'ಲಕ್ಷಾಂತರ ಜನರು ಮಾಡಿದ ತಪ್ಪು ಇಂದು ಕೋಟ್ಯಂತರ ಜನರಿಗೆ ತೊಂದರೆಯಾಗಿ ಪರಿಣಮಿಸಿದೆ': DMK ಮುಖ್ಯಸ್ಥ ಎಂಕೆ ಸ್ಟಾಲಿನ್
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸ್ಟಾಲಿನ್, ದಿವಂಗತ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಸಹೋದರಿಯ ಪುತ್ರ ಅಮೃತಂ ಹಾಗೂ ಮಾಜಿ ಕೇಂದ್ರ ಸಚಿವರಾದ ಮುರಸೊಲಿ ಮಾರನ್ ಮತ್ತು ಮುರಸೊಲಿ ಸೆಲ್ವಂ ಅವರೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.

ಚೆನ್ನೈ: ತಮಿಳುನಾಡಿನಲ್ಲಿ ಉಂಟಾದ 'ಬದಲಾವಣೆ'ಯು 'ಕಹಿ ನಿರಾಶೆ'ಯಾಗಿ ಪರಿಣಮಿಸಿದೆ ಎಂದು ಹೇಳುವ ಮೂಲಕ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಸೋಮವಾರ ರಾಜ್ಯದ ಪರಿಸ್ಥಿತಿಯನ್ನು ಟೀಕಿಸಿದರು.
ಏಪ್ರಿಲ್ 2026ರ ವಿಧಾನಸಭಾ ಚುನಾವಣೆಯಲ್ಲಿ ಜನರು ಟಿವಿಕೆ ಪಕ್ಷಕ್ಕೆ ಮತ ನೀಡಿದರು ಮತ್ತು ವಿಜಯ್ ನೇತೃತ್ವದ ಟಿವಿಕೆ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿದ್ದರ ಕುರಿತು ಅವರು ಪರೋಕ್ಷವಾಗಿ ಪ್ರಸ್ತಾಪಿಸುತ್ತಿದ್ದರು.
ಸದ್ಯದ ಪರಿಸ್ಥಿತಿಗೆ ಕಾರಣವಾದ ಶಕ್ತಿಗಳನ್ನು ಅರ್ಥಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಯುವಜನರಿಗೆ ಕರೆ ನೀಡಿದ ಸ್ಟಾಲಿನ್, ಬದಲಾವಣೆಯನ್ನು ತರಲು ಮುಂಬರುವ ದಿನಗಳಲ್ಲಿ 'ಆಳವಾಗಿ ಯೋಚಿಸಿ ವಿವೇಕಯುತವಾಗಿ ವರ್ತಿಸುವಂತೆ' ಆಗ್ರಹಿಸಿದರು.
'ತಮಿಳುನಾಡಿನಲ್ಲಿ ಒಂದು ಬದಲಾವಣೆ ಸಂಭವಿಸಿತು, ಆದರೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಎ. ರಾಜಾ ಅವರು ಈ ಹಿಂದೆ ಹೇಳಿದಂತೆ, ಆ ಬದಲಾವಣೆ ಈಗ ನಿರಾಶೆಯಾಗಿ ಪರಿವರ್ತನೆಗೊಂಡಿದೆ. ಲಕ್ಷಾಂತರ ಜನರು ಮಾಡಿದ ತಪ್ಪೊಂದು ಇಂದು ಕೋಟ್ಯಂತರ ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. ಜೊತೆಗೆ, ಸಾಮಾಜಿಕ ಪ್ರಗತಿಗೆ ಕಾರಣವಾದ ಪರಿಸ್ಥಿತಿಯನ್ನು ಸೃಷ್ಟಿಸಿದವರು ಯಾರು ಎಂಬುದನ್ನು ಯುವ ಪೀಳಿಗೆ ಅರಿತುಕೊಳ್ಳಬೇಕೆಂದು' ಎಂದು ಸ್ಟಾಲಿನ್ ಹೇಳಿದರು.
