RSS ಮೇಲೆ ನಿರ್ಬಂಧ ಹೇರುವಂತೆ ಕೋರಿದ ಅಮೆರಿಕದ USCIRF; 'ಇದೊಂದು ಅಜೆಂಡಾ' ಎಂದು ಟೀಕಿಸಿದ ಭಾರತ
ಈ ಅಮೆರಿಕದ ಸಂಸ್ಥೆಯು ಭಾರತದ ಕುರಿತು 'ಅಪಮಾನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು' ನೀಡುತ್ತಾ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ನಿರ್ಬಂಧ ವಿಧಿಸುವಂತೆ ಆಗ್ರಹಿಸಿರುವ 'ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಅಮೆರಿಕದ ಆಯೋಗ'ವನ್ನು (USCIRF) ಭಾರತ ಟೀಕಿಸಿದ್ದು, ಅದನ್ನು 'ಪಕ್ಷಪಾತಿ ಸಂಘಟನೆ' ಎಂದು ಕರೆದಿದೆ.
ಈ ಅಮೆರಿಕದ ಸಂಸ್ಥೆಯು ಭಾರತದ ಕುರಿತು 'ಅಪಮಾನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು' ನೀಡುತ್ತಾ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
'ಇದೊಂದು ಪಕ್ಷಪಾತದ ಸಂಘಟನೆ. ಇಂತಹ ಸಂಘಟನೆಗಳು ತಮ್ಮದೇ ಆದ ಕಾರ್ಯಸೂಚಿಯನ್ನು ಹೊಂದಿರುತ್ತವೆ ಮತ್ತು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿರುವುದಿಲ್ಲ, ಆದ್ದರಿಂದ ನಾವು ಅವುಗಳಿಂದ ದೂರವಿರಬೇಕು ಎಂದು ನಾನು ಹೇಳುತ್ತೇನೆ... ಭಾರತದ ಬಹುತ್ವದ ಚೌಕಟ್ಟಿನ ವಾಸ್ತವತೆಯನ್ನು USCIRF ಪರಿಗಣಿಸುತ್ತದೆ ಅಥವಾ ಇಲ್ಲಿನ ವೈವಿಧ್ಯಮಯ ಸಮುದಾಯಗಳ ಸಾಮರಸ್ಯದ ಸಹಬಾಳ್ವೆಯನ್ನು ಒಪ್ಪಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ' ಎಂದು ಜೈಸ್ವಾಲ್ ಹೇಳಿದರು.
ಪಾಕಿಸ್ತಾನದಲ್ಲಿ ಜನಿಸಿದ ಮತ್ತು ತಮ್ಮ ತಾಯ್ನಾಡಿನ ರಾಜಕೀಯ ಹಾಗೂ ರಾಜತಾಂತ್ರಿಕ ನಾಯಕತ್ವದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಮೆರಿಕದ ಪ್ರಜೆಯಾಗಿರುವ USCIRF ಅಧ್ಯಕ್ಷ ಆಸಿಫ್ ಮಹಮೂದ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮುಂಬರುವ ಅಮೆರಿಕ ಭೇಟಿಯನ್ನು ವಿರೋಧಿಸಿದ್ದಾರೆ ಹಾಗೂ ಆರ್‌ಎಸ್‌ಎಸ್ ಮೇಲೆ ನಿರ್ಬಂಧಗಳನ್ನು ವಿಧಿಸುವಂತೆ ಅಮೆರಿಕ ಸರ್ಕಾರಕ್ಕೆ ಕರೆ ನೀಡಿದ್ದಾರೆ. ಭಾಗವತ್ ಅವರು ಆಗಸ್ಟ್ 29 ರಂದು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ.
ಆರ್‌ಎಸ್‌ಎಸ್ (RSS) ನಾಯಕರಿಗೆ ವಿಶೇಷ ರಾಜತಾಂತ್ರಿಕ ಗೌರವ ಅಥವಾ ಸವಲತ್ತುಗಳನ್ನು ನೀಡದಂತೆ ಯುಎಸ್ ಸಂಸ್ಥೆಯು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ, ಆರ್‌ಎಸ್‌ಎಸ್ ಅನ್ನು ಒಂದು 'ಸ್ವತಂತ್ರ ಸಂಘಟನೆ' (umbrella organisation) ಎಂದು ಕರೆದಿದ್ದು, ಅದರೊಂದಿಗೆ ಗುರುತಿಸಿಕೊಂಡಿರುವ ಕೆಲವು ಗುಂಪುಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸಿವೆ ಎಂದು ತಿಳಿಸಿದೆ.
'ಹೀಗಾಗಿ, ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯ (FoRB) ಉಲ್ಲಂಘನೆಗಳಿಗೆ ಕಾರಣರಾದ ಆರ್‌ಎಸ್‌ಎಸ್ ಸದಸ್ಯರ ಮೇಲೆ ನಿರ್ಬಂಧಗಳನ್ನು ವಿಧಿಸುವತ್ತ ಅಮೆರಿಕ ಸರ್ಕಾರವು ಗಮನಹರಿಸಬೇಕು' ಎಂದು ಸಂಸ್ಥೆಯು ಹೇಳಿದೆ.
