Instagram ಪೋಸ್ಟ್, ಹಿಂದೂ ಆಚರಣೆಗೆ ಅವಮಾನ: ಸ್ವಿಸ್ ಪ್ರವಾಸಿಗನಿಗೆ 1 ವರ್ಷ ಜೈಲು ಶಿಕ್ಷೆ ಹೇರಿದ Bali ನ್ಯಾಯಾಲಯ
ಬೀಚ್ನಿಂದ ವಿಡಿಯೋ ಮಾಡಿದ್ದ ಜ್ಗ್ರಾಗೆನ್, ನ್ಯೆಪಿ ಆಚರಣೆಯ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ.

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಹಿಂದೂಗಳ ಪ್ರಮುಖ ‘ನ್ಯೆಪಿ’ (Nyepi) ಆಚರಣೆಯ ನಿಯಮಗಳನ್ನು ಉಲ್ಲಂಘಿಸಿ, ಅದನ್ನು ಅವಹೇಳನಕಾರಿ ರೀತಿಯಲ್ಲಿ Instagramನಲ್ಲಿ ಪೋಸ್ಟ್ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 26 ವರ್ಷದ ಸ್ವಿಸ್ ಪ್ರವಾಸಿಗನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸ್ವಿಟ್ಜರ್ಲ್ಯಾಂಡ್ ಮೂಲದ ನಿರ್ಮಾಣ ಕಾರ್ಮಿಕ ಲುಜಿಯಾನ್ ಆಂಡ್ರಿನ್ ಜ್ಗ್ರಾಗೆನ್ (Luzian Andrin Zgraggen) ಶಿಕ್ಷೆಗೆ ಗುರಿಯಾದ ಪ್ರವಾಸಿಗ. ನ್ಯೆಪಿ ಆಚರಣೆಯ ಸಂದರ್ಭದಲ್ಲಿ ಜನರು ಮನೆಯಲ್ಲೇ ಇದ್ದು ಮೌನ, ಉಪವಾಸ ಮತ್ತು ಧ್ಯಾನದಲ್ಲಿ ತೊಡಗಿರುತ್ತಾರೆ.
ಈ ವೇಳೆ ಇಡೀ ಬಾಲಿ ದ್ವೀಪವೇ ಬಹುತೇಕ ಸಂಪೂರ್ಣವಾಗಿ ಸ್ಥಬ್ದವಾಗಿರುತ್ತದೆ. ಆದರೆ ಜ್ಗ್ರಾಗೆನ್ ಈ ನಿಯಮಗಳನ್ನು ಉಲ್ಲಂಘಿಸಿ ಬೀಚ್ಗೆ ತೆರಳಿ, ಅಲ್ಲಿಂದ ವಿಡಿಯೋ ಚಿತ್ರೀಕರಿಸಿ Instagram ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾನೆ.
‘ಯಾರೂ ಇಲ್ಲ, ಎಲ್ಲವೂ ಕತ್ತಲು’ ಎಂದಿದ್ದ ಪ್ರವಾಸಿಗ
ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೀಚ್ನಿಂದ ವಿಡಿಯೋ ಮಾಡಿದ್ದ ಜ್ಗ್ರಾಗೆನ್, ನ್ಯೆಪಿ ಆಚರಣೆಯ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ, “ನಾನು ಬೀಚ್ಗೆ ಬಂದಿದ್ದೇನೆ. ಅವರು ನನ್ನನ್ನು ಹಿಡಿಯಲಿಲ್ಲ. ಸಂಪೂರ್ಣ ಕತ್ತಲಾಗಿದೆ. ಇಲ್ಲಿ ಯಾರೂ ಇಲ್ಲ” ಎಂದು ಹೇಳಿರುವುದು ದಾಖಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಬಾಲಿ ನಿವಾಸಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಬಳಿಕ ಪೊಲೀಸರು ಜ್ಗ್ರಾಗೆನ್ನನ್ನು ಬಂಧಿಸಿದ್ದಾರೆ.
ಏನಿದು Nyepi ಆಚರಣೆ?