ನಗರದಲ್ಲಿ ಹಿರಿಯ ಚಿತ್ರ ನಿರ್ಮಾಪಕರೂ ಹಾಗೂ ತಮ್ಮ ಆಪ್ತ ಸಂಬಂಧಿಯೂ ಆಗಿರುವ ಅಮೃತಂ ಅವರ ಮೊಮ್ಮಗಳು ಡಾ. ಇಲಕ್ಕಿಯಾ ಮತ್ತು ಡಾ. ಗಿರಿಧರ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿಎಂಕೆ ಮುಖ್ಯಸ್ಥರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಕೌಟುಂಬಿಕ ಸಮಾರಂಭವೊಂದನ್ನು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಲು ತಮಗೆ ಇಷ್ಟವಿಲ್ಲ ಎಂದು ಹೇಳಿದ ಸ್ಟಾಲಿನ್, ಹಿಂದಿನ ಕಲ್ಯಾಣ ನೀತಿಗಳು ಮತ್ತು ಸಾಮಾಜಿಕ ನ್ಯಾಯದ ಚಳುವಳಿಗಳ ಫಲವಾಗಿ ತಮ್ಮ ಕುಟುಂಬದಲ್ಲಿ ಹಲವು ತಲೆಮಾರುಗಳ ವೈದ್ಯರು ರೂಪುಗೊಂಡಿದ್ದಾರೆ; ಇಂದಿನ ಯುವಜನತೆ ಈ ಪರಂಪರೆಯನ್ನು ಹಲವು ಬಾರಿ ಕಡೆಗಣಿಸುತ್ತಾರೆ ಎಂದೂ ಅವರು ಅಭಿಪ್ರಾಯಪಟ್ಟರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸ್ಟಾಲಿನ್, ದಿವಂಗತ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಸಹೋದರಿಯ ಪುತ್ರ ಅಮೃತಂ ಹಾಗೂ ಮಾಜಿ ಕೇಂದ್ರ ಸಚಿವರಾದ ಮುರಸೊಲಿ ಮಾರನ್ ಮತ್ತು ಮುರಸೊಲಿ ಸೆಲ್ವಂ ಅವರೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಕರುಣಾನಿಧಿಯವರ ಮಕ್ಕಳ ಶಿಕ್ಷಣ ಮತ್ತು ವೃತ್ತಿಜೀವನವನ್ನು ರೂಪಿಸುವಲ್ಲಿ ಆ ಮೂವರು ಸಂಬಂಧಿಕರು ಪ್ರಮುಖ ಪಾತ್ರ ವಹಿಸಿದ್ದರು ಎಂದರು.
'ಮುರಸೋಲಿ ಮಾರನ್ ಶಾಂತ ಸ್ವಭಾವದವರಾಗಿದ್ದರೆ, ಮುರಸೋಲಿ ಸೆಲ್ವಂ ಮೃದು ಸ್ವಭಾವದವರಾಗಿದ್ದರು; ಆದರೆ ಅಮೃತಂ ಅವರು ಬಹಳ ಕಠಿಣ ಸ್ವಭಾವದವರಾಗಿದ್ದರು. ನಮ್ಮನ್ನು ಬೆಳೆಸುವಾಗ ಶಿಸ್ತು ಕಲಿಸಲು ಅವರು ನನ್ನ ಕೆನ್ನೆಗೆ ಹೊಡೆದಿದ್ದೂ ಉಂಟು' ಎಂದು ಸ್ಟಾಲಿನ್ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ, ಡಿಎಂಕೆ ಖಜಾಂಚಿ ಟಿ ಆರ್ ಬಾಲು, ಉಪ ಪ್ರಧಾನ ಕಾರ್ಯದರ್ಶಿ ಎ ರಾಜಾ, ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ, ಕವಿ ವೈರಮುತ್ತು, ಡಿಎಂಕೆ ಯುವ ಘಟಕದ ನಾಯಕ ಉದಯನಿಧಿ ಸ್ಟಾಲಿನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



