ವಿಧಾನಸಭೆಯಲ್ಲಿ ಸನ್ನೆ ವಿವಾದ: 'ರೀಲ್ಸ್ ಪೋಸ್ಟ್ ಮಾಡಿ ಸಿನಿಮಾ ಚಿತ್ರೀಕರಣದಂತೆ ಆಡಳಿತ'; ವಿಜಯ್ ವಿರುದ್ಧ ಸ್ಟಾಲಿನ್ ವಾಗ್ದಾಳಿ; Video
ವಿಜಯ್ ಅವರನ್ನು ತಂಬಿ ವಿಜಯ್ ಎಂದು ಸಂಬೋಧಿಸಿದ ಸ್ಟಾಲಿನ್, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ತಾವು ನಡೆಸಿದ ಹೋರಾಟ ಡಿಎಂಕೆಯ ಇತಿಹಾಸದ ಭಾಗವಾಗಿದೆ ಎಂದು ಹೇಳಿದರು.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಅನಗತ್ಯ ವಿವಾದಗಳ ಬಗ್ಗೆ ಮಾತನಾಡಬಾರದು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ತುರ್ತು ಪರಿಸ್ಥಿತಿಯ ಅವಧಿಯ ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ (MISA) ಕುರಿತು ವಿಜಯ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಸ್ಟಾಲಿನ್ ತಿರುಗೇಟು ನೀಡಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1976ರಲ್ಲಿ ತಮ್ಮ ಬಂಧನ ಮತ್ತು ಕಸ್ಟಡಿ ವೇಳೆ ತಾವು ಅನುಭವಿಸಿದ ಹಿಂಸೆಯನ್ನು ಅವರು ವಿಡಿಯೊ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ವಿವರಿಸಿದ್ದಾರೆ.
ವಿಜಯ್ ಅವರನ್ನು ತಂಬಿ ವಿಜಯ್ ಎಂದು ಸಂಬೋಧಿಸಿದ ಸ್ಟಾಲಿನ್, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ತಾವು ನಡೆಸಿದ ಹೋರಾಟ ಡಿಎಂಕೆಯ ಇತಿಹಾಸದ ಭಾಗವಾಗಿದೆ ಎಂದು ಹೇಳಿದರು. ಇತಿಹಾಸವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಮ್ಮ ಹೇಳಿಕೆಯನ್ನು ಅನುಮಾನಿಸುವವರು ವಿಧಾನಸಭೆಯ ಗ್ರಂಥಾಲಯದಲ್ಲಿರುವ ದಾಖಲೆಗಳನ್ನು ಪರಿಶೀಲಿಸಬಹುದು ಎಂದೂ ಕೂಡ ತಿರುಗೇಟು ನೀಡಿದರು.
ನೀವೇ ನಿರ್ಮಿಸಿದ ಸೇತುವೆಯ ಮೇಲೆ ನಿಂತು ಫೋಟೊಶೂಟ್‌ಗಳನ್ನು ಮಾಡುತ್ತಾ, ವಿಧಾನಸಭೆಯನ್ನೇ ರೀಲ್ಸ್ ಮಾಡುವ ಸ್ಥಳವನ್ನಾಗಿ ಮಾಡಿದ್ದೀರಿ. ಸಿನಿಮಾ ಚಿತ್ರೀಕರಣದಂತೆಯೇ ಆಡಳಿತವನ್ನೂ ನಡೆಸುತ್ತಿದ್ದೀರಿ. ನಿಮ್ಮ ಅಸಮರ್ಥ ಆಡಳಿತವನ್ನು ಮರೆಮಾಚಲು ಈ ರೀತಿಯ ವಿವಿಧ ರೀಲ್ಸ್‌ಗಳನ್ನು ಪೋಸ್ಟ್ ಮಾಡುತ್ತಾ ಇಡೀ ಒಂದು ಪೀಳಿಗೆಯನ್ನೇ ವಂಚಿಸುತ್ತಿದ್ದೀರಿ ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ MISA ಕುರಿತು ಮಾತನಾಡುವ ವೇಳೆ ತಾವು ಮಾಡಿದ್ದ ಕೈ ಸನ್ನೆ ಯಾವುದೇ ರೀತಿಯಲ್ಲೂ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ ಎರಡು ದಿನಗಳ ಬಳಿಕ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ. ವಿಜಯ್ ಅವರು ತಮ್ಮ ಕೈಯನ್ನು ದವಡೆಯ ಬಳಿ ಇರಿಸಿದ್ದ ಈ ಸನ್ನೆಯನ್ನು 1976ರಲ್ಲಿ ಬಂಧನದಲ್ಲಿದ್ದ ವೇಳೆ ಸ್ಟಾಲಿನ್ ಅವರ ದವಡೆಗೆ ಉಂಟಾದ ಗಾಯವನ್ನು ಉಲ್ಲೇಖಿಸುವ ರೀತಿಯಲ್ಲಿ ಮಾಡಲಾಗಿದೆ ಎಂದು ಡಿಎಂಕೆ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಬಂಧಿಸಲು ಪೊಲೀಸರು ಬಂದಿದ್ದರು’
1976ರಲ್ಲಿ ಡಿಎಂಕೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಹಾಗೂ MISA ಕಾಯ್ದೆಯನ್ನು ಖಂಡಿಸಿ ಮರೀನಾ ಬೀಚ್‌ನಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಸರ್ಕಾರವನ್ನು ವಜಾಗೊಳಿಸಿದ ಬಳಿಕ MISA ಅಡಿಯಲ್ಲಿ ತಮ್ಮನ್ನು ಬಂಧಿಸಲು ಪೊಲೀಸರು ಗೋಪಾಲಪುರಂನಲ್ಲಿರುವ ಕರುಣಾನಿಧಿ ಅವರ ನಿವಾಸಕ್ಕೆ ಬಂದಿದ್ದ ಘಟನೆಯನ್ನು ಅವರು ಸ್ಮರಿಸಿದರು. ಆಗ ತಾವು ಚುನಾವಣಾ ಪ್ರಚಾರದಲ್ಲಿದ್ದುದಾಗಿ ಸ್ಟಾಲಿನ್ ಹೇಳಿದರು.
ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕೇಂದ್ರ ಸರ್ಕಾರವು 1976ರ ಜನವರಿ 31ರಂದು ಡಿಎಂಕೆ ಸರ್ಕಾರವನ್ನು ವಜಾಗೊಳಿಸಿತು. ಸರ್ಕಾರವನ್ನು ವಜಾಗೊಳಿಸಿದ ಮರುಕ್ಷಣವೇ MISA ಕಾಯ್ದೆಯಡಿ ನನ್ನನ್ನು ಬಂಧಿಸಲು ಪೊಲೀಸರು ಗೋಪಾಲಪುರಂ ಮನೆಗೆ ಬಂದಿದ್ದರು ಎಂದು ಅವರು ತಮ್ಮ ವಿಡಿಯೊದಲ್ಲಿ ಹೇಳಿದ್ದಾರೆ.
ಸ್ಟಾಲಿನ್ ಅವರ ಪ್ರಕಾರ, ಕರುಣಾನಿಧಿ ಅವರು ತಮ್ಮ ಪುತ್ರ ಪ್ರಚಾರಕ್ಕೆ ತೆರಳಿದ್ದು ಮರುದಿನ ವಾಪಸ್ ಬರಲಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದರು. ಸ್ಟಾಲಿನ್ ಹಿಂದಿರುಗಿದ ಬಳಿಕ ಮತ್ತೆ ಬರುವಂತೆ ಪೊಲೀಸರಿಗೆ ಅವರು ಸೂಚಿಸಿದರು.
ನಾನು ಬಂದಾಗ ಅವರೇ ಪೊಲೀಸರಿಗೆ ಕರೆ ಮಾಡಿ ನನ್ನನ್ನು ಬಂಧಿಸುವಂತೆ ಹೇಳಿದರು, ನನ್ನನ್ನು MISA ಅಡಿಯಲ್ಲಿ ಬಂಧಿಸಲಾಯಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸವು ತಮ್ಮ ರಾಜಕೀಯ ಜೀವನದ ಪ್ರಮುಖ ಘಟನೆಯಾಗಿ ದೀರ್ಘಕಾಲದಿಂದ ಉಲ್ಲೇಖಿಸಲ್ಪಡುತ್ತಿದೆ ಎಂದು ಹೇಳಿದ್ದಾರೆ. ಸ್ಟಾಲಿನ್, ಮುರಸೋಲಿ ಮಾರನ್ ಮತ್ತು ಚಿಟ್ಟಿ ಬಾಬು ಸೇರಿದಂತೆ ಹಲವು ಹಿರಿಯ ಡಿಎಂಕೆ ನಾಯಕರನ್ನು ಬಂಧಿಸಲಾಗಿತ್ತು, ಕಸ್ಟಡಿ ವೇಳೆ ಹಿಂಸೆಗೆ ಒಳಪಡಿಸಲಾಗಿತ್ತು ಎಂದು ವರದಿಯಾಗಿದೆ.