ಇದಕ್ಕೂ ಮುನ್ನ ಮಾರ್ಚ್‌ನಲ್ಲಿ, USCIRF ತನ್ನ ವಾರ್ಷಿಕ ವರದಿಯಲ್ಲಿ ಭಾರತದಲ್ಲಿ 'ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ' ನಡೆದಿದೆ ಎಂದು ಟೀಕಿಸಿತ್ತು. ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ (RSS) ಮತ್ತು 'ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್' (RAW) ನಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವುಗಳ ಮೇಲೆ 'ನಿರ್ದಿಷ್ಟ ನಿರ್ಬಂಧಗಳನ್ನು' ವಿಧಿಸುವಂತೆ ಬೆಂಬಲಿಸಿತ್ತು. ತನ್ನ ಶಿಫಾರಸಿನಲ್ಲಿ, ಭಾರತವನ್ನು 'ವಿಶೇಷ ಕಳವಳಕಾರಿ ದೇಶ' (country of particular concern) ಎಂದು ಘೋಷಿಸುವಂತೆಯೂ ಆಗ್ರಹಿಸಿತ್ತು.
USCIRF ಎಂಬುದು ಅಮೆರಿಕದ ಸ್ವತಂತ್ರ ಹಾಗೂ ಉಭಯ ಪಕ್ಷಗಳ ಬೆಂಬಲವನ್ನು ಹೊಂದಿರುವ ಫೆಡರಲ್ ಸರ್ಕಾರಿ ಸಂಸ್ಥೆಯಾಗಿದೆ. ಇದು ಅಮೆರಿಕದ ಅಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ ಮತ್ತು ಕಾಂಗ್ರೆಸ್‌ಗೆ ನೀತಿ ಶಿಫಾರಸುಗಳನ್ನು ಮಾಡುತ್ತದೆ ಹಾಗೂ ಅವುಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
ಅಮೆರಿಕ ಮೂಲದ 'ಹಿಂದೂಪ್ಯಾಕ್ಟ್' (HinduPACT) ಎಂಬ ವಕೀಲರ ಗುಂಪು, ಆರ್‌ಎಸ್‌ಎಸ್ ಮುಖ್ಯಸ್ಥರ ನ್ಯೂಯಾರ್ಕ್ ಭೇಟಿಯನ್ನು ಯುಎಸ್‌ಸಿಐಆರ್‌ಎಫ್ (USCIRF) ಸದಸ್ಯರು ಸಾರ್ವಜನಿಕವಾಗಿ ವಿರೋಧಿಸಿರುವುದನ್ನು ಖಂಡಿಸಿದೆ; ಈ ಅಮೆರಿಕನ್ ಸಂಸ್ಥೆಯು ತನ್ನ 'ಅಧಿಕೃತ ಕಾರ್ಯವ್ಯಾಪ್ತಿಯ ಘನತೆಗೆ ಕುಂದು ತಂದಿದೆ' ಎಂದು ಅದು ಹೇಳಿದೆ.
'ಆ ಆಯೋಗದ ಅಧ್ಯಕ್ಷರು ಭಾರತ ಮತ್ತು ಆರ್‌ಎಸ್‌ಎಸ್ ಕುರಿತು ಮಾತನಾಡುವಾಗ, ಅವರು ವೈವಿಧ್ಯತೆಯನ್ನು ಗೌರವಿಸುವ ಅಮೆರಿಕನ್ ಆಯೋಗದ ಮುಖ್ಯಸ್ಥರಂತೆ ಭಾಸವಾಗುವುದಿಲ್ಲ; ಬದಲಾಗಿ, ಕಠಿಣವಾದ ಹಿಂದೂ-ವಿರೋಧಿ ನಿಲುವಿನ ವಕ್ತಾರರಂತೆ ಕಾಣುತ್ತಾರೆ... ಮೋಹನ್ ಭಾಗವತ್ ಅವರು ವಿಶ್ವದ ಅತ್ಯಂತ ಪ್ರಭಾವಶಾಲಿ ಹಿಂದೂ ಸಂಘಟನೆಗಳಲ್ಲಿ ಒಂದನ್ನು ಮುನ್ನಡೆಸುತ್ತಿದ್ದಾರೆ. ಹಿಂದೂಗಳ ಸ್ವಾಭಿಮಾನಿ ನಿಲುವನ್ನು 'ಉಗ್ರವಾದ' ಎಂದು ಬಿಂಬಿಸುವುದನ್ನೇ ಚಾಳಿಯನ್ನಾಗಿಸಿಕೊಂಡಿರುವ CAIR, IAMC ಮತ್ತು HfHR ನಂತಹ ಗುಂಪುಗಳು ರೂಪಿಸಿದ ಅಪಪ್ರಚಾರದ ಮೂಲಕ ಅವರನ್ನು ಎದುರಿಸಬಾರದು' ಎಂದು ಹಿಂದೂಪ್ಯಾಕ್ಟ್‌ನ ಸ್ಥಾಪಕ ಮತ್ತು ಅಧ್ಯಕ್ಷರಾದ ಅಜಯ್ ಶಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



