'ಏನೇನ್ ಮಾಡ್ತಾರೋ ಗೊತ್ತಿಲ್ಲ': Donald Trump 'ಅನಿರೀಕ್ಷಿತ ವರ್ತನೆ' ಬಗ್ಗೆ ಎಚ್ಚರಿಕೆ: ಮೋದಿ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಗೆ ಭಾರತ ಹಿಂದೇಟು!
ಜೂನ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಲು ಭಾರತ ಆಸಕ್ತಿ ಹೊಂದಿರಲಿಲ್ಲ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಅನಿರೀಕ್ಷಿತ ವರ್ತನೆ’ ಬಗ್ಗೆ ಎಚ್ಚರಿಕೆ ವಹಿಸಿದ್ದ ಭಾರತ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಬಳಿಕ ಜಂಟಿ ಮಾಧ್ಯಮ ಸಂವಾದ ನಡೆಸದಿರಲು ಆದ್ಯತೆ ನೀಡಿತ್ತು ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಜೂನ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಲು ಭಾರತ ಆಸಕ್ತಿ ಹೊಂದಿರಲಿಲ್ಲ. ಈ ವಿಚಾರವನ್ನು ಸಭೆಗೂ ಮುನ್ನವೇ ಅಮೆರಿಕದ ಕಡೆಯವರಿಗೆ ತಿಳಿಸಲಾಗಿತ್ತು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ ಬೆನ್ನಲ್ಲೇ ಇದೀಗ ಭಾರತ ಸರ್ಕಾರದ ಮೂಲಗಳು ಸ್ಪಷ್ಟನೆ ನೀಡಿವೆ.
ಸರ್ಕಾರಿ ಮೂಲಗಳ ಪ್ರಕಾರ, ಉನ್ನತ ನಾಯಕರ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಾಧ್ಯಮ ಸಂವಾದಕ್ಕೆ ಸಂಬಂಧಿಸಿದ ವ್ಯವಸ್ಥೆಗಳ ಕುರಿತು ಸಭೆಗೂ ಮುನ್ನ ಚರ್ಚಿಸುವುದು ಸಾಮಾನ್ಯ ರಾಜತಾಂತ್ರಿಕ ಪ್ರಕ್ರಿಯೆಯಾಗಿದೆ.
ಟ್ರಂಪ್-ಮೋದಿ ಭೇಟಿ ಎಲ್ಲಿ ನಡೆದಿತ್ತು?
ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರು ಜೂನ್ 17ರಂದು ಫ್ರಾನ್ಸ್‌ನ ಎವಿಯನ್-ಲೆ-ಬೈನ್‌ನಲ್ಲಿ ಜಿ7 ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಕೆಲವು ಬಿಕ್ಕಟ್ಟುಗಳು ಎದುರಾಗಿದ್ದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿತ್ತು. ಇದೀಗ ಭಾರತ-ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಅನಿಶ್ಚಿತತೆ ಮುಂದುವರಿದಿರುವ ಸಂದರ್ಭದಲ್ಲೇ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
‘ಮಾಧ್ಯಮದ ಪ್ರಶ್ನೆಗಳು ಬೇಡ’ ಎಂದಿದ್ದ ಭಾರತ
ದೆಹಲಿಯಲ್ಲಿ ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕ ರಾಯಭಾರಿ ಗೋರ್, ಮೋದಿ-ಟ್ರಂಪ್ ಭೇಟಿಗೂ ಮುನ್ನ ನಡೆದ ಮಾತುಕತೆಯನ್ನು ನೆನಪಿಸಿಕೊಂಡರು. ಟ್ರಂಪ್ ಅವರು ಭೇಟಿಗೂ ಮುನ್ನ ಭಾರತೀಯ ನಿಯೋಗ ಯಾವ ವಿಷಯಗಳನ್ನು ಪ್ರಸ್ತಾಪಿಸಬಹುದು ಮತ್ತು ಯಾವುದೇ ನಿರ್ದಿಷ್ಟ ಮನವಿ ಇದೆಯೇ ಎಂದು ತಮ್ಮನ್ನು ಕೇಳಿದ್ದರು ಎಂದು ಗೋರ್ ಹೇಳಿದ್ದಾರೆ.
