ಣವಿ, ಹರಿಬಾಬು (26) ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.

ಹೈದರಾಬಾದ್: ತೆಲಂಗಾಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸುವಂತಹ ಭೀಕರ ಸರಣಿ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ವೈಷ್ಣವಿ ಹತ್ಯೆಗೀಡಾದ ಕೆಲವೇ ತಿಂಗಳುಗಳಲ್ಲಿ, ಆಕೆಯ ಪತಿ ಹಾಗೂ ಹತ್ಯೆ ಪ್ರಕರಣದ ಆರೋಪಿಯಾಗಿರುವ ಹರಿಬಾಬುನನ್ನು ಜನನಿಬಿಡ ರಸ್ತೆಯಲ್ಲೇ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ತಂಗಿಯ ಸಾವಿಗೆ ಪ್ರತೀಕಾರವಾಗಿ ಈ ಕೊಲೆ ಮಾಡಿರುವುದಾಗಿ ವೈಷ್ಣವಿ ಸಹೋದರ ಸೆಲ್ಫಿ ವಿಡಿಯೋ ಮೂಲಕ ತಪ್ಪೊಪ್ಪಿಕೊಂಡಿದ್ದು, ಪೊಲೀಸರಿಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆ.
'ವೈಶು ಅಮ್ಮ' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತರಾಗಿದ್ದ 20 ವರ್ಷದ ವೈಷ್ಣವಿ, ಹರಿಬಾಬು (26) ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆಗಾಗಿ ಪತಿ ಹಾಗೂ ಆತನ ಕುಟುಂಬದವರು ವೈಷ್ಣವಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾರಂಭಿಸಿದ್ದರು ಎನ್ನಲಾಗುತ್ತಿದೆ.
ಈ ನಡುವೆ ಕಳೆದ ಮಾರ್ಚ್ 17 ರಂದು ಜಗ್ತಿಯಾಲ್ ಜಿಲ್ಲೆಯ ಮಾದಾಪುರದಲ್ಲಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ವೈಷ್ಣವಿಯನ್ನು ಪತಿ ಹರಿಬಾಬು ಚಾಕುವಿನಿಂದ ಇರಿದು, ಉಸಿರುಗಟ್ಟಿಸಿ ಕ್ರೂರವಾಗಿ ಕೊಂದಿದ್ದ.
ಮಗಳ ಕೊಲೆಯಿಂದ ಆಘಾತಕ್ಕೊಳಗಾಗಿದ್ದ ತಂದೆಯ ದೂರಿನ ಮೇರೆಗೆ ಪೊಲೀಸರು ಹರಿಬಾಬುನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ಜುಲೈ ತಿಂಗಳಲ್ಲಿ ನ್ಯಾಯಾಲಯದಿಂದ ಹರಿಬಾಬುಗೆ ಜಾಮೀನು ದೊರೆತಿತ್ತು. ಜೈಲಿನಿಂದ ಹೊರಬಂದ ಆತ ನಿಜಾಮಾಬಾದ್ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದನು.
ಇದರಂತೆ ಕಳೆದ ಗುರುವಾರ ಸಂಜೆ ಹರಿಬಾಬು ರಸ್ತೆ ಬದಿಯ ತಿನಿಸು ಅಂಗಡಿಯೊಂದರ ಬಳಿ ನಿಂತಿದ್ದಾಗ, ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಜನನಿಬಿಡ ರಸ್ತೆಯಲ್ಲೇ ಆತನ ಮೇಲೆ ಕೊಡಲಿ ಮತ್ತು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದ. ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ.
ಬಳಿಕ ಹರಿಬಾಬು ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ವೈಷ್ಣವಿ ಸಹೋದರ ಜಿ. ಸಂತೋಷ್ ಎಂಬಾತ ಸೋಶಿಯಲ್ ಮೀಡಿಯಾದಲ್ಲಿ ಸೆಲ್ಫಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದ.
ನನ್ನ ತಂಗಿ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕ್ರೂರವಾಗಿ ಕೊಂದವನಿಗೆ ನ್ಯಾಯಾಲಯ ಜಾಮೀನು ನೀಡಿತು. ನಮಗೆ ನ್ಯಾಯ ಸಿಗದಿದ್ದಾಗ ನಾನೇ ಪ್ರತೀಕಾರ ತೀರಿಸಿಕೊಂಡಿದ್ದೇನೆ. ಹರಿಬಾಬುನನ್ನು ನಾನೇ ಕೊಂದಿದ್ದೇನೆ. ಈಗ ನಾನು ಪೊಲೀಸರಿಗೆ ಶರಣಾಗುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾನೆ.
ಇದರ ಬೆನ್ನಲ್ಲೇ ಪೊಲೀಸರು ಸಂತೋಷ್‌ನನ್ನು ವಶಕ್ಕೆ ಪಡೆದಿದ್ದು, ಹತ್ಯೆಗೆ ಬಳಸಿದ ಕಾರು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಕುರಿತು ನಿಜಾಮಾಬಾದ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