ನ್ಯೆಪಿ ಬಾಲಿಯ ಹಿಂದೂಗಳ ಪ್ರಮುಖ ವಾರ್ಷಿಕ ಆಚರಣೆ. ಇದನ್ನು ‘Day of Silence’ (ಮೌನದ ದಿನ) ಎಂದೂ ಕರೆಯಲಾಗುತ್ತದೆ. ಈ ದಿನ ಬಾಲಿ ದ್ವೀಪದಲ್ಲಿ ಜನರು 24 ಗಂಟೆಗಳ ಕಾಲ ಮನೆಯಿಂದ ಹೊರಗೆ ಬರದೆ ಮೌನ, ಉಪವಾಸ ಮತ್ತು ಧ್ಯಾನದಲ್ಲಿ ತೊಡಗುತ್ತಾರೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ದ್ವೀಪದಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ.
ಇಂಟರ್ನೆಟ್ ಸೇವೆಗೆ ನಿರ್ಬಂಧ ಹೇರಲಾಗಿರುತ್ತದೆ. ಮಾತ್ರವಲ್ಲದೆ ಬಾಲಿ ವಿಮಾನ ನಿಲ್ದಾಣವೂ ಮುಚ್ಚಿರುತ್ತದೆ. ವಿದ್ಯುತ್ ಬಳಕೆಯ ಮೇಲೂ ನಿರ್ಬಂಧ ಮತ್ತು ಜನರು ಮನೆಯಿಂದ ಹೊರಗೆ ಹೋಗುವಂತಿಲ್ಲ. ಈ ನಿಯಮಗಳು ಧರ್ಮದ ಆಧಾರದ ಮೇಲೆ ಮಾತ್ರವಲ್ಲದೆ ಪ್ರವಾಸಿಗರೂ ಸೇರಿದಂತೆ ಬಾಲಿಯಲ್ಲಿರುವ ಎಲ್ಲರಿಗೂ ಅನ್ವಯಿಸುತ್ತವೆ.
‘ಬಾಲಿ ಜನರ ನಂಬಿಕೆಗೆ ಧಕ್ಕೆ’ ಆರೋಪ
ನ್ಯಾಯಾಲಯದಲ್ಲಿ ತೀರ್ಪು ನೀಡುವ ವೇಳೆ ನ್ಯಾಯಾಧೀಶರು, ಆರೋಪಿಯ ಕೃತ್ಯವು ಬಾಲಿ ಜನರಿಗೆ ನೋವುಂಟು ಮಾಡಿದ್ದು, ಅವರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದೆ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಆದರೆ ಜ್ಗ್ರಾಗೆನ್, ನ್ಯೆಪಿ ಆಚರಣೆಯ ನಿಯಮಗಳ ಗಂಭೀರತೆ ತನಗೆ ತಿಳಿದಿರಲಿಲ್ಲ ಮತ್ತು ಆಚರಣೆ ಅಥವಾ ಬಾಲಿ ಜನರನ್ನು ಅವಮಾನಿಸುವ ಉದ್ದೇಶ ತನ್ನದಾಗಿರಲಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾನೆ. “ನಾನು ಮಾಡಿದ ಕೃತ್ಯಕ್ಕೆ ತುಂಬಾ ವಿಷಾದಿಸುತ್ತೇನೆ. ಬಾಲಿ ಜನರಲ್ಲಿ ಕ್ಷಮೆ ಕೇಳುತ್ತೇನೆ,” ಎಂದು ಆತ ನ್ಯಾಯಾಲಯದಲ್ಲಿ ಹೇಳಿದ್ದಾನೆ.
ವಿದೇಶಿ ಪ್ರವಾಸಿಗರಿಗೂ ಕಠಿಣ ನಿಯಮ
ನ್ಯೆಪಿ ಆಚರಣೆಯ ಸಂದರ್ಭದಲ್ಲಿ ಬಾಲಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಾರೆ. ನಿಯಮ ಉಲ್ಲಂಘಿಸುವ ವಿದೇಶಿ ಪ್ರವಾಸಿಗರಿಗೆ ಬಂಧನ, ಗಡಿಪಾರು ಅಥವಾ ಸ್ಥಳೀಯ ಸಂಪ್ರದಾಯದ ಪ್ರಕಾರ ದಂಡ ವಿಧಿಸುವ ಸಾಧ್ಯತೆ ಇದೆ.
ಬಾಲಿಗೆ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಸುಮಾರು 70 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ನಿಯಮಗಳ ಉಲ್ಲಂಘನೆಯ ಘಟನೆಗಳೂ ಹೆಚ್ಚಾಗುತ್ತಿವೆ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