ಜೈಲಿನಲ್ಲಿನ ಹಲ್ಲೆಯನ್ನು ಸ್ಮರಿಸಿದ ಸ್ಟಾಲಿನ್
ಜೈಲಿನಲ್ಲಿ ತಾವು ಎದುರಿಸಿದ ಪರಿಸ್ಥಿತಿಗಳ ಬಗ್ಗೆಯೂ ಸ್ಟಾಲಿನ್ ವಿವರಿಸಿದರು. ಬಂಧಿತರನ್ನು ಅತ್ಯಂತ ಅನೈರ್ಮಲ್ಯದಿಂದ ಕೂಡಿದ್ದ ಕೊಠಡಿಯಲ್ಲಿ ಇರಿಸಲಾಗಿತ್ತು, ಪೊಲೀಸರು ಹಾಗೂ ಇತರ ಕೈದಿಗಳಿಂದ ಪದೇಪದೇ ಹಲ್ಲೆಗೊಳಪಡಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ಹಲ್ಲೆಗಳಿಂದ ತಮ್ಮ ದವಡೆಗೆ ಗಾಯಗಳಾಗಿದ್ದು, ಅದರ ಗುರುತುಗಳು ಈಗಲೂ ಉಳಿದಿವೆ ಎಂದು ಸ್ಟಾಲಿನ್ ಹೇಳಿದರು.
ಡಿಎಂಕೆ ನಾಯಕ ಹಾಗೂ ಮದ್ರಾಸ್ ಮಾಜಿ ಮೇಯರ್ ಚಿಟ್ಟಿ ಬಾಬು ಅವರ ಸಾವಿನ ಬಗ್ಗೆಯೂ ಸ್ಟಾಲಿನ್ ಮಾತನಾಡಿದ್ದಾರೆ. ಜೈಲಿನಲ್ಲಿ ತೀವ್ರವಾಗಿ ಹಲ್ಲೆಗೊಳಗಾದ ಬಳಿಕ ಅವರು ಮೃತಪಟ್ಟರು. ತಮ್ಮ ಸೆರೆವಾಸದ ಸಂದರ್ಭದಲ್ಲಿ ತಮ್ಮ ಮೇಲೆ ಬೀಳಬೇಕಿದ್ದ ಹೊಡೆತಗಳನ್ನು ಚಿಟ್ಟಿ ಬಾಬು ಅವರು ತಡೆದುಕೊಂಡಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ.
ಅವರು ನಡೆಸಿದ ಹಲ್ಲೆಯಿಂದ ನನ್ನ ಆತ್ಮೀಯ ಸಹೋದರ, ಸಂಸತ್ ಸದಸ್ಯ ಚಿಟ್ಟಿ ಬಾಬು ಜೈಲಿನಲ್ಲೇ ಮೃತಪಟ್ಟರು. ಅವರ ಹಲ್ಲೆಯಿಂದ ನನ್ನ ದವಡೆ ಮೂಳೆ ಮುರಿಯಿತು. ನೀವು ಕೂಡ ಹೀಗೆ ದವಡೆಯ ಬಳಿ ಕೈ ಇಟ್ಟು ತೋರಿಸಿದ್ದೀರಿ ಅಲ್ಲವೇ? ಅದು ಸರಿ. ಇಂದಿಗೂ ನಾನು ಅನುಭವಿಸಿದ ಹಲ್ಲೆಗಳ ಗಾಯದ ಗುರುತುಗಳು ನನ್ನ ಬಳಿ ಇವೆ. ಇಲ್ಲ ಎಂದು ನಾನು ಹೇಳುತ್ತಿಲ್ಲ ಎಂದು ಸ್ಟಾಲಿನ್ ವಿಡಿಯೊದಲ್ಲಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