ಅದಕ್ಕೆ ತಾನು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪರವಾಗಿ ಒಂದೇ ಮನವಿಯಿದೆ. ಮಾಧ್ಯಮದವರಿಂದ ಯಾವುದೇ ಪ್ರಶ್ನೆಗಳಿಗೆ ಅವಕಾಶ ನೀಡದಿರುವುದು ಭಾರತದ ಆದ್ಯತೆ ಎಂದು ತಿಳಿಸಿದ್ದಾಗಿ ಗೋರ್ ಹೇಳಿದ್ದಾರೆ. ಇದಕ್ಕೆ ಟ್ರಂಪ್ ‘ಸರಿ, ಯಾವುದೇ ಸಮಸ್ಯೆಯಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಆದರೆ ಸಭೆ ಮುಗಿದ ಬಳಿಕ ಟ್ರಂಪ್ ಪತ್ರಕರ್ತರಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದು, ಸುಮಾರು 45 ನಿಮಿಷಗಳ ಕಾಲ ಮಾಧ್ಯಮ ಸಂವಾದ ನಡೆದಿತ್ತು ಎಂದು ಗೋರ್ ಹೇಳಿದ್ದಾರೆ. ಮೋದಿ ಮತ್ತು ಟ್ರಂಪ್ ಭೇಟಿಯ ಬಳಿಕ ಮಾಧ್ಯಮದ ಮುಂದೆ ಸಂಕ್ಷಿಪ್ತವಾಗಿ ಕಾಣಿಸಿಕೊಂಡಾಗ ಸುಮಾರು 50 ಕ್ಯಾಮೆರಾಗಳು ಅಲ್ಲಿದ್ದವು. ಬಳಿಕ ಟ್ರಂಪ್ ಕ್ಯಾಮೆರಾಗಳತ್ತ ತಿರುಗಿ, ‘ಯಾವುದಾದರೂ ಪ್ರಶ್ನೆಗಳಿವೆಯೇ?’ ಎಂದು ಕೇಳಿದರು ಎಂದು ಗೋರ್ ವಿವರಿಸಿದ್ದಾರೆ. ನಂತರ ನಡೆದ ಸಂವಾದದಲ್ಲಿ ಹಲವು ವಿಚಾರಗಳ ಕುರಿತು ಪ್ರಶ್ನೋತ್ತರಗಳು ನಡೆದವು ಎಂದು ಅವರು ಹೇಳಿದ್ದಾರೆ.
‘ಟ್ರಂಪ್ ವರ್ತನೆ ಅನಿರೀಕ್ಷಿತ’
ಅಮೆರಿಕ ರಾಯಭಾರಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸರ್ಕಾರಿ ಮೂಲವೊಂದು, ಟ್ರಂಪ್ ಅವರ ‘ಅನಿರೀಕ್ಷಿತ ವರ್ತನೆ’ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗುವ ವಿದೇಶಿ ನಿಯೋಗಗಳು ಸಾಮಾನ್ಯವಾಗಿ ಎಚ್ಚರಿಕೆ ವಹಿಸುತ್ತವೆ ಎಂದು ಹೇಳಿದೆ.
ಟ್ರಂಪ್ ಅವರು ದಕ್ಷಿಣ ಆಫ್ರಿಕಾ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ನಡೆಸಿದ ಸಂವಾದಗಳನ್ನು ಇದಕ್ಕೆ ಉದಾಹರಣೆಯಾಗಿ ಮೂಲ ಉಲ್ಲೇಖಿಸಿದೆ. “ಹೀಗಾಗಿಯೇ ಭಾರತವೂ ಎಚ್ಚರಿಕೆಯ ನಿಲುವು ತೆಗೆದುಕೊಂಡಿತ್ತು” ಎಂದು ಸರ್ಕಾರಿ ಮೂಲ ತಿಳಿಸಿದೆ.
ಮತ್ತೊಂದು ಸರ್ಕಾರಿ ಮೂಲದ ಪ್ರಕಾರ, ಉನ್ನತ ಮಟ್ಟದ ನಾಯಕರ ಭೇಟಿಗೂ ಮುನ್ನ ಸಾರ್ವಜನಿಕವಾಗಿ ನಾಯಕರು ಹೇಗೆ ಕಾಣಿಸಿಕೊಳ್ಳಬೇಕು, ಮಾಧ್ಯಮ ಸಂವಾದ ಹೇಗಿರಬೇಕು ಎಂಬ ಕುರಿತು ಚರ್ಚಿಸುವುದು ಸಂಪೂರ್ಣ ಸಾಮಾನ್ಯ ಪ್ರಕ್ರಿಯೆಯಾಗಿದೆ.
“ಯಾವುದೇ ವಿವಿಐಪಿ ಭೇಟಿಗೂ ಮುನ್ನ ನಾಯಕರ ಸಾರ್ವಜನಿಕ ಕಾರ್ಯಕ್ರಮಗಳ ವ್ಯವಸ್ಥೆ ಕುರಿತು ಚರ್ಚಿಸುವುದು ಸಾಮಾನ್ಯ ಪದ್ಧತಿ. ಈ ಹಿನ್ನೆಲೆಯಲ್ಲಿ ಇಂತಹ ಭೇಟಿಗಳಿಗೆ ಸಂಬಂಧಿಸಿದ ತನ್ನ ಪ್ರಮಾಣಿತ ಅಭ್ಯಾಸವನ್ನು ಭಾರತೀಯ ಕಡೆಯವರು ಅಮೆರಿಕಕ್ಕೆ ತಿಳಿಸಿದ್ದರು” ಎಂದು ಮೂಲ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



